ಶಾಸಕರು ಯಾವುದೇ ಸಮಾಜಕ್ಕೆ ಅವಹೇಳನ ಮಾಡಿಲ್ಲ

KannadaprabhaNewsNetwork |  
Published : Oct 31, 2025, 03:30 AM IST
ಇಂಡಿ | Kannada Prabha

ಸಾರಾಂಶ

ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರು ಗಾಣಿಗ ಸಮಾಜಕ್ಕೆ ಅಗೌರವದಿಂದ ಮಾತನಾಡಿಲ್ಲ.

ಕನ್ನಡಪ್ರಭ ವಾರ್ತೆ ಇಂಡಿ

ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರು ಗಾಣಿಗ ಸಮಾಜಕ್ಕೆ ಅಗೌರವದಿಂದ ಮಾತನಾಡಿಲ್ಲ. ಬಿಜೆಪಿ ಮುಖಂಡ ದಯಾಸಾಗರ ಪಾಟೀಲ ಸಮಾಜದಲ್ಲಿ ವಿಷ ಬೀಜ ಬಿತ್ತುವ ಹಾಗೂ ಅಶಾಂತಿ ಉಂಟು ಮಾಡುವ ಕೆಲಸ ಮಾಡಿದ್ದಾರೆ. ಅವರಿಗೆ ಬುದ್ಧಿ ಭ್ರಮೆಯಾಗಿದೆ ಎಂದು ಗಾಣಿಗ ಸಮಾಜದ ಮುಖಂಡ ಮಲ್ಲಿಕಾರ್ಜುನ ಲೋಣಿ ಹೇಳಿದರು.

ಪಟ್ಟಣದ ನೌಕರರ ಸಂಘದ ಸಭಾ ಭವನದಲ್ಲಿ ಗಾಣಿಗ ಸಮಾಜ ಹಾಗೂ ಹಾಲುಮತ ಸಮಾಜದ ಮುಖಂಡರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಿಜೆಪಿ ಮುಖಂಡ ದಯಾಸಾಗರ ಪಾಟೀಲ ಅವರು ಶಾಸಕ ಯಶಂತರಾಯಗೌಡ ಪಾಟೀಲರು ಹಾಲುಮತ ಸಮಾಜ ಹಾಗೂ ಗಾಣಿಗ ಸಮಾಜಕ್ಕೆ ಅಗೌರವವಾಗಿ ಮಾತನಾಡಿದ್ದಾರೆ ಎಂದು ಜಿಲ್ಲಾಧಿಕಾರಿಗಳಿಗೆ ಸುಳ್ಳು ಮನವಿ ಸಲ್ಲಿಸಿದ್ದಾರೆ. 2018ರಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಭಾಷಣ ಮಾಡಿದ ವಿಡಿಯೋ ತುಣಕು ಮುಂದಿಟ್ಟುಕೊಂಡು, ಅದನ್ನು ಕೂಲಂಕುಷವಾಗಿ ಕೇಳಿ ತಿಳಿದುಕೊಳ್ಳದೇ, ಶಾಸಕರ ವಿರುದ್ಧ ಸುಳ್ಳು ಆರೋಪದ ಮಾಡಿದ್ದು, ಇದು ಜಿಲ್ಲೆಯಲ್ಲಿ ಅಶಾಂತಿ ಉಂಟು ಮಾಡುವ ಕೆಲಸವಾಗಿದೆ. ವಿಡಿಯೋ ತುಣುಕಿನ ಭಾಷಣದಲ್ಲಿ ಯಾವುದೇ ಸಮಾಜಕ್ಕೆ ನೋವಾಗುವ ರೀತಿಯಲ್ಲಿ ಶಾಸಕರು ಮಾತನಾಡಿಲ್ಲ. ದಯಾಸಾಗರ ಪಾಟೀಲ ಸ್ವತಃ ನಿರ್ಧಾರ ಕೈಗೊಳ್ಳದೇ ಯಾರದ್ದೋ ಮಾತು ಕೇಳಿ ಮಾಡಿದ್ದಾರೆ. ಇದರ ಪರಿಣಾಮ ಮುಂದೆ ಅವರು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

