ಗದಗ: ಹಿಂದಿ ಸರಳ ಹಾಗೂ ಸುಮಧುರ ಭಾಷೆಯಾಗಿದ್ದು, ಜನ ಸಾಮಾನ್ಯರಿಗೂ ಸಂವಹನವಾಗುವ ಭಾರತದ ಪ್ರಮುಖ ಸಂಪರ್ಕ ಭಾಷೆಯಾಗಿದ್ದು, ವಿವಿಧ ಪ್ರಾಂತ, ಧರ್ಮ, ಪಂಥ,ಜಾತಿ ಮುಂತಾದವುಗಳನ್ನು ಬೆಸೆಯುವ ಹಾಗೂ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆ ಬೆಳೆಸುವ ಭಾಷೆಯಾಗಿದೆ ಎಂದು ಆದರ್ಶ ಶಿಕ್ಷಣ ಸಮಿತಿ ಡಿ.ಎಸ್. ಕುರ್ತಕೋಟಿ ಮೆಮೋರಿಯಲ್ ವಾಣಿಜ್ಯ ಪಪೂ ಕಾಲೇಜಿನ ಹಿಂದಿ ಉಪನ್ಯಾಸಕಿ ಸುಮನ ಕುಲಕರ್ಣಿ ಹೇಳಿದರು.
ಅವರು ಸ್ಥಳೀಯ ವಿದ್ಯಾದಾನ ಸಮಿತಿ ಬಾಲಕಿಯರ ಪಪೂ ಕಾಲೇಜಿನಲ್ಲಿ ನಡೆದ ಹಿಂದಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ವಿದ್ಯಾರ್ಥಿಗಳು ಪಠ್ಯ ಹೊರತಾಗಿಯೂ ಭಾರತದ ಎಲ್ಲಿಯೇ ಹೋದರು ಹಿಂದಿಯನ್ನು ಪ್ರಮುಖ ಸಂವಹನ ಭಾಷೆಯಾಗಿ ಬಳಸಿಕೊಳ್ಳಬಹುದಾಗಿದೆ. ಹಿಂದಿ ಭಾಷೆಯು ಪ್ರಪಂಚದ ಅತ್ಯಂತ ಪ್ರಸ್ತುತತೆ ಹೊಂದಿರುವ ಭಾಷೆಯಾಗಿದ್ದು, ಪ್ರತಿ ವರ್ಷ ಸೆ.14ನ್ನು ಹಿಂದಿ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ವಿದ್ಯಾರ್ಥಿಗಳು ಹಿಂದಿ ಭಾಷೆಯ ಆಳವಾದ ಅಧ್ಯಯನ ಕೈಗೊಂಡು ಭಾಷೆಯ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ವಿದ್ಯಾದಾನ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಮಾತನಾಡಿ, ದೇಶ ನೋಡು ಕೋಶ ಓದು ಎಂಬ ನಾಣ್ಣುಡಿಯಂತೆ ವಿದ್ಯಾರ್ಥಿಗಳು ಕೇವಲ ಒಂದೆರಡು ಭಾಷೆಗಳ ಅಧ್ಯಯನಕ್ಕೆ ಸೀಮಿತರಾಗದೇ ಹಲವು ಭಾಷೆಗಳನ್ನು ಕಲಿಯುವುದರ ಮೂಲಕ ತಮ್ಮ ಸಂಪರ್ಕ ಮತ್ತು ಸಂವಹನಾ ಶಕ್ತಿ ವೃದ್ಧಿಸಿಕೊಳ್ಳಬೇಕೆಂದರು.ವಿ.ದಾ.ಸ ಎಂ.ಬಿ.ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದ ಪ್ರಾ.ಡಾ. ಗಂಗೂಬಾಯಿ ಪವಾರ, ಅಧ್ಯಕ್ಷತೆ ವಹಿಸಿದ್ದ ವಿದ್ಯಾದಾನ ಸಮಿತಿಯ ಅಧ್ಯಕ್ಷ ಡಿ.ಬಿ. ಹುಯಿಲಗೋಳ ಮಾತನಾಡಿದರು.
ಉಪನ್ಯಾಸಕ ಬಿ.ಬಿ.ಮಿರ್ಜಿ, ಪ್ರಶಾಂತ ಪಾಟೀಲ, ಸಮೀರ ಹಂದಿಗೋಳ, ವೆಂಕಟೇಶ ರಾಠೋಡ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಭೂಮಿಕಾ ಚವ್ಹಾಣ ಪ್ರಾರ್ಥಿಸಿದರು. ಡಾ.ದತ್ತಪ್ರಸನ್ನ ಪಾಟೀಲ ಪರಿಚಯಿಸಿದರು. ವಂದನಾ. ಎಂ ನಿರೂಪಿಸಿದರು. ಪ್ರಾ. ಡಾ.ಬಿ.ಎಸ್. ರಾಠೋಡ ಸ್ವಾಗತಿಸಿದರು. ಆ ನಂತರ ವಿದ್ಯಾರ್ಥಿನಿಯರಿಂದ ವಿವಿಧ ಕಾರ್ಯಕ್ರಮಗಳು ಜರುಗಿದವು.