ಶೈಕ್ಷಣಿಕ ಸಹಾಯಧನ ಬಿಡುಗಡೆ ವಿಳಂಬಕ್ಕೆ ಕಾರ್ಮಿಕರ ಸಂಘಟನೆ ಖಂಡನೆ

KannadaprabhaNewsNetwork | Published : Jan 31, 2024 2:17 AM

ಸಾರಾಂಶ

ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮಂಡಳಿ ಅಥವಾ ಸರ್ಕಾರದ ವತಿಯಿಂದ ಚಿತ್ರದುರ್ಗ ನಗರದಲ್ಲಿ ಎಲ್ಲಾದರೂ ಒಂದು ಕಡೆ ಜಮೀನು ಖರೀದಿಸಿ ಕಟ್ಟಡ ಕಾರ್ಮಿಕರಿಗೆ 20 30 ರ ಅಳತೆಯ ನಿವೇಶನ ನೀಡಿ ಕಟ್ಟಡ ಕಾರ್ಮಿಕರ ಕಾಲೋನಿ ಎಂದು ಹೆಸರಿಡಬೇಕು ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಯಿತು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ ಬಿಡುಗಡೆ ವಿಳಂಭ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಟನೆ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ನಗರದ ಗಾಂಧಿ ವೃತ್ತದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಬಳಿ ಸಭೆ ಮಾಡಿದರು. ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ದೊರಕಬೇಕಾದ ನೊಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ 2022-23 ನೇ ಸಾಲಿನ ಶೈಕ್ಷಣಿಕ ಸಹಾಯಧನ ತುರ್ತು ಮಂಜೂರು ಮಾಡಬೇಕು. ಶೈಕ್ಷಣಿಕ ಸಾಲಿನ ಅವಧಿ ಮುಗಿಯುತ್ತಾ ಬಂದಿರುವುದರಿಂದ ಕೂಡಲೇ ಸರ್ಕಾರ ಮಂಡಳಿಯ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ಮದುವೆ ಸಹಾಯಧನವನ್ನು ರು ಒಂದು ಲಕ್ಷಕ್ಕೆ ಹೆಚ್ಚಿಸಬೇಕು. ಕಟ್ಟಡ ಕಾರ್ಮಿಕ ಮಹಿಳೆ ಹೆರಿಗೆಯಾದ 6 ತಿಂಗಳ ಕಾಲ ತನ್ನ ಮಗುವಿನ ಪೋಷಣೆಯಲ್ಲಿ ತೊಡಗಿರುತ್ತಾಳೆ. ಅಂತಹ ಮಹಿಳೆಗೆ ಪ್ರತ್ಯೇಕವಾಗಿ 60 ಸಾವಿರ ರು. ಹಣವನ್ನು ಮಂಜೂರು ಮಾಡಬೇಕು. ಹಿಂದಿನ ಆದೇಶದ ಪ್ರತಿಯಲ್ಲಿ ಕೆಲವು ನಿಬಂಧನೆಗಳಿದ್ದು, ತಾಯಿ ಮತ್ತು ಮಗುವಿನ ಹೆಸರಿನಲ್ಲಿ ಬಾಂಡ್ ಮಾಡಲಾಗಿರುತ್ತದೆ. ಅದನ್ನು ಹೊರತು ಪಡಿಸಿ ಕಾರ್ಮಿಕ ಮಹಿಳೆಗೆ ಪ್ರತ್ಯೇಕವಾಗಿ 60 ಸಾವಿರ ರೂಪಾಯಿಗಳ ಸಹಾಯಧನ ನೀಡಿದಲ್ಲಿ ಕಾರ್ಮಿಕ ಮಹಿಳೆಗೆ ಅನುಕೂಲವಾಗುತ್ತದೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ನೋಂದಾಯಿತ ಕಟ್ಟಡ ಕಾರ್ಮಿಕ 60 ವರ್ಷ ಪೂರೈಸಿದ ನಂತರ ಪಡೆಯಿತ್ತಿರುವ 3000 ಸಾವಿರ ಪಿಂಚಣಿ ಸೌಲಭ್ಯವನ್ನು 5000 ಸಾವಿರ ರುಗಳಿಗೆ ಹೆಚ್ಚಿಸಬೇಕು. ಕಾರ್ಮಿಕನ ಸಹಜ ಸಾವಿನ ಮರಣಕ್ಕೆಎರಡು ಲಕ್ಷದವರೆಗೆ ಮರಣ ಸಹಾಯಧನವನ್ನು ಹೆಚ್ಚಿಗೆ ಮಾಡಬೇಕು. ಬಿಲ್ಡಿಂಗ್ ಸೆಂಟ್ರಿಂಗ್ ಕುಸಿತ ಇತ್ಯಾದಿ ಅವಘಡ ಸಂಭವಿಸಿ ದುರ್ಮರಣ ಹೊಂದಿದ ಫಲಾನುಭವಿಗೆ 10 ಲಕ್ಷ ಪರಿಹಾರ ಧನ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ರಾಜಣ್ಣ ಕಾಮನಬಾವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜು, ತಾಲೂಕು ಅಧ್ಯಕ್ಷ ಜಾವೀದ್ ಬಾಷಾ, ಕಾರ್ಯಾಧ್ಯಕ್ಷ ಟಿ.ಬಸವರಾಜು, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀದೇವಿ, ಗ್ರಾಮಾಂತರ ಕಾರ್ಯದರ್ಶಿ ತಿಪ್ಪೇಸ್ವಾಮಿ, ತಾಲೂಕು ಉಪಾಧ್ಯಕ್ಷ ಮನ್ಸೂರ್ ಬಾಷಾ, ಖಂಜಾಚಿ ಆಶೋಕ್, ಸಹ ಕಾರ್ಯದರ್ಶಿ ರಮೇಶ್, ರಾಜು, ನಾಗೇಶ್, ರಮೇಶ್, ಈರೇಶ್, ಸುರೇಶ್, ನಾಗಭೂಷಣ, ಅಂಜಿನಪ್ಪ, ತಿಪ್ಪೇಸ್ವಾಮಿ, ಚಳ್ಳಕೇರಪ್ಪ, ಹನುಮಂತಪ್ಪ ಪ್ರತಿಭಟನೆ ನೇತೃತ್ವ ವಹಿಸಿದ್ದರು.‘ಕಾರ್ಮಿಕರ ಕಾಲೋನಿ’ಗೆ ಮನವಿ

ಚಿತ್ರದುರ್ಗ ಜಿಲ್ಲೆಯಾದ್ಯಂತ 1,60,000 ಸಾವಿರಕ್ಕಿಂತ ಹೆಚ್ಚು ಕಾರ್ಮಿಕರು ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಚಿತ್ರದುರ್ಗ ತಾಲೂಕು ಕೇಂದ್ರದಲ್ಲಿ 45000 ಸಾವಿರ ಕಟ್ಟಡ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮಂಡಳಿ ಅಥವಾ ಸರ್ಕಾರದ ವತಿಯಿಂದ ಚಿತ್ರದುರ್ಗ ನಗರದಲ್ಲಿ ಎಲ್ಲಾದರೂ ಒಂದು ಕಡೆ ಜಮೀನು ಖರೀದಿಸಿ ಕಟ್ಟಡ ಕಾರ್ಮಿಕರಿಗೆ 20+30 ರ ಅಳತೆಯ ನಿವೇಶನ ನೀಡಿ ಕಟ್ಟಡ ಕಾರ್ಮಿಕರ ಕಾಲೋನಿ ಎಂದು ಹೆಸರಿಡಬೇಕು ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.

Share this article