ಪ್ರದೀಪ್ ಮಾವಿನಕೈ
ಅಭಿವೃದ್ಧಿಯ ಹೆಸರಿನಲ್ಲಿ ಅಣೆಕಟ್ಟು ಕಟ್ಟಲು ಅಂದು ಭೂಮಿ ನೀಡಿದ ಶರಾವತಿ ಸಂತ್ರಸ್ತರು, ಇಂದು ಅರಣ್ಯ ಇಲಾಖೆಯ ''''''''ಒಕ್ಕಲೆಬ್ಬಿಸುವ'''''''' ನೋಟಿಸ್‌ನಿಂದಾಗಿ ಬೀದಿಗೆ ಬೀಳುವ ಆತಂಕ ಎದುರಿಸುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಟ್ಟಿನಕಾರು ಗ್ರಾಮದ ಎಡಮನೆ ಭಾಗದ ಸುಮಾರು 16 ಕುಟುಂಬಗಳ ಬದುಕು ಇಂದು ಕಗ್ಗಂಟಾಗಿದೆ. ಕಳೆದ 60 ವರ್ಷಗಳಿಂದ ಅಡಿಕೆ, ಭತ್ತ, ಕಾಳುಮೆಣಸು ಬೆಳೆದು ಜೀವನ ಸಾಗಿಸುತ್ತಿರುವ ಈ ರೈತರಿಗೆ ಈಗ ಅರಣ್ಯ ಇಲಾಖೆಯು ಜಾಗ ಖಾಲಿ ಮಾಡುವಂತೆ ತಾಕೀತು ಮಾಡಿರುವುದು ಸರ್ಕಾರದ ಅಮಾನವೀಯ ಧೋರಣೆಗೆ ಕನ್ನಡಿ ಹಿಡಿದಿದೆ.1946ರಲ್ಲಿ ಮಡೆನೂರು ಅಣೆಕಟ್ಟು ನಿರ್ಮಾಣವಾದ ನಂತರ ಕಂದಾಯ ಹಾಗೂ ಕೆಪಿಸಿಯ ಸೂಚನೆಯ ಮೇರೆಗೆ ಎಡಮನೆ ಗ್ರಾಮದಲ್ಲಿ ಶರಾವತಿ ಸಂತ್ರಸ್ತರು ನೆಲೆಸಿರುತ್ತಾರೆ.
1972ರಲ್ಲಿ ಅಭಯಾರಣ್ಯ ತದನಂತರದಲ್ಲಿ ಕಂದಾಯ ಹಾಗೂ ಕೆಪಿಸಿ ಇಲಾಖೆಯ ಮೌಖಿಕ ಸೂಚನೆಯಂತೆ ಅದಕ್ಕೆ ಪೂರಕವಾಗಿ ಅರಣ್ಯ ಇಲಾಖೆ ಈ ಊರು ಹಾಗೂ ಕಾಡನ್ನು ಪ್ರತ್ಯೇಕಿಸಿ ಅಗಳ ತೋಡಿ, ನಂತರ ಅಗಳದ ಒಳಗಡೆ ಇರುವ ಪ್ರದೇಶದಲ್ಲಿ ವ್ಯವಸಾಯ ಮಾಡಲು ಮೌಖಿಕವಾಗಿ ಸೂಚನೆ ನೀಡಲಾಗಿತ್ತು.
ನಮ್ಮ ಭೂಮಿ ನೀಡಿದಾಗ ನಮ್ಮನ್ನು ಸಲಹುವ ಭರವಸೆ ನೀಡಿದ್ದ ಸರ್ಕಾರ, ಈಗ ನಮ್ಮನ್ನೇ ಅಕ್ರಮ ಒತ್ತುವರಿದಾರರು ಎಂದು ಕರೆಯುತ್ತಿರುವುದು ಎಷ್ಟು ನ್ಯಾಯ? ಎಂದು ಸ್ಥಳೀಯ ರೈತರು ಪ್ರಶ್ನಿಸುತ್ತಿದ್ದಾರೆ.
ಮಾತಿಗೆ ತಪ್ಪಿದ ಸರ್ಕಾರ: 2015ಕ್ಕಿಂತ ಹಿಂದೆ ಸಾಗುವಳಿ ಮಾಡುತ್ತಿರುವ ಸಣ್ಣ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಸರ್ಕಾರ ಹೇಳುತ್ತಲೇ ಬಂದಿದೆ. ಆದರೆ, ಈಗ ಎಸಿಎಫ್ ನ್ಯಾಯಾಲಯದ ಆದೇಶದ ನೆಪವೊಡ್ಡಿ ಪೊಲೀಸರ ರಕ್ಷಣೆಯೊಂದಿಗೆ ತೆರವು ಕಾರ್ಯಾಚರಣೆಗೆ ಮುಂದಾಗಿರುವುದು ದ್ವಂದ್ವ ನೀತಿಯನ್ನು ತೋರಿಸುತ್ತದೆ.
