ಶ್ರೀಶೈಲ ಮಠದ
ಬೆಳಗಾವಿ : ಹಿರೇಬಾಗೇವಾಡಿ ಬಳಿ ನಿರ್ಮಾಣವಾಗುತ್ತಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ (ಆರ್‌ಸಿಯು) ನಿರ್ಲಕ್ಷ್ಯ ಧೋರಣೆ ನೀತಿಯಿಂದ ಈ ಭಾಗದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಮೀನುಗಳಿಗೆ ತೆರಳುವ ರಸ್ತೆ ಮಾರ್ಗದಲ್ಲಿ ನಿತ್ಯ ನಿರಂತರ ಟಿಪ್ಪರ್‌ಗಳು, ಲಾರಿಗಳು ಹಾಗೂ ಬೋರ್‌ವೆಲ್ ವಾಹನಗಳು ಸಂಚರಿಸುತ್ತಿವೆ. ಇದರಿಂದ ಭಾರೀ ಧೂಳು ಬರುತ್ತಿರುವುದರಿಂದ ರೈತರ ಬೆಳೆಗಳಿಗೆ ಮಾರಕವಾಗುತ್ತಿದೆ. ಬಂದ ಬೆಳೆ ಕೈಗೆ ಸೇರದ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ಆರೋಪ ಕೇಳಿಬಂದಿದೆ.
ಬೆಳೆ ಉತ್ತಮವಾಗಿದ್ದರೂ ಧೂಳಿನಿಂದ ಬೆಳೆ ಸಂಪೂರ್ಣ ಮುಚ್ಚಿಹೋಗಿದೆ. ಕಬ್ಬು, ಜೋಳ ಹಾಗೂ ತರಕಾರಿ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ದರ ಸಿಗದ ಸ್ಥಿತಿ ನಿರ್ಮಾಣವಾಗಿದೆ. ಹೊಲದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆದ ಬೆಳೆಗಳು ಧೂಳಿನಲ್ಲೇ ಕಮರಿ ಹೋಗುತ್ತಿದ್ದು, ರೈತರು ಆರ್ಥಿಕ ನಷ್ಟಕ್ಕೆ ಸಿಲುಕಿದ್ದಾರೆ.ಹೊಲಗಳಿಗೆ ಸಂಪರ್ಕಿಸುವ ರಸ್ತೆ ಮಾರ್ಗವನ್ನೇ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ಆರ್‌ಸಿಯು, ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಅವರ ಜಮೀನನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ, ರಸ್ತೆ ಮಾರ್ಗದ ಬದಿಯಲ್ಲೇ ಕೊಳವೆ ಬಾವಿ ಕೊರೆಸಲಾಗಿದ್ದು, ಇದಕ್ಕೂ ರೈತರ ಒಪ್ಪಿಗೆ ಪಡೆದಿಲ್ಲ ಎಂದು ಇಲ್ಲಿಯ ರೈತರು ದೂರಿದ್ದಾರೆ.ಆರ್‌ಸಿಯು ನೂತನ ಕ್ಯಾಂಪಸ್ ಪ್ರವೇಶಕ್ಕಾಗಿ ಪ್ರತ್ಯೇಕ ರಸ್ತೆ ಮಾರ್ಗ ನಿರ್ಮಿಸಿದ್ದರೂ, ಹಿರೇಬಾಗೇವಾಡಿ ಟೋಲ್ ಇರುವ ಕಾರಣ ಟೋಲ್ ಶುಲ್ಕ ಪಾವತಿಸಬೇಕಾಗುತ್ತದೆ ಎಂಬ ನೆಪದಲ್ಲಿ ಆ ಮಾರ್ಗವನ್ನು ಬಳಸದೆ, ರೈತರ ಹೊಲಗಳ ಮಧ್ಯೆ ಹಾದು ಹೋಗುವ ರಸ್ತೆಯನ್ನೇ ವಾಹನ ಸಂಚಾರಕ್ಕೆ ಬಳಸಲಾಗುತ್ತಿದೆ. ಪರಿಣಾಮ, ಟಿಪ್ಪರ್, ಲಾರಿ ಹಾಗೂ ಬೋರ್‌ವೆಲ್ ವಾಹನಗಳು ನಿತ್ಯ ನಿರಂತರವಾಗಿ ಓಡಾಡುತ್ತಿವೆ.
