ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಶನಿವಾರ ‘ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ (ಸ)’ ಕುರಿತ ಸೀರತ್ ಅಭಿಯಾನ-2026ರ ವಿಚಾರಗೋಷ್ಠಿ ನಡೆಯಿತು.
ಕೊಪ್ಪಳ: ಕ್ರಾಂತಿ ಎಂದರೆ ಸಂಘರ್ಷ ಅಥವಾ ಗಲಭೆಯಲ್ಲ; ಬದಲಾಗಿ ಪ್ರವಾದಿ ಮುಹಮ್ಮದ್ (ಸ) ಅವರು ಜಗತ್ತಿನಲ್ಲಿ ತಂದ ಸಕಾರಾತ್ಮಕ ಬದಲಾವಣೆ, ಸುಧಾರಣೆ ಹಾಗೂ ಮಾನವೀಯ ಮೌಲ್ಯಗಳ ಸ್ಥಾಪನೆಯಾಗಿದೆ ಎಂದು ಖ್ಯಾತ ವಿದ್ವಾಂಸ, ಪ್ರವಚನಕಾರ ಹಾಗೂ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಘಟಕದ ಕಾರ್ಯದರ್ಶಿ ಮುಹಮ್ಮದ್ ಕುಂಞ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಶನಿವಾರ ಆಯೋಜಿಸಿದ್ದ ‘ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ (ಸ)’ ಕುರಿತ ಸೀರತ್ ಅಭಿಯಾನ-2026ರ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವ್ಯಕ್ತಿತ್ವವು ಪರಿಪೂರ್ಣವಾಗಿರಬೇಕು. ಜಗತ್ತಿನಲ್ಲಿ ಹಲವು ಸುಧಾರಕರು ನಿರ್ದಿಷ್ಟ ಕ್ಷೇತ್ರಗಳಲ್ಲಿ ಮಾತ್ರ ಬದಲಾವಣೆ ತಂದಿರಬಹುದು. ಆದರೆ ಪ್ರವಾದಿ ಮುಹಮ್ಮದ್ (ಸ) ಅವರ 23 ವರ್ಷಗಳ ಪ್ರವಾದಿತ್ವದ ಬದುಕು ಪ್ರತಿಯೊಂದು ಹಂತದಲ್ಲೂ ಪಾರದರ್ಶಕವಾಗಿದ್ದು, ಅದು ಮಾನವಕುಲಕ್ಕೆ ತೆರೆದ ಪುಸ್ತಕವಾಗಿದೆ ಎಂದರು.
ಅಳವಂಡಿಯ ಶ್ರೀ ಸಿದ್ಧೇಶ್ವರ ಸಂಸ್ಥಾನ ಕಟ್ಟಿಮನಿ ಹಿರೇಮಠದ ಹಾಗೂ ಹೊಳಗುಂದಿ-ಭಾವಿಹಳ್ಳಿ ಪೀಠಾಧಿಪತಿ ಶ್ರೀ ಮರುಳಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ತಮ್ಮ ಮೇಲೆ ನಿಂದನೆ ಹಾಗೂ ಅಪಮಾನದ ಕಸ ಬೀಳುತ್ತಿದ್ದರೂ ಕಸ ಎಸೆದವರಿಗೂ ಕರುಣೆ ತೋರಿದ ಮಹಾತ್ಮ ಪ್ರವಾದಿ ಮುಹಮ್ಮದ್ (ಸ) ಅವರು ಕೇವಲ ಕ್ರಾಂತಿಯ ಜ್ಯೋತಿಯಲ್ಲ, ಶಾಂತಿಯ ಜ್ಯೋತಿಯೂ ಹೌದು ಎಂದು ಹೇಳಿದರು.