2018ರಲ್ಲಿ ದಯಾಸಾಗರ ಪಾಟೀಲ ಅಭ್ಯರ್ಥಿಯಾಗಿದ್ದರು. ಶಾಸಕ ಯಶವಂತರಾಯಗೌಡರು ಗಾಣಿಗ ಸಮಾಜಕ್ಕೆ ಬೈದಿದ್ದರೆ ಅಂದೇ ಸಮಾಜದ ಮುಂದೆ ಇಡಬೇಕಿತ್ತು. ಅಂದು ಸುಮ್ಮನಾಗಿ, ಇಂದು ಪುಂಗಿ ಊದುವುದು ಸರಿಯಲ್ಲ. ಸಮಾಜದಲ್ಲಿ ಅಶಾಂತಿ ಉಂಟು ಮಾಡಿದ ದಯಾಸಾಗರನನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಗಾಣಿಗ ಸಮಾಜ ಹಾಗೂ ಹಾಲುಮತ ಸಮಾಜ ಮುಂದಿಟ್ಟುಕೊಂಡು ಶಾಸಕರ ತೇಜೋವಧೆ ಮಾಡಲು ಹೊರಟ ದಯಾಸಾಗರ ಪಾಟೀಲ ವಾರದೊಳಗೆ ಎರಡು ಸಮಾಜದ ಕ್ಷೇಮೆ ಕೋರಬೇಕು.ಇಲ್ಲವಾದರೆ ಜಿಲ್ಲೆಯಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಲೂಕಿನ ಅಭಿವೃದ್ದಿಗೆ ಸಾಕಷ್ಟು ಯೋಜನೆಗಳನ್ನು ತಂದು ಅಭಿವೃದ್ದಿ ಪಡಿಸಿದ್ದಾರೆ. ಇದನ್ನು ಸಹಿಸದೆ ಹತಾಸೆಗೊಂಡು ಈ ರೀತಿ ಮಾಡಲು ಹೊರಟಿರುವದು ಖಂಡನೀಯ.ಶಾಸಕರ ಅಭಿವೃದ್ದಿಯನ್ನು ಸಹಿಸದ ಕೆಲವು ಜಿಲ್ಲೆಯ ದುಷ್ಟ ಶಕ್ತಿಗಳು ಹಿಂದೆ ನಿಂತು ಈ ಕೆಲಸ ಮಾಡಿದ್ದಾರೆ. ಇದನ್ನು ನಿಲ್ಲಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹಾಲುಮತ ಸಮಾಜದ ಮುಖಂಡ ಜಟ್ಟೆಪ್ಪ ರವಳಿ ಮಾತನಾಡಿ, ಶಾಸಕ ಯಶವಂತರಾಯಗೌಡ ಪಾಟೀಲ ಅವರಿಂದ ಗಾಣಿಗ ಹಾಗೂ ಹಾಲುಮತ ಸಮಾಜಕ್ಕೆ ಅವಹೇಳನದ ಮಾತು ನಡೆದಿರುವುದಿಲ್ಲ. ಹಾಲುಮತ ಸಮಾಜದ ಬಗ್ಗೆ ಶಾಸಕರು ಅವಹೇಳನ ಮಾಡಿದ್ದಾರೆ ಎಂದು ಹೇಳುವ ನೈತಿಕತೆ ನಿಮಗಿಲ್ಲ. ಹಾಲುಮತ ಸಮಾಜದಲ್ಲಿ ಮುಖಂಡರಿದ್ದಾರೆ. ಹಾಲುಮತ ಸಮಾಜಕ್ಕೆ ಅನ್ಯಾಯವಾದರೆ ರಾಜ್ಯಾದ್ಯಂತ ಹೊರಾಟ ಮಾಡುತ್ತೇವೆ. ಆದರೆ ನಿಮ್ಮ ರಾಜಕೀಯ ಬೆಳೆ ಬೆಯಿಸಿಕೊಳ್ಳುವ ಸಲುವಾಗಿ ಹಾಲುಮತ ಸಮಾಜವನ್ನು ಬಳಕೆ ಮಾಡಿಕೊಂಡಿದ್ದು,ಕೂಡಲೇ ಅದನ್ನು ಹಿಂಪಡೆಯಬೇಕು.ಗಾಣಿಗ ಸಮಾಜದ ಕಾರ್ಯಕ್ರಮದಲ್ಲಿ ಶಾಸಕರು ಒಳ್ಳೆಯವರು ಇದ್ದಾರೆ ಎಂದು ಹೊಗಳಿಕೆಯ ಮಾತು ಹೇಳಿ,ಇಂದು ಆರೋಪ ಮಾಡುವುದು ಅವಕಾಶ ಸಿಂಧು ಸಿದ್ದಾಂತದಂತೆ ತೊರುತ್ತದೆ.ಒಂದು ವಾರದೊಳಗಾಗಿ ಎರಡು ಸಮಾಜದ ಕ್ಷೇಮೆ ಕೇಳಬೇಕು. ಇಲ್ಲವಾದರೆ ನಿಮ್ಮ ವಿರುದ್ದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹಾಲುತಮ ಸಮಾಜದವರು ಶಾಸಕರ ಬಳಿ ಹೋಗುತ್ತಿದ್ದಾರೆ ಎಂಬ ಭಯದಿಂದ, ಹಾಲುಮತ ಸಮಾಜ ಮುಂದಿಟ್ಟುಕೊಂಡು ಕುತಂತ್ರ ಮಾಡಲು ಹೋರಟರೇ ಸುಮ್ಮನೆ ಬಿಡುವುದಿಲ್ಲ. ರಾಜಕಾರಣ ಮಾಡುತ್ತಿದ್ದರೆ ನೇರಾನೇರ ಮಾಡಿ, ಜನರ ಪ್ರೀತಿ, ವಿಶ್ವಾಸ ಗಳಿಸಿಕೊಂಡು ಶಾಸಕರಾಗಬೇಕು. ಸಮಾಜವನ್ನು ಬಳಕೆ ಮಾಡಿಕೊಂಡು ಒಬ್ಬರ ತೇಜೋವಧೆ ಮಾಡಿ ಶಾಸಕರಾಗಬೇಕು ಎಂಬ ಹುಚ್ಚು ಭ್ರಮೆಯಿಂದ ಸಾಧ್ಯವಿಲ್ಲ ಎಂದು ಹೇಳಿದರು.