ಯಾವ ರೈತರ ಗಮನಕ್ಕೂ ತಾರದೇ ರಸ್ತೆ ವಿಸ್ತರಣೆ ನೆಪದಲ್ಲಿ ಆರ್‌ಸಿಯು ಅಧಿಕಾರಿಗಳು ರೈತರ ಜಮೀನಿನಲ್ಲಿ ಮಾರ್ಕಿಂಗ್ ಮಾಡಿದ್ದಾರೆ. ಬೋರ್‌ವೆಲ್ ಪೈಪ್‌ಲೈನ್‌ಗೆ ಅಳವಡಿಸುವ ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ಅಗೆಯಲಾಗಿದ್ದು, ಇದನ್ನು ವಿರೋಧಿಸಿದ ರೈತರು ಕಾಮಗಾರಿಯನ್ನು ತಡೆದಿದ್ದಾರೆ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಅಕ್ರಮವಾಗಿ ರಸ್ತೆ ಕಾಮಗಾರಿ ಕೈಗೊಂಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಇಲ್ಲಿನ ಸುಮಾರು 2 ಕಿಮೀ ರಸ್ತೆ ಮಾರ್ಗದ ಸುತ್ತಮುತ್ತಲಿನ ಬೆಳೆಗಳು ಸಂಪೂರ್ಣ ಧೂಳುಮಯವಾಗಿವೆ. ಸಾಲ ಮಾಡಿ ಬೆಳೆದ ಕಬ್ಬಿನ ಬೆಳೆಗಳಿಗೆ ತೂರಾಯಿಗಳು ಬಂದಿದ್ದು, ಧೂಳಿನ ಕಾರಣ ಸಕ್ಕರೆ ಕಾರ್ಖಾನೆಯವರು ಕಬ್ಬನ್ನು ಸಾಗಿಸಲು ಹಿಂದೇಟು ಹಾಕುತ್ತಿದ್ದಾರೆ. ಧೂಳು ತೆಗೆದುಹಾಕಲು ಬೆಂಕಿ ಹಚ್ಚಿದರೆ ಮಾತ್ರ ಕಬ್ಬು ತೆಗೆದುಕೊಂಡು ಹೋಗುವುದಾಗಿ ಹೇಳಲಾಗುತ್ತಿದೆ. ಇದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇತರೆ ಬೆಳೆಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಹೂ ಕೋಸಿನ ಮೇಲೆ ಧೂಳು ಆವರಿಸಿರುವುದರಿಂದ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ. ದನಕರುಗಳು ಸಹ ಧೂಳಿನಿಂದ ಕೂಡಿದ ಮೇವನ್ನು ತಿನ್ನುತ್ತಿಲ್ಲ. ನಾವು ಯಾವುದೇ ಕಾರಣಕ್ಕೂ ನಮ್ಮ ಫಲವತ್ತಾದ ಕೃಷಿ ಭೂಮಿಯನ್ನು ಕೊಡುವುದಿಲ್ಲ. ರೈತರ ಜಮೀನಿನಲ್ಲಿ ರಸ್ತೆ ನಿರ್ಮಿಸಲಾಗಿದೆ. ಇದನ್ನು ನಾವು ಸಹಿಸುವುದಿಲ್ಲ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ರಸ್ತೆ ಕಾಮಗಾರಿ ವಿರೋಧಿಸಿ ಬುಧವಾರ ದಿಢೀರನೇ ರೈತರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಆರ್‌ಸಿಯು ಉಪಕುಲಪತಿ ಶ್ರೀಧರ ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದರು. ಆದರೆ, ಕಾಮಗಾರಿ ತಕ್ಷಣ ಸ್ಥಗಿತಗೊಳಿಸುವಂತೆ ರೈತರು ಪಟ್ಟು ಹಿಡಿದರು. ರೈತರ ಒತ್ತಾಯದ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಈ ವೇಳೆ ಪ್ರತಿಭಟನಾನಿರತ ರೈತರು, ಆರ್‌ಸಿಯು ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ್ ಸ್ವತಃ ಸ್ಥಳಕ್ಕೆ ಭೇಟಿ ನೀಡದ ಹೊರತು ನಾವು ಸ್ಥಳಬಿಟ್ಟು ಕದಲುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನಂತರ ಜ.19ರಂದು ಕುಲಪತಿ ಸ್ಥಳಕ್ಕೆ ಭೇಟಿ ನೀಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈ ಬಿಟ್ಟಿದ್ದಾರೆ.
