ಕನ್ನಡಪ್ರಭ ವಾರ್ತೆ ಮಂಡ್ಯ
ಬೂದನೂರು ಉತ್ಸವ ಫೆ. ೨೦ರಿಂದ ೨೨ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಇದರಲ್ಲಿ ಹೆಲಿಟೂರಿಸಂ ಪ್ರಮುಖ ಆಕರ್ಷಣೆಯಾಗಿದೆ. ಮೂರು ದಿನಗಳ ಕಾಲ ನಡೆಯುವ ಹೆಲಿಟೂರಿಸಂ ಜಾಯ್‌ರೈಡ್ಸ್ ಚಟುವಟಿಕೆ ಮಂಡ್ಯ ನಗರಕ್ಕೆ ಹೊಂದಿಕೊಂಡಿರುವ ಚಿಂದಗಿರಿದೊಡ್ಡಿ ಗ್ರಾಮದಲ್ಲಿ ನಡೆಯಲಿದೆ.
ಪ್ರತಿನಿತ್ಯ ಬೆಳಗ್ಗೆ ೧೦ ರಿಂದ ಸಂಜೆ ೫.೩೦ರವರೆಗೆ ಜಾಯ್ ರೈಡ್ ನಡೆಯಲಿದ್ದು, ಒಬ್ಬರಿಗೆ ₹೩೮೦೦ ಟಿಕೆಟ್ ಪಡೆಯಬೇಕಾಗಿದೆ. ಏಳು ನಿಮಿಷಗಳ ಕಾಲ ಹೆಲಿಕ್ಯಾಪ್ಟರ್‌ನಲ್ಲಿ ಹಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಶಾಸಕ ಪಿ. ರವಿಕುಮಾರ್ ವಿಶೇಷ ಆಸಕ್ತಿ ವಹಿಸಿದ್ದಾರೆ.ಆನ್‌ಲೈನ್ ಬುಕಿಂಗ್ :
ಹೆಲಿಕ್ಯಾಪ್ಟರ್ ಜಾಯ್ ರೈಡ್‌ಗಾಗಿ ಆನ್‌ಲೈನ್ ಹಾಗೂ ಆಫ್ ಲೈನ್ ಎರಡು ವಿಧಾನಗಳಲ್ಲಿ ಟಿಕೆಟ್ ಬುಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದ್ದು, https://highkraftaviation.com ವೆಬ್ ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಮುಂಗಡ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ.ಆಫ್‌ಲೈನ್ ಟಿಕೆಟ್ ಬುಕಿಂಗ್ ಮಾಡಲು ರೆಹಮಾನ್ ದೂ. ಸಂಖ್ಯೆ ೯೦೦೮೫೧೬೫೩೯ ಅವರನ್ನು ಸಂಪರ್ಕಿಸಬಹುದು. ಅಥವಾ ಹೆಲಿಕ್ಯಾಪ್ಟರ್ ಜಾಯ್ ರೈಡ್ ನಡೆಯುವ ಸ್ಥಳದಲ್ಲಿ ಸ್ಥಾಪಿಸಲಾಗುವ ಟಿಕೆಟ್ ಕೌಂಟರ್‌ನಲ್ಲಿ ಅಗತ್ಯ ದಾಖಲೆ ಮತ್ತು ಶುಲ್ಕವನ್ನು ಪಾವತಿಸಿ ಟಿಕೆಟ್ ಪಡೆದು ಚಟುವಟಿಕೆಯಲ್ಲಿ ಪಾಲ್ಗೊಳ್ಳಬಹುದು.
ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಿದ ನಂತರ ಟೈಮಿಂಗ್ ಸ್ಲಾಟ್‌ನಲ್ಲಿ ೬ ವಿಧದ ಸಮಯ ಲಭ್ಯವಿದ್ದು, ಅದರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು. ನಂತರ ಭಾಗವಹಿಸುವ ವ್ಯಕ್ತಿಯ ಹೆಸರು, ಮೊಬೈಲ್ ಸಂಖ್ಯೆ, ಇ- ಮೇಲ್, ವಿಳಾಸ, ವಯಸ್ಸು, ಗುರುತಿನ ಚೀಟಿ ವಿವರಗಳನ್ನು ಭರ್ತಿ ಮಾಡಿ ₹೩೮೦೦ ಪಾವತಿಸಬೇಕು. ಈ ಪ್ರಕ್ರಿಯೆ ಯಶಸ್ವಿಯಾದ ನಂತರ ನಗದು ರಸೀದಿ ಮತ್ತು ಟಿಕೆಟ್ ಡೌನ್‌ಲೋಡ್ ಮಾಡಿಕೊಂಡು ಟಿಕೆಟ್‌ನ್ನು ರೈಡ್ ವೇಳೆ ಹಾಜರುಪಡಿಸಿದಲ್ಲಿ ಜಾಯ್ ರೈಡ್‌ಗೆ ಅವಕಾಶ ಲಭ್ಯವಾಗಲಿದೆ.ಕಾರಣಾಂತರಗಳಿಂದ ಜಾಯ್‌ರೈಡ್‌ನಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದಲ್ಲಿ ಹಣವನ್ನು ವಾಪಸ್ಸು ಕೊಡಲಾಗದು. ಬದಲಿಗೆ ಮೂರು ದಿನಗಳಲ್ಲಿ ಯಾವುದಾದರೂ ದಿನ ಪರ್ಯಾಯವಾಗಿ ರೈಡ್ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ.