ಈ ವೇಳೆ ಮಾತೋಶ್ರೀ ಸುಗಲಾತಾಯಿ, ಶಿವಯೋಗೆಪ್ಪ ಚನಗೊಂಡ, ಗೊಲ್ಲಾಳಪ್ಪಗೌಡ ಪಾಟೀಲ, ಭೀಮು ಗಡ್ಡದ, ಅಪ್ಪು ಕಲ್ಲೂರ, ಸುಭಾಷ ಹಿಟ್ನಳ್ಳಿ, ರಾಯಗೊಂಡಪ್ಪಗೌಡ ಪಾಟೀಲ, ಸೌಮ್ಯ ಕಲ್ಲೂರ, ಗುರು ಹಾವಳಗಿ, ರಾಮಚಂದ್ರ ಯಂಕಂಚಿ, ನೀಲಪ್ಪ ರೂಗಿ, ಅಣ್ಣಾರಾಯ ಬಬಲಾದ, ಅರವಿಂದ ಬಿರಾದಾರ, ಧರೆಪ್ಪ ಮಕಣಾಪೂರ, ರಾವುತಪ್ಪ ಹುಲ್ಲೂರ, ಜಕ್ಕಪ್ಪ ಹತ್ತಳ್ಳಿ, ಶ್ರೀಮಂತ ಲೋಣಿ, ಅವಿನಾಸ ಬಗಲಿ, ಚಿದಾನಂದ ಗಂಗನಳ್ಳಿ, ಕಾಮೇಶ ಉಕ್ಕಲಿ, ನೀಲಕಂಠ ರೂಗಿ, ಬಿ.ಸಿ.ಸಾಹುಕಾರ, ಸದಾಶಿವ ಪ್ಯಾಟಿ, ಎ.ಎಸ್‌. ಗಾಣಿಗೇರ ಇತರರು ಇದ್ದರು.

PREV

Recommended Stories

ಕಸ ಸುರಿಯುವ ಹಬ್ಬದಿಂದ ಜನರಲ್ಲಿ ಜಾಗೃತಿ - ಕಂಡಲ್ಲಿ ಕಸ ಹಾಕುವವರ ಮನೆ ಮುಂದೆ ತ್ಯಾಜ್ಯ
ಟನಲ್ ರಸ್ತೆ, ಎ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ: ಡಿಕೆಶಿ