ಧೂಳಿನ ರಸ್ತೆಯಲ್ಲೇ ಚರ್ಚೆ:
ರಸ್ತೆ ಕಾಮಗಾರಿ ಹಾಗೂ ಧೂಳು ಮಾಲಿನ್ಯದಿಂದ ಸಂಕಷ್ಟಕ್ಕೆ ಸಿಲುಕಿರುವ ಹಿರೇಬಾಗೇವಾಡಿ ರೈತರು, ಕಚೇರಿ ಅಥವಾ ಎಸಿ ರೂಮಿನ ಸಭೆಗಳನ್ನು ತಿರಸ್ಕರಿಸಿ, ಸಮಸ್ಯೆ ಇರುವ ಸ್ಥಳದಲ್ಲೇ ಚರ್ಚೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ. ನಮ್ಮ ಸಮಸ್ಯೆ ಈ ಧೂಳು ತುಂಬಿದ ರಸ್ತೆಯಲ್ಲೇ ಇದೆ. ಹೀಗಾಗಿ ಚರ್ಚೆಯೂ ಇಲ್ಲೇ ನಡೆಯಬೇಕು. ಕುಲಪತಿಗಳು ನಮ್ಮ ಬೆಳೆಗಳ ಮೇಲೆ ಕುಳಿತಿರುವ ಧೂಳನ್ನು ಕಣ್ಣಾರೆ ನೋಡಲಿ. ನಮ್ಮ ಜೊತೆಗೆ ಇದೇ ರಸ್ತೆಯಲ್ಲಿ ಕುಳಿತು ಊಟ ಮಾಡಲಿ. ಆಗ ಮಾತ್ರ ರೈತನ ಕಷ್ಟ ಅವರಿಗೆ ಅರ್ಥವಾಗುತ್ತದೆ ಎಂದು ರೈತರು ಆಗ್ರಹಿಸಿದ್ದಾರೆ.
ಹೊಲದ ದಾರಿಯಲ್ಲಿ ಟಿಪ್ಪರ್-ಲಾರಿ ನಿತ್ಯ ಓಡಾಡುವುದರಿಂದ ನಮ್ಮ ಹೊಲಗಳೆಲ್ಲ ಧೂಳಿನ ಗೋದಾಮಾಗಿವೆ. ಆರ್‌ಸಿಯು ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರು ಪ್ರಾಣ ಸಂಕಟ ಅನುಭವಿಸುತ್ತಿದ್ದೇವೆ. ಪರಿಹಾರ ನೀಡದೇ ನಮ್ಮ ಫಲವತ್ತಾದ ಕೃಷಿ ಜಮೀನನ್ನು ಕಬಳಿಸಲು ಯತ್ನಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ನಮ್ಮ ಭೂಮಿಯನ್ನು ನಾವು ಬಿಟ್ಟು ಕೊಡುವುದಿಲ್ಲ.
- ತಮ್ಮಣ್ಣ ಗಾಣಿಗೇರ, ನೊಂದ ರೈತ
ನಮ್ಮ ಅನುಮತಿ ಇಲ್ಲದೇ ಜಮೀನಿನಲ್ಲಿ ಪಾರ್ಕಿಂಗ್ ಮಾಡಿ ರಸ್ತೆ ಕಾಮಗಾರಿ ಕೈಗೊಂಡಿದ್ದಾರೆ. ಇದು ರೈತ ವಿರೋಧಿ ನಡೆ. ಧೂಳು ಇರುವ ಕಾರಣ ಸಕ್ಕರೆ ಕಾರ್ಖಾನೆಯವರು ಕಬ್ಬನ್ನು ತೆಗೆದುಕೊಳ್ಳುತ್ತಿಲ್ಲ. ಆರ್‌ಸಿಯು ನೂತನ ಕ್ಯಾಂಪಸ್‌ಗೆ ಪ್ರತ್ಯೇಕ ರಸ್ತೆ ಇದ್ದರೂ, ಟೋಲ್ ತಪ್ಪಿಸಲು ನಮ್ಮ ಹೊಲದ ರಸ್ತೆಯನ್ನೇ ಬಳಸಲಾಗುತ್ತಿದೆ. ಇದರಿಂದ ನಮ್ಮ ಬದುಕೇ ಹಾಳಾಗಿದೆ.
- ಉಮೇಶ ರೊಟ್ಟಿ, ನೊಂದ ರೈತ