ಕನ್ನಡಪ್ರಭ ವಾರ್ತೆ ವಿಜಯಪುರಜೋಡೆತ್ತಿನ ಕೃಷಿಕರ ಸಂಖ್ಯೆ ಕಡಿಮೆಯಾದಂತೆ ಭೂಮಿ ಬಂಜರವಾಗುವುದು ಹೆಚ್ಚಾಗುತ್ತಿದೆ. ಮಣ್ಣು ಸತ್ವ ಕಳೆದುಕೊಳ್ಳುತ್ತಿದೆ. ನೀರು ಹಾಗೂ ಗಾಳಿ ಕಲುಷಿತಗೊಳ್ಳುತ್ತಿವೆ. ವೈಜ್ಞಾನಿಕ ಚಿಂತನೆ ಮೂಲಕ ಜೋಡೆತ್ತಿನ ಕೃಷಿಕರಿಗೆ ಪೂರಕವಾದ ವ್ಯವಸ್ಥೆ ನಿರ್ಮಾಣ ಮಾಡುವುದು ಇಂದಿನ ಮೊದಲ ಆದ್ಯತೆಯಾಗಿದೆ ಎಂದು ಧಾರವಾಡದ ಕೃಷಿ ವಿಶ್ವ ವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ವಿ.ಐ.ಬೆಣಗಿ ಹೇಳಿದರು.ರಾಜ್ಯ ಮಟ್ಟದ ನಂದಿ ರಥಯಾತ್ರೆಯು ನಗರಕ್ಕೆ ಆಗಮಿಸಿದ ಪ್ರಯುಕ್ತ ಸಿದ್ಧೇಶ್ವರ ದೇವಸ್ಥಾನದಿಂದ ಜ್ಞಾನಯೋಗಾಶ್ರಮದವರೆಗೆ ಶೋಭಾಯಾತ್ರೆಯನ್ನು ನಡೆಸಲಾಯಿತು. ಬಬಲೇಶ್ವರದ ಡಾ.ಮಹಾದೇವ ಶಿವಾಚಾರ್ಯ ಸ್ವಾಮೀಜಿಗಳು ಈ ಶೋಭಾಯಾತ್ರೆಗೆ ಚಾಲನೆ ನೀಡಿದರು. ಜ್ಞಾನಯೋಗಾಶ್ರಮದಲ್ಲಿ ಹಮ್ಮಿಕೊಂಡಿದ್ದ ನಂದಿ ಹಾಗೂ ಗೋ ಸಂತತಿ ಹೆಚ್ಚಿಸುವ ಕುರಿತು ವೈಜ್ಞಾನಿಕ ಚಿಂತನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಬಸವಲಿಂಗ ಸ್ವಾಮಿಜಿಗಳು ಮಾತನಾಡಿ, ಸಿದ್ಧೇಶ್ವರ ಸ್ವಾಮೀಜಿಯವರು ಯಾವಾಗಲೂ ರೈತರ ಕಾರ್ಯಕ್ರಮಗಳಿಗೆ ಮೊದಲು ಆದ್ಯತೆ ನೀಡುತ್ತಿದ್ದರು. ನಾವೂ ಕೂಡ ರೈತರ ಕಾರ್ಯಕ್ರಮಗಳಿಗೆ ಮೊದಲ ಆದ್ಯತೆ ನೀಡಿ ಗುರುಗಳು ಹಾಕಿದ ಹಾದಿಯಲ್ಲಿ ನಡೆಯುತ್ತಿದ್ದೇವೆ. ಶ್ರೀಸಿದ್ದೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಪ್ರತಿ ಗ್ರಾಮಗಳಲ್ಲಿ ಜೋಡೆತ್ತಿನ ಕೃಷಿಕರು ಒಂದಾಗಿ ನಂದಿ ಹಾಗೂ ಗೋ ಸಂತತಿ ಹೆಚ್ಚಿಸಲು ಸಂಕಲ್ಪ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಶ್ರಮ ಸಂಸ್ಕೃತಿಯನ್ನು ಉಳಿಸುತ್ತಿರುವ ರೈತರ ಬೆಂಬಲಕ್ಕೆ ನಿಲ್ಲುವುದೇ ಪೂಜ್ಯರಿಗೆ ಸಲ್ಲಿಸುವ ನಿಜವಾದ ಗುರು ನಮನ ಎಂದು ತಿಳಿದಿದ್ದೇವೆ. ಕರ್ನಾಟಕದ ಗೋ ಸೇವಾ ಗತಿವಿಧಿಯ ವತಿಯಿಂದ ರಾಜ್ಯಾದ್ಯಂತ ನಡೆಯುತ್ತಿರುವ ನಂದಿ ರಥಯಾತ್ರೆಗೆ ಸಮಾಜದ ಎಲ್ಲ ಜನರೂ ಬೆಂಬಲ ನೀಡಬೇಕು ಎಂದು ಕೋರಿದರು.