ಕನ್ನಡಪ್ರಭ ವಾರ್ತೆ ಚಿತ್ರದುರ್ಗಗಾನಯೋಗಿ ಡಾ. ಪಂಡಿತ ಪುಟ್ಟರಾಜ ಗವಾಯಿಗಳು ಕರುನಾಡ ಕಂಡ ಧೀಮಂತ ಸಂಗೀತ ವಿದ್ವಾಂಸರು ಮತ್ತು ಶಿವಯೋಗಿಗಳು. ಸಂಗೀತ, ಸಾಹಿತ್ಯ ಹಾಗೂ ಆಧ್ಯಾತ್ಮ ಕ್ಷೇತ್ರದಲ್ಲಿ ಅವರು ತೋರಿದ ಸಾಧನೆ ಅಪ್ರತಿಮವಾದುದು. ಸಂಗೀತದ ಸಕಲ ವಾದ್ಯಗಳನ್ನು ಏಕಕಾಲಕ್ಕೆ ನುಡಿಸಿ ನವ ರಸಗಳನ್ನು ಮೇಲೈಸಿ ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತದಲ್ಲಿ ಪ್ರಭುತ್ವ ಸಾಧಿಸಿದ ಏಕಮೇವ ಸಾಧಕರಾಗಿದ್ದಾರೆಂದು ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕಿ ಡಾ. ಅನುಷಾ ಹೇಳಿದರು.
ಪುಟ್ಟರಾಜ ಗವಾಯಿಗಳು ಆರು ತಿಂಗಳ ಮಗುವಾಗಿದ್ದಾಗಲೇ ದೃಷ್ಟಿಯನ್ನು ಕಳೆದುಕೊಂಡರು. ಮೂರು ವರ್ಷವಿದ್ದಾಗ ತಂದೆ ತಾಯಿ ಅಸುನೀಗಿದರು. ಸೋದರ ಮಾವ ಚಂದ್ರಶೇಖರಯ್ಯನವರು ಸಂಗೀತಾಭ್ಯಾಸವನ್ನು ನೀಡಿ ಸಲುಹಿದರು.ಹಿಂದೂಸ್ತಾನಿ ಸಂಗೀತವನ್ನು ಅಭ್ಯಾಸ ನಡೆಸಿ ಪಾಂಡಿತ್ಯವನ್ನು ಗಳಿಸಿ ಉಭಯ ಗಾಯನ ವಿಶಾರದ ಬಿರುದನ್ನು ಪಡೆಯುತ್ತಾರೆ ಎಂದರು.ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಕುರಿತು ಮಾತನಾಡಿ, ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕಾಡಶೆಟ್ಟಿಯಲ್ಲಿ 2-2-1892ರಲ್ಲಿನ ಗುರುಪಾದಯ್ಯ ಮತ್ತು ನೀಲಮ್ಮ ದಂಪತಿ ಪುತ್ರರಾಗಿ ಜನಿಸಿದರು. ಇವರು ಮೈಸೂರಿನ ಗೌರಿಶಂಕರಸ್ವಾಮಿ ಅವರಿಂದ ಕರ್ನಾಟಕ ಸಂಗೀತವನ್ನು, ಉಸ್ತಾದ್ ಅಬ್ದುಲ್ ವಾಹಿದ್‌ಖಾನ್ ಮತ್ತು ನೀಲಕಂಠ ಬುವಾ ಬಳಿ ಹಿಂದೂಸ್ತಾನಿ ಸಂಗೀತವನ್ನು ಅಭ್ಯಸಿಸುತ್ತಾರೆ. ನಂತರ ಅಂಧ ಅನಾಥ ಮಕ್ಕಳಿಗೆ ಸಂಗೀತ ತರಬೇತಿ ನೀಡಲು ಆರಂಭಿಸಿದರು. ಮುಂದೆ ಗದುಗಿನ ಬಸರಿಗಿಡದ ವೀರಪ್ಪನವರು