ಕೊಪ್ಪಳದ ಎಸ್.ಎಫ್.ಎಸ್. ಶಾಲೆಯ ಪ್ರಾಚಾರ್ಯ ಡಾ. ಫಾದರ್ ಸುದೀಪ್ ಪೌಲ್ ಮಾತನಾಡಿ, ಧರ್ಮಗಳು ಕೇವಲ ಬದುಕುವುದಕ್ಕೆ ಸೀಮಿತವಾಗದೆ ಮನುಷ್ಯನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿ ಸಮಾಜದಲ್ಲಿ ಶಾಂತಿ, ನ್ಯಾಯ ಮತ್ತು ಪ್ರೀತಿಯನ್ನು ನೆಲೆಸುವಂತೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಮೌಲಾನ ಮಹಮ್ಮದ್ ಅಲಿ ಹಿಮಾಯತಿ, ಮೌಲಾನ ಸಿರಾಜ್ ಅಹಮದ್ ರಶಾದಿ, ನಗರಸಭೆ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್, ಗುತ್ತಿಗೆದಾರ ಸುರೇಶ್ ಭೂಮರೆಡ್ಡಿ, ಕರ್ನಾಟಕ ಲಿಂಗಾಯತ ಮಹಾಸಭಾ ರಾಜ್ಯ ಅಧ್ಯಕ್ಷ ಈಶಣ್ಣ ಕೊಲ್ಹಳ್ಳಿ, ನಗರ ಕಾಂಗ್ರೆಸ್ ಅಧ್ಯಕ್ಷ ಎಂ. ಪಾಷಾ ಕಾಟನ್, ಅಂಜುಮನ್ ಕಮಿಟಿ ಅಧ್ಯಕ್ಷ ಎಂ.ಡಿ. ಆಸಿಫ್ ಕರ್ಕಿಹಳ್ಳಿ, ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಮೀನಾಕ್ಷಿ ಬಣ್ಣದಬಾವಿ, ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು, ಸಾಹಿತಿ ಡಾ. ಮಹಂತೇಶ್ ಮಲ್ಲನಗೌಡರ್, ಚಿಂತಕಿ ಸರೋಜಾ ಬಾಕಳೆ, ಸಾಹಿತಿ-ಪತ್ರಕರ್ತ ಜಿ.ಎಸ್. ಗೋನಾಳ, ಹಿರಿಯ ಪತ್ರಕರ್ತ ಸಾದಿಕ್ ಅಲಿ, ವಿಷನ್ ಶಾಲೆಯ ಅಧ್ಯಕ್ಷ ಸೈಯದ್ ಜಮೀರ್ ಖಾದ್ರಿ, ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷ ಶಾಹಿದ್ ಹುಸೇನ್ ತಹಸಿಲ್ದಾರ್, ಮೊಹಮ್ಮದಿಯಾ ಮಸೀದಿ ಕಮಿಟಿ ಅಧ್ಯಕ್ಷ ಶಬ್ಬೀರ್ ಹುಸೇನ್ ತಹಸಿಲ್ದಾರ್, ಮದೀನಾ ಮಸೀದಿ ಕಮಿಟಿ ಅಧ್ಯಕ್ಷ ಮುಸ್ತಫಾ ಕುದುರಿಮೋತಿ, ನದಾಫ್-ಪಿಂಜಾರ್ ಸಂಘದ ರಾಜ್ಯ ಮುಖಂಡ ಶಾಬುದ್ದೀನ್ ಸಾಬ್ ನೂರಬಾಷಾ, ಉದ್ಯಮಿ ಶರಣಪ್ಪ ಸಜ್ಜನ್, ವೆಲ್ಫೇರ್ ಪಾರ್ಟಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸಬಿಹಾ ಪಟೇಲ್, ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ಘಟಕದ ರಾಜ್ಯ ಸಹ ಕಾರ್ಯದರ್ಶಿ ಉಮೇರಾ ಫಾರೂಕ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಿಜ್ವಾನ ಬೇಗಂ ಹಾಗೂ ಸ್ಥಾನೀಯ ಅಧ್ಯಕ್ಷೆ ಉಮ್ಮೆ ಸಲ್ಮಾ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.