ಹೆಲಿಕ್ಟಾಪ್ಟರ್‌ನೊಳಗೆ ಯಾವುದೇ ವಿಧದ ಎಲೆಕ್ಟ್ರಾನಿಕ್ ಗೆಜೆಟ್‌ಗಳನ್ನು ಕೊಂಡೊಯ್ಯಲು ಅವಕಾಶವಿರುವುದಿಲ್ಲ. ೫ ವರ್ಷದೊಳಗಿನ ಮಕ್ಕಳಿಗೆ ಹೆಲಿಕ್ಯಾಪ್ಟರ್ ಜಾಯ್ ರೈಡ್‌ಗೆ ಅವಕಾಶವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮುನ್ನೆಚ್ಚರಿಕಾ ಕ್ರಮ:
ಹೆರಿ ಟೂರಿಸಂಗೆ ಸುರಕ್ಷತಾ ಮಾನದಂಡಗಳು, ಅಗತ್ಯ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದ್ದು, ಯಾವುದೇ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಾಹನಗಳ ನಿಲುಗಡೆ, ಸಂಚಾರ ದಟ್ಟಣೆ ನಿರ್ವಹಣೆ, ತುರ್ತು ವೈದ್ಯಕೀಯ ಸೇವೆಗಳ ಸಿದ್ಧತೆ ಹಾಗೂ ಅಗ್ನಿಶಾಮಕ ವ್ಯವಸ್ಥೆ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.--------ವಿವಿಧ ಕಾರ್ಯಕ್ರಮಗಳು :
ಬೂದನೂರು ಉತ್ಸವದ ಅಂಗವಾಗಿ ಫೆ. ೧೭ರಂದು ಬೆಳಗ್ಗೆ ೧೧ ಗಂಟೆಗೆ ಹೊಸಬೂದನೂರು ದೇವಸ್ಥಾನದ ಆವರಣದಲ್ಲಿ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ಫೆ. ೧೮, ೧೯ರಂದು ಕಸಬಾ ಹಾಗೂ ಮಂಡ್ಯ ಗ್ರಾಮಂತರ ೩೮ ಗ್ರಾಮಗಳಲ್ಲಿ ರಂಗೋಲಿ ಸ್ಪರ್ಧೆ, ಅಂದು ಬೆಳಗ್ಗೆ ೯ ಗಂಟೆಗೆ ಕೊಮ್ಮೇರಹಳ್ಳಿಯ ವಿಶ್ವಮಾನವ ಶಾಲಾ ಮೈದಾನದಲ್ಲಿ ಕಬಡ್ಡಿ, ಹಗ್ಗ ಜಗ್ಗಾಟ, ಗೋಣಿಚೀಲ ಓಟ, ಸೈಕಲ್ ರೇಸ್, ಓಟದ ಸ್ಪರ್ಧೆ, ಲೆಮನ್ ಸ್ಪೂನ್ ಆಟಗಳು ನಡೆಯಲಿವೆ.ಫೆ. ೨೦ರಂದು ಬೆಳಗ್ಗೆ ೧೦ಕ್ಕೆ ಚಿಕ್ಕಮಂಡ್ಯ, ಗೋಪಾಲಪುರ ಮಧ್ಯದ ಮೈದಾನದಲ್ಲಿ ಹೆಲಿಕ್ಯಾಪ್ಟರ್ ರೈಡ್ ಉದ್ಘಾಟನೆ, ಮಧ್ಯಾಹ್ನ ೩ಕ್ಕೆ ಹೊಸಬೂದನೂರು ದೇವಸ್ಥಾನದ ಆವರಣದಲ್ಲಿ ಆಹಾರ ಮೇಳಕ್ಕೆ ಚಾಲನೆ, ೪ ಗಂಟೆಗೆ ಹಳೇಬೂದನೂರು ಗ್ರಾಮದಿಂದ ಬೃಹತ್ ಮೆರವಣಿಗೆ, ಹೊಸಬೂದನೂರು ದೇವಸ್ಥಾನ ಆವರಣದ ಬೃಹತ್ ಮೈದಾನದಲ್ಲಿ ಗುರುಕಿರಣ್ ನೈಟ್, ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟ ಹಾಗೂ ಹಲವಾರು ಚಲನಚಿತ್ರ ನಟ ನಟಿಯರು ಭಾಗವಹಿಸುವರು. ಫೆ. ೨೧ರಂದು ರಾತ್ರಿ ಹೊಸಬೂದನೂರಿನ ಬೃಹತ್ ಮೈದಾನದ ಆವರಣದಲ್ಲಿ ರಾಜೇಶ್ ಕೃಷ್ಣನ್ ಸಂಭ್ರಮ ಹಾಗೂ ಆಲ್ ಓಕೆ ತಂಡದಿಂದ ಮ್ಯೂಸಿಕ್ ನಡೆಯಲಿದೆ.
