- ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸಿ: ಜಿಲ್ಲಾ ಅಧ್ಯಕ್ಷ ಇಬ್ರಾಹಿಂ ಹೇಳಿಕೆ ।
- - -
ಕನ್ನಡಪ್ರಭ ವಾರ್ತೆ ಜಗಳೂರುಪಕ್ಷಕ್ಕಾಗಿ ಯಾರು ದುಡಿದಿದ್ದಾರೆ, ಯಾರಿಗೆ ಯಾವ ಜವಾಬ್ದಾರಿ ನೀಡಬೇಕು ಎಂಬುದನ್ನು ಕೆಪಿಸಿಸಿ ಅಧ್ಯಕ್ಷರು ನಿರ್ಧರಿಸಲಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ಕಲೀಲುಲ್ಲಾ ಹೇಳಿದರು.
ಶಾಸಕ ಬಿ.ದೇವೇಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿ, ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಎದುರಾದ ಸೋಲನ್ನು ಆತ್ಮಾವಲೋಕನದ ಅವಕಾಶವಾಗಿ ಸ್ವೀಕರಿಸಿ, ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ಚುನಾವಣೆಗಳಲ್ಲಿ ಒಗ್ಗಟ್ಟಿನ ಶಕ್ತಿಯಿಂದ ಗೆಲುವು ಸಾಧಿಸಲು ಕಾಂಗ್ರೆಸ್ ಸಜ್ಜಾಗಬೇಕಿದೆ. ವೈಯಕ್ತಿಕ ಆಕಾಂಕ್ಷೆ, ಗುಂಪುಗಾರಿಕೆ ಮತ್ತು ಆಂತರಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ತಳಮಟ್ಟದಿಂದ ಪಕ್ಷವನ್ನು ಬಲಪಡಿಸುವಂತೆ ಕಾರ್ಯಕರ್ತರಿಗೆ ತಿಳಿಸಿದರು.
ಶಿವಮೊಗ್ಗದಿಂದ ಆಗಮಿಸಿದ್ದ ವೀಕ್ಷಕಿ ಅನಿತಾಕುಮಾರಿ ಮಾತನಾಡಿ, ‘ಹಳೆ ಬೇರು, ಹೊಸ ಚಿಗುರು’ ಎಂಬಂತೆ ಅನುಭವಿಗಳ ಮಾರ್ಗದರ್ಶನದಲ್ಲಿ ಹೊಸಬರಿಗೆ ಪಕ್ಷದ ಚುಕ್ಕಾಣಿ ಹಿಡಿಯಲು ಅವಕಾಶ ಕಲ್ಪಿಸಬೇಕು. ಪಕ್ಷದಲ್ಲಿ ಸ್ಥಾನ ಪಡೆಯುವುದು ಮಾತ್ರ ಮುಖ್ಯವಲ್ಲ; ಜವಾಬ್ದಾರಿ ದೊರೆತ ಬಳಿಕ ಅದನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯವೂ ಇರಬೇಕು ಎಂದು ಹೇಳಿದರು.
ಸಭೆಯಲ್ಲಿ ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ರವಿ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರವೀಣ್‌ಕುಮಾರ್, ಡಾ.ಬಸವಾನಂದ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
-29ಜೆ.ಜಿ.ಎಲ್.1: ಜಗಳೂರಲ್ಲಿ ಕಾಂಗ್ರೆಸ್ ಪಕ್ಷದ ‘ಸಂಘಟನ್ ಸೃಜನ್ ಅಭಿಯಾನ-2’ ಕಾರ್ಯಕ್ರಮವನ್ನು ಶಾಸಕ ಬಿ.ದೇವೇಂದ್ರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ಕಲೀಲುಲ್ಲಾ ದೀಪಬೆಳಗುವ ಮೂಲಕ ಉದ್ಘಾಟಿಸಿದರು.