ಹೋರಾಟದ ಎಚ್ಚರಿಕೆ: ಕೆಡಿಪಿ ಸದಸ್ಯ ಜಿ.ಟಿ. ಸತ್ಯನಾರಾಯಣ, ಮಾಜಿ ತಾಪಂ ಅಧ್ಯಕ್ಷ ಹಕ್ರೆ ಮಲ್ಲಿಕಾರ್ಜುನ್. ಸೇರಿದಂತೆ ಹಾಗೂ ವಿವಿಧ ರೈತ ಸಂಘಟನೆಗಳ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಧೈರ್ಯ ತುಂಬಿದ್ದಾರೆ. "ಮನೆ-ಜಮೀನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ, ಬೇಕಿದ್ದರೆ ಇಲ್ಲಿಯೇ ನಮ್ಮನ್ನು ಹೂತು ಹಾಕಿ " ಎಂದು ಸಂತ್ರಸ್ತ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ.
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ದಾಖಲಾಗಿದ್ದ ಅರಣ್ಯ ಅತಿಕ್ರಮಣ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಸಿಎಫ್ ನ್ಯಾಯಾಲಯದ ಆದೇಶದ ಮೇರೆಗೆ ಫೆ. 6ರಂದು ಕಾರ್ಗಲ್ ವನ್ಯಜೀವಿ ವಿಭಾಗದ ಅಧಿಕಾರಿಗಳು ಬಿಗಿ ಪೊಲೀಸ್ ಭದ್ರತೆಯೊಂದಿಗೆ ತೆರವು ಕಾರ್ಯಾಚರಣೆಗೆ ಮುಂದಾದರು.ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸುತ್ತಿದ್ದಂತೆ, ಸ್ಥಳೀಯ ರೈತರು ಮತ್ತು ಮಹಿಳೆಯರು ಕಾರ್ಯಾಚರಣೆಯನ್ನು ತಡೆದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ದೀರ್ಘಕಾಲದ ಸಾಗುವಳಿ: ಕಳೆದ 60-70 ವರ್ಷಗಳಿಂದ ಈ ಭೂಮಿಯನ್ನು ನಂಬಿ ಜೀವನ ಸಾಗಿಸುತ್ತಿದ್ದೇವೆ. 1998-99ರ ಅವಧಿಯಲ್ಲೇ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದೇವೆ.
2018ಕ್ಕಿಂತ ಮೊದಲು ಸಾಗುವಳಿ ಮಾಡುತ್ತಿರುವ ರೈತರನ್ನು ತೆರವುಗೊಳಿಸಬಾರದು ಎಂಬ ಸರ್ಕಾರದ ಇತ್ತೀಚಿನ ನಿರ್ದೇಶನವಿದೆ. ಆದರೂ ಅಧಿಕಾರಿಗಳು ನೋಟಿಸ್ ನೀಡಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ರೈತ ಮುಖಂಡ ಹೂವಪ್ಪ ಆಕ್ರೋಶ ವ್ಯಕ್ತಪಡಿಸಿದರು.---
ಅರಣ್ಯ ಸಚಿವ ಈಶ್ವರ್ ಖಂಡ್ರೆಯವರು ಮೂರು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲಿಬ್ಬಿಸುವುದಿಲ್ಲ ಎನ್ನುವ ಕಾನೂನು, ಮಲೆನಾಡು ಪ್ರದೇಶದಲ್ಲಿ ಇದರ ವಿರುದ್ಧವಾಗಿ ಕೆಲಸ ಮಾಡುತ್ತಿದ್ದು, ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಶರಾವತಿ ಸಂತ್ರಸ್ತರ ಬಗ್ಗೆ ವಿಶೇಷ ಟಾಸ್ಕ್ ಪೋರ್ಸ್ ರಚನೆ ಮಾಡಿ ಮೂರು ತಿಂಗಳ ಅವಧಿಯಲ್ಲಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿದ ಮಾತು ಈಗ ಮೂರು ವರ್ಷ ಕಳೆದರೂ ನೆನೆಗುದಿಯಲಿದ್ದು, ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ತಕ್ಷಣ ಸರ್ಕಾರ ಇದರ ಬಗ್ಗೆ ಗಮನ ಹರಿಸಿ ಅತಿಕ್ರಮವಾಗಿ ಈ ಒಕ್ಕಲೆಬ್ಬಿಸುವ ಪ್ರಕ್ರಿಯೆಯನ್ನು ಕೈಬಿಡಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ.-ಜಿ. ಟಿ. ಸತ್ಯನಾರಾಯಣ. ಕೆಡಿಪಿ ಸದಸ್ಯ.