ಸಾಮಾನ್ಯವಾಗಿ ಮಲಗಿರುವ ಭಂಗಿಯಲ್ಲಿರುವ ಶ್ರೀ ಅನಂತಪದ್ಮನಾಭ ದೇವಾಲಯಗಳು ಇವೆ. ಆದರೆ ನಿಂತಿರುವ ಭಂಗಿಯಲ್ಲಿರುವುದು ಬೂದನೂರು ಗ್ರಾಮದಲ್ಲಿ ಮಾತ್ರ ಇದೆ. ಮೂರ್ತಿಯನ್ನು ಕಂಡ ಶಾಸಕ ರವಿಕುಮಾರ್ ಅವರು ಬೂದನೂರು ಉತ್ಸವ ಆರಂಭಿಸಿದರು. ಉತ್ಸವವನ್ನು ಪ್ರಾರಂಭಿಸಿದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಮೊದಲ ಬಾರಿಗೆ ಅದ್ಧೂರಿಯಾಗಿ ಆರಂಭಿಸಿದ್ದರು. ಇದೀಗ ಎರಡನೇ ಬಾರಿಗೆ ಉತ್ಸವ ಆರಂಭಿಸಿದ್ದು, ಉತ್ಸವಕ್ಕೆ ಮೆರುಗು ನೀಡುವ ಉದ್ದೇಶದಿಂದ ಹೆಲಿಟೂರಿಸಂ ಕೈಗೊಳ್ಳುವ ಮೂಲಕ ಮತ್ತೊಂದು ಮೈಲಿಗಲ್ಲು ಸೃಷ್ಟಿಸಲು ಮುಂದಾಗಿದ್ದಾರೆ. ಉತ್ಸವ ಯಶಸ್ಸಿಗೆ ಶಾಸಕ ಪಿ. ರವಿಕುಮಾರ್ ಹಗಲಿರುಳೂ ಶ್ರಮಿಸುತ್ತಿದ್ದಾರೆ. ಇದಕ್ಕೆ ಜಿಲ್ಲಾಡಳಿತವೂ ಸಾಥ್ ನೀಡಿದೆ.ಮೂರು ದಿನಳ ಕಾಲ ನಡೆಯುವ ಬೂದನೂರು ಉತ್ಸವದ ಹೆಲಿ ಟೂರಿಸಂನಲ್ಲಿ ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬಹುದು.
- ಡಾ. ಕುಮಾರ, ಜಿಲ್ಲಾಧಿಕಾರಿ, ಮಂಡ್ಯ--
ಬೂದನೂರು ಉತ್ಸವ ಯಶಸ್ಸಿಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಬಾರಿ ಹೆಲಿಯೂರಿಸಂ ವಿಶೇಷ ಜಾಯ್‌ರೈಡ್ ಏರ್ಪಡಿಸಲಾಗಿದ್ದು, ಸಾರ್ವಜನಿಕರಿಗೆ ಬಾನಂಗಳದಿಂದಲೇ ಉತ್ಸವ ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ೮ ಗ್ರಾಪಂಗಳ ಗ್ರಾಮಗಳ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಆಯೋಜಿಸಿ ಬಹುಮಾನ ವಿತರಣೆ ಮಾಡಲಾಗುವುದು.-ಪಿ. ರವಿಕುಮಾರ್, ಶಾಸಕರು, ಮಂಡ್ಯ ವಿಧಾನ ಸಭಾ ಕ್ಷೇತ್ರ.