ಭಾರತೀಯ ಕಿಸಾನ್ ಸಂಘದ ರಾಜ್ಯಾಧ್ಯಕ್ಷ ಭೀಮಸೇನ ಕೊಕರೆ ಮಾತನಾಡಿ, ಮುಂದಿನ ದಿನಗಳಲ್ಲಿ ನಮ್ಮ ಸಂಘವು ಜೋಡೆತ್ತಿನ ಕೃಷಿಕರ ಬೆನ್ನೆಲುಬಾಗಿ ನಿಲ್ಲಲು ಖಂಡಿತ ಪ್ರಯತ್ನಿಸುತ್ತದೆ ಎಂದು ಭರವಸೆ ನೀಡಿದರು.ನಂದಿ ಕೃಷಿ ತಜ್ಞ ಬಸವರಾಜ ಬಿರಾದಾರ ಮಾತನಾಡಿ, ಜನಸಂಖ್ಯೆ ಹೆಚ್ಚಾದಂತೆ ನಂದಿ ಕೃಷಿಕರ ಸಂಖ್ಯೆ ಹೆಚ್ಚಾದರೆ ಮಾತ್ರ ಸಮಾಜವು ವೈಜ್ಞಾನಿಕವಾಗಿ ಬೆಳವಣಿಗೆಯಾಗುತ್ತದೆ ಎಂದು ಹೇಳಬಹುದು. ನಂದಿ ಕೃಷಿ ಪುನಶ್ಚೇತನವು ಇಂದಿನ ಮೊದಲ ಅವಶ್ಯಕತೆಯಾಗಿದೆ. ಅದಕ್ಕಾಗಿ, ರಾಜ್ಯ ಸರ್ಕಾರವು ಮುಂದಿನ 10 ವರ್ಷಗಳವರೆಗೆ ಪ್ರತಿ ವರ್ಷ ಶೇ.10 ಪ್ರತಿಶತ ಬಜೆಟ್‌ನ್ನು ನಂದಿ ಕೃಷಿ ಪುನಶ್ಚೇತನಕ್ಕಾಗಿ ಮೀಸಲಿಡುವ ಕಾನೂನನ್ನು ಜಾರಿಗೆ ತಂದರೆ ಮುಂದಿನ ಹತ್ತು ವರ್ಷಗಳಲ್ಲಿ ಹತ್ತು ಪಟ್ಟು ನಂದಿ ಸಂಪತ್ತು ಹೆಚ್ಚಳವಾಗಲು ಸಾಧ್ಯವಿದೆ ಎಂದರು. ಇದೇ ಸಂದರ್ಭದಲ್ಲಿ ನಂದಿ ಕೃಷಿ ಕುರಿತು ವೈಜ್ಞಾನಿಕ ಚಿಂತನೆ ಇರುವ ನಂದಿ ಕೂಗು ಪುಸ್ತಕ ಬಿಡುಗಡೆ ಹಾಗೂ 3 ಜನ ಪ್ರಗತಿಪರ ಜೋಡೆತ್ತಿನ ಕೃಷಿಕರಿಗೆ ಉತ್ಕೃಷ್ಟ ಕೌಶಲ್ಯ ಹೊಂದಿದ ರೈತ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು.ವಿ.ಸಿ.ನಾಗಠಾಣ, ಸಂಗಮೇಶ ಕಾಮನ್ನವರ, ಸಹದೇವ ನಾಡಗೌಡ, ಪ್ರವೀಣ ಕೂಡಗಿ, ಸಿದ್ದು ಹೂಗಾರ, ಮುರುಗೆಪ್ಪ ಅಂಗಡಿ, ಮಲ್ಲಣ್ಣ ಜೆಲ್ಲಿ, ಅಭಿಶೇಕ ಬಿರಾದಾರ, ಗೀತಾ ಅಂಗಡಿ, ಬಿ.ಟಿ.ಈಶ್ವರಗೊಂಡ ಮುಂತಾದವರು ಹಾಜರಿದ್ದರು. ನೀಲಕಂಠ ವಾಲಿಕಾರ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಬಗಿಚಬಾಳ ಸ್ವಾಗತಿಸಿದರು.ಕೋಟ್
ಸಿದ್ಧೇಶ್ವರ ಶ್ರೀಗಳು ರೈತರ ಕಾರ್ಯಕ್ರಮಗಳಿಗೆ ಪ್ರಮುಖ ಆದ್ಯತೆ ನೀಡುತ್ತಿದ್ದರು. ಇಂದು ನಾವೂ ಕೂಡ ರೈತರ ಕಾರ್ಯಕ್ರಮಗಳಿಗೆ ಮೊದಲ ಆದ್ಯತೆಯನ್ನು ನೀಡಿ ಗುರುಗಳು ಹಾಕಿದ ಹಾದಿಯಲ್ಲಿ ನಡೆಯುತ್ತಿದ್ದೇವೆ. ಶ್ರೀಸಿದ್ದೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಪ್ರತಿ ಗ್ರಾಮಗಳಲ್ಲಿನ ಜೋಡೆತ್ತಿನ ಕೃಷಿಕರು ಒಂದಾಗಿ ನಂದಿ ಹಾಗೂ ಗೋ ಸಂತತಿ ಹೆಚ್ಚಿಸಲು ಸಂಕಲ್ಪ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ.ಬಸವಲಿಂಗ ಸ್ವಾಮೀಜಿ, ಜ್ಞಾನಯೋಗಾಶ್ರಮ ವಿಜಯಪುರ