ಮೋಜು ಮಸ್ತಿ, ಕ್ಷಣಿಕ ಸುಖಕ್ಕಾಗಿ ಮಾದಕ ದ್ರವ್ಯ ಸೇವನೆ ಸೇರಿದಂತೆ ಹಲವು ವ್ಯಸನಗಳಿಗೆ ದಾಸರಾಗುತ್ತಿರುವ ಯುವ ಸಮೂಹ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ನೂರಾರು ಕುಟುಂಬಗಳು ಬಲಿಯಾಗುತ್ತಿರುವುದು ವಿಷಾದನೀಯ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಮೋಜು ಮಸ್ತಿ, ಕ್ಷಣಿಕ ಸುಖಕ್ಕಾಗಿ ಮಾದಕ ದ್ರವ್ಯ ಸೇವನೆ ಸೇರಿದಂತೆ ಹಲವು ವ್ಯಸನಗಳಿಗೆ ದಾಸರಾಗುತ್ತಿರುವ ಯುವ ಸಮೂಹ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ನೂರಾರು ಕುಟುಂಬಗಳು ಬಲಿಯಾಗುತ್ತಿರುವುದು ವಿಷಾದನೀಯ ಎಂದು ಆದಿಚುಂಚನಗಿರಿ ಬಿ.ಜಿ.ನಗರದ ಶಾಖೆಯ ಸತ್ಕೀರ್ತಿನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಬಿ.ಜಿ.ನಗರದದ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಬೆಳ್ಳೂರು ಪೊಲೀಸ್ ಠಾಣೆಯ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಸೇವನೆ, ದೌರ್ಜನ್ಯ ಮತ್ತು ಅನಧಿಕೃತ ಸಾಗಣೆ ವಿರುದ್ಧದ ದಿನಾಚರಣೆ ಅಂಗವಾಗಿ ಗುರುವಾರ ಆಯೋಜಿಸಿದ್ದ ಜನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾದಕ ವಸ್ತು ಎಂಬುದು ಸೇವಿಸುವವನ ಜೀವನ ಹಾಳು ಮಾಡುವುದಲ್ಲದೆ ನೆರೆಹೊರೆಯ ಸಮಾಜವನ್ನು ಕೂಡ ಹಾಳು ಮಾಡುತ್ತದೆ. ಅಷ್ಟು ಮಾತ್ರವಲ್ಲದೆ ವ್ಯಸನಕ್ಕೊಳಗಾದ ವ್ಯಕ್ತಿಯ ಕುಟುಂಬ ಹಾಗೂ ಅದರಿಂದ ವ್ಯತಿರಿಕ್ತ ಪರಿಣಾಮಕ್ಕೆ ತುತ್ತಾದ ಕುಟುಂಬಗಳೆರಡು ಕೂಡ ಬೀದಿಗೆ ಬರುವಂತಾಗುತ್ತದೆ ಎಂದರು.
ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮು ಮಾತನಾಡಿ, ಮಾದಕ ವಸ್ತುಗಳ ಬಳಕೆ, ಸಂಗ್ರಹಣೆ, ಸಾಗಾಟ, ಮತ್ತು ಮಾರಾಟ, ಎಲ್ಲವೂ ಕಾನೂನಿಗೆ ವಿರುದ್ಧವಾಗಿದೆ. ಸಮಾಜದಲ್ಲಿ ಮಾದಕ ವಸ್ತು ದಿನ ವಿರುದ್ಧ ನಿರಂತರ ಹೋರಾಟದ ಅಗತ್ಯತೆ ಇದೆ. ಆದಿಚುಂಚನಗಿರಿ ವಿವಿ ಕ್ಯಾಂಪಸ್‌ನ್ನು ಮಾದಕ ವಸ್ತುಗಳ ಮುಕ್ತ ಕ್ಯಾಂಪಸ್ ಮಾಡೋಣ ಎಂದು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ನಾಗಮಂಗಲ ಡಿವೈಎಸ್ಪಿ ಬಿ.ಚಲುವರಾಜು, ಬೆಳ್ಳೂರು ಪೊಲೀಸ್ ಠಾಣೆ ಪಿಎಸ್‌ಐ ವೈ.ಎನ್.ರವಿಕುಮಾರ್ ಮಾತನಾಡಿದರು. ನಂತರ ಆಸ್ಪತ್ರೆ ಕ್ಯಾಂಪಸ್‌ನಿಂದ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬೆಳ್ಳೂರು ಕ್ರಾಸ್‌ವರೆಗೆ ಮಾದಕ ದ್ರವ್ಯ ಮುಕ್ತ ಸಮಾಜ ಎಂಬ ಘೋಷಣೆಗಳೊಂದಿಗೆ ಜನಜಾಗೃತಿ ಜಾಥಾ ನಡೆಸಿದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ವೈದ್ಯಕೀಯ ವಿದ್ಯಾರ್ಥಿಗಳು, ನಸಿಂಗ್ ವಿದ್ಯಾರ್ಥಿಗಳು, ಸ್ವಯಂ ಸೇವಕರು, ಉಪನ್ಯಾಸಕರು ಹಾಗೂ ಪೊಲೀಸ್ ಸಿಬ್ಬಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು.
ಆಸ್ಪತ್ರೆ ವೈದ್ಯರಾದ ಡಾ.ರವಿ ಕೆ.ಎಸ್, ಡಾ.ಆಲಿಯಾ ನುಸ್ರತ್, ಡಾ.ರಾಘವೇಂದ್ರ ಎಸ್.ಕೆ, ಹಾಗೂ ಆಸ್ಪತ್ರೆಯ ಪಿಆರ್‌ಒ ಧಮೇಂದ್ರ ಸೇರಿದಂತೆ ಹಲವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.