ದಾನ ನೀಡಿದ ಜಾಗದಲ್ಲಿ ವೀರೇಶ್ವರ ಪುಣ್ಯಾಶ್ರಮವನ್ನು ಸ್ಥಾಪಿಸಿ ಹಲವಾರು ಶಿಷ್ಯರನ್ನು ಬೆಳೆಸುತ್ತಾರೆ. ಗಾನವಿಶಾರದ, ಗಾನಕಲಾನಿಧಿ, ಸಂಗೀತ ಸಾಗರ, ಸಂಗೀತ ಸಾಮ್ರಾಟ್, ಉಭಯ ಗಾನಾಚಾರ ಪ್ರಶಸ್ತಿಗಳಿಗೆ ಭಾಜನರಾಗಿದರು ಎಂದರು.ಸಾನ್ನಿಧ್ಯ ವಹಿಸಿದ್ದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯ ಡಾ. ಬಸವಕುಮಾರ ಸ್ವಾಮಿ ಮಾತನಾಡಿ ಸಾವಿರಾರು ಬದುಕುಗಳಿಗೆ ಕಣ್ಣಿಲ್ಲದ ವ್ಯಕ್ತಿ ಕಣ್ಣಾಗುತ್ತಾರೆಂದರೆ ಎಷ್ಟು ಅವಿಸ್ಮರಣೀಯವಲ್ಲವೆ. ಪುಟ್ಟರಾಜ ಗವಾಯಿಗಳು ಕಣ್ಣಿಲ್ಲದಿದ್ದರೂ ಒಂದು ಸಂಸ್ಥೆಯನ್ನು ಸುದೀರ್ಘ ಕಾಲ ಮುನ್ನೆಡೆಸಿದ್ದುಅದ್ಬುತ ಸಾಧನೆ.ಉತ್ತರ ಕರ್ನಾಟಕದಲ್ಲಿ ಗವಾಯಿಗಳೆಂದರೆ ಎಲ್ಲಿಲ್ಲದ ಭಕ್ತಿ. ಅಲ್ಲಿ ಇಂದಿಗೂ ಯಾವುದೇ ಕಾರ್ಯ ನಡೆದರೂ ತುಲಾಭಾರ ನಡೆಯುತ್ತದೆ. ಅದರಂತೆ ಜಯದೇವ ಜಗದ್ಗುರುಗಳೂ ಸಹ ತನಗಾಗಿ ಬದುಕಿದವರಲ್ಲ. ಬಡವರಿಗಾಗಿ ಬಡಮಕ್ಕಳಿಗೋಸ್ಕರ ದುಡಿದಂತವರಾಗಿದ್ದಾರೆಂದು ಸ್ಮರಿಸಿದರು.ಬಸವಮುರುಘೇಂದ್ರ ಸ್ವಾಮೀಜಿ, ಆಡಳಿತ ಮಂಡಳಿ ಸದಸ್ಯರಾದ ಎಸ್.ಎನ್. ಚಂದ್ರಶೇಖರ್ ,ವಿವಿಧ ಸಂಘಟನೆ ಸಮಾಜಗಳ ಪದಾಧಿಕಾರಿಗಳಾದ ಎಸ್. ವೀರೇಶ್, ಸಿದ್ದಾಪುರದ ಮಲ್ಲಿಕಾರ್ಜುನಪ್ಪ, ಗಾಯತ್ರಿ ಶಿವರಾಂ, ಶಾರದಮ್ಮ ರುದ್ರಪ್ಪ, ಬೆಂಗಳೂರು ಆಕಾಶವಾಣಿಯ ಸಂಪತ್ ಕುಮಾರ್, ಲೋಕೇಶ್, ನಂದೀಶ್, ಬಸವರಾಜ ಕಟ್ಟಿ, ಜ್ಞಾನಮೂರ್ತಿ ಟಿ.ಪಿ. ಮತ್ತಿತರರು ಭಾಗವಹಿಸಿದ್ದರು.ಎಸ್.ಜೆ.ಎಂ. ಆಂಗ್ಲ ಮಾಧ್ಯಮಿಕ ಶಾಲೆಯ ನಿರ್ವಹಣೆಯಲ್ಲಿ ನಡೆದ ಸಮಾರಂಭದ ಆರಂಭಕ್ಕೆ ಜಮುರಾ ಕಲಾವಿದರು ವಚನ ಪ್ರಾರ್ಥಿಸಿದರು. ವಿದ್ಯಾ ಸ್ವಾಗತಿಸಿದರು. ಮಾಲಾ ನಾಗರಾಜ್ ನಿರೂಪಿಸಿದರು. ಹೇಮಂತ್ ನಾಗರಾಜ್ ವಂದಿಸಿದರು.