- ಜನಪರ ಅಭಿವೃದ್ಧಿಗೆ ಈ ಜಾಗ ಬಳಸಿ: ಗೌ.ಹಾಲೇಶ್
ಕನ್ನಡಪ್ರಭ ವಾರ್ತೆ ಚನ್ನಗಿರಿ
ಮುಖ್ಯ ಬಸ್ ನಿಲ್ದಾಣ ಪಕ್ಕದಲ್ಲಿರುವ ಪುರಸಭೆ ಮುಂಭಾಗದ ಸುಮಾರು 1.5 ಎಕರೆ ಪಾಳುಬಿದ್ದ ಜಾಗ ಪಟ್ಟಣದಲ್ಲಿನ ಹಿಂದೂ ಮತ್ತು ಮುಸ್ಲಿಮರಲ್ಲಿ ನಮ್ಮದು-ನಮ್ಮದು ಎಂಬ ವಿವಾದ 60 ವರ್ಷಗಳಿಂದಲೂ ಇದೆ. ಇದು ಈ ಎರಡು ಧರ್ಮದವರದೂ ಅಲ್ಲ, ಸರ್ಕಾರಿ ಜಾಗ ಎಂದು ಪುರಸಭೆಯಿಂದ ಹಿಡಿದು ವಿಭಾಗೀಯ ಅಧಿಕಾರಿಗಳ ಕಚೇರಿಯಲ್ಲಿಯೂ ದಾಖಲಾಗಿದೆ. ಈ ಸರ್ಕಾರಿ ಜಾಗದಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗುವಂತಹ ಅಭಿವೃದ್ಧಿ ಕೆಲಸಗಳನ್ನು ನಡೆಸಲಿ ಎಂದು ಮಯೂರ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ ಅಧ್ಯಕ್ಷ ಗೌ.ಹಾಲೇಶ್ ಹೇಳಿದರು.ಗುರುವಾರ ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಈ ಜಾಗಕ್ಕೆ ಸಂಬಂಧಪಟ್ಟಂತೆ ಪುರಸಭೆಯ ಅಸೆಸ್ಮೆಂಟ್ ನಂಬರ್ 268/247ರಲ್ಲಿ ಮಕಾನ್ ಎಂದೂ, ಇನ್ನೊಂದು ಅಸೆಸ್ಮೆಂಟ್ ನಂಬರ್ 269/248 ರಲ್ಲಿ ಕೋಟೆ ರಂಗನಾಥ ಸ್ವಾಮಿ ಜಾಗ ಎಂದೂ ನಮೂದಾಗಿತ್ತು. ಈ ಎರಡು ಅಸೆಸ್ಮೆಂಟ್ ನಂಬರ್‌ಗಳು ಒಂದೇ ಜಾಗಕ್ಕೆ ಸಂಬಂಧ ಪಟ್ಟಿದ್ದಾಗಿದೆ. 1955-56ರಲ್ಲಿ ಈ ಎರಡು ಅಸೆಸ್ಮೆಂಟ್‌ಗಳಲ್ಲಿ ಮೆಕಾನ್ ಜಾಗ ಎಂದು ಹೇಳುತ್ತಿದ್ದರು. ಆಗ ಪಟ್ಟಣದ ಕೋಟೆಯ ಶ್ರೀ ಭೇಟೆ ರಂಗನಾಥ ದೇವಾಲಯಕ್ಕೆ ಸೇರಿದ ಪುಷ್ಕರಣಿ ಮತ್ತು ಹೂವಿನ ವನ ಇರುವ ಜಾಗ ದೇವಾಲಯದ್ದು ಎಂಬ ತಗಾದೆ ಶಿವಮೊಗ್ಗದಲ್ಲಿದ್ದ ಉಪ ವಿಭಾಗೀಯ ಅಧಿಕಾರಿಗಳ (ಎಸ್.ಡಿ.ಒ) ನ್ಯಾಯಾಲಯಕ್ಕೆ ಹೋಯಿತು ಎಂದರು.
ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳಿಗೆ ಸರ್ಕಾರಿ ಜಾಗವಿದು ಎಂಬುದು ತಿಳಿದಿದ್ದರೂ ಈ ಜಾಗದ ವಿವಾದ ನ್ಯಾಯಾಲಯದಲ್ಲಿದೆ ಎಂದು ಸುಳ್ಳು ಹೇಳುತ್ತಾ, ಮತ ಬ್ಯಾಂಕ್ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಕ್ಷೇತ್ರದ ಹಾಲಿ ಶಾಸಕ ಬಸವರಾಜ ಶಿವಗಂಗಾ, ಪುರಸಭೆ ಮುಖ್ಯಾಧಿಕಾರಿ ಅವರಿಗೂ ಮನವಿ ಸಲ್ಲಿಸಿ, ಈ ಜಾಗಕ್ಕೆ ಸಂಬಂಧಪಟ್ಟಂತಹ ದಾಖಲೆಗಳನ್ನು ನೀಡಲಾಗುವುದು. ಈ ಜಾಗವು ಸಾರ್ವಜನಿಕರ ಬಳಕೆಗೆ ಅನುಕೂಲವಾಗುಂತೆ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನ ಅಧ್ಯಕ್ಷ ನಾಗೇಂದ್ರಪ್ಪ, ಪುರಸಭೆ ಸದಸ್ಯ ಪಟ್ಲಿ ನಾಗರಾಜ್, ಬಿ.ಕೃಷ್ಣಪ್ಪ, ಹಿರೇಮಳಲಿ ನಾಗರಾಜ್, ಸಿ.ಎಂ. ಗುರುಸಿದ್ದಯ್ಯ, ಬುಳ್ಳಿ ನಾಗರಾಜ್ ಉಪಸ್ಥಿತರಿದ್ದರು.- - -
-26ಕೆಸಿಎನ್‌ಜಿ1.ಜೆಪಿಜಿ:ಮಯೂರ ಡಾ.ರಾಜ್ ಕುಮಾರ್ ಅಭಿಮಾನಿ ಸಂಘ ಅಧ್ಯಕ್ಷ ಗೌ.ಹಾಲೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.