ಮಾದಿಗ ಸಮುದಾಯಕ್ಕೆ ಒಳ‌ಮೀಸಲಾತಿ ಸಿಗುತ್ತೆ

KannadaprabhaNewsNetwork | Updated : May 23 2025, 12:06 AM IST
ಕನ್ನಡಪ್ರಭ ವಾರ್ತೆ ವಿಜಯಪುರ ಮಾದಿಗರು ಗ್ರಾಮೀಣ ಭಾಗದಲ್ಲಿ ಹೆಚ್ಚು ಕೃಷಿ ಮಾಡುತ್ತಿದ್ದು, ಪಟ್ಟಣಗಳಲ್ಲಿ ಕೂಲಿ ಕೆಲಸಗಳನ್ನು ಮಾಡುತ್ತಿದ್ದಾರೆ. ತೀರಾ ಹಿಂದುಳಿದ ಈ ಸಮಾಜಕ್ಕೆ ಪ್ರತ್ಯೇಕ ಒಳ ಮೀಸಲಾತಿ ಸಿಗಬೇಕು ಎಂದು ನಾವೆಲ್ಲ ಕಳೆದ 30 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ ಎಂದು ಮಾಜಿ ಸಚಿವ ಎಚ್‌.ಆಂಜನೇಯ ಹೇಳಿದರು.
Follow Us

ಕನ್ನಡಪ್ರಭ ವಾರ್ತೆ ವಿಜಯಪುರ

ಮಾದಿಗರು ಗ್ರಾಮೀಣ ಭಾಗದಲ್ಲಿ ಹೆಚ್ಚು ಕೃಷಿ ಮಾಡುತ್ತಿದ್ದು, ಪಟ್ಟಣಗಳಲ್ಲಿ ಕೂಲಿ ಕೆಲಸಗಳನ್ನು ಮಾಡುತ್ತಿದ್ದಾರೆ. ತೀರಾ ಹಿಂದುಳಿದ ಈ ಸಮಾಜಕ್ಕೆ ಪ್ರತ್ಯೇಕ ಒಳ ಮೀಸಲಾತಿ ಸಿಗಬೇಕು ಎಂದು ನಾವೆಲ್ಲ ಕಳೆದ 30 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ ಎಂದು ಮಾಜಿ ಸಚಿವ ಎಚ್‌.ಆಂಜನೇಯ ಹೇಳಿದರು.

ನಗರದ ಪ್ರವಾಸಿಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಧ್ರದಲ್ಲಿ ತೀವ್ರ ಹೋರಾಟದ ಮೂಲಕ‌ ಒಳ ಮೀಸಲಾತಿ ಪಡೆದುಕೊಂಡಿದ್ದಾರೆ. ಇದೀಗ ಸುಪ್ರೀಂ ಕೋರ್ಟ್ ಆದೇಶ ಬಂದಮೇಲೆ ನಮ್ಮ ರಾಜ್ಯದಲ್ಲೂ ಒಳ‌ಮೀಸಲಾತಿ ಕೊಡುವ ಕೆಲಸ ಆಗಲಿದೆ. ಸದಾಶಿವ ಆಯೋಗದ ವರದಿ ಹಾಗೂ ಮಾಧುಸ್ವಾಮಿ ನೇತೃತ್ವದಲ್ಲಿ ಬೊಮ್ಮಾಯಿ ಸರ್ಕಾರವಿದ್ದಾಗ ಅವರು ಶಿಫಾರಸು ಮಾಡಿದ್ದರು. ಆದರೆ ಆದು ಆಗಿರಲಿಲ್ಲ. ಇದೀಗ ಒಳ ಮೀಸಲಾತಿ ಅನುಷ್ಠಾನಕ್ಕೆ ತರುವ ಕೆಲಸ ಸಿದ್ದರಾಮಯ್ಯನವರ ಮುಂದಿದೆ. ಸಿಎಂ ಜೂನ್ ತಿಂಗಳ ಒಳಗಾಗಿ ಈ ಕೆಲಸ ಮಾಡಲಿದ್ದು, ಇದೀಗ ಮಾದಿಗ ಸಮುದಾಯಕ್ಕೆ ಒಳ‌ಮೀಸಲಾತಿ ಸಿಗಲಿದೆ‌ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರು ಹಾಗೂ ಬೆಂಗಳೂರು ವಿಭಾಗದಲ್ಲಿ ಮಾದಿಗ, ಆದಿ ಕರ್ನಾಟಕ ಜನರು ಸೌಲಭ್ಯಕ್ಕೆ ಮುಂದಾಗಿದ್ದು, ಅದು ಗೊಂದಲ‌ ಮೂಡಿಸಿದೆ. ಒಳ ಮೀಸಲಾತಿ ಕುರಿತು ಸಮೀಕ್ಷೆ ಸಮಯ ವಿಸ್ತರಣೆಯಾಗಿದ್ದು, ಎಲ್ಲರನ್ನೂ ನೋಂದಾಯಿಸುವ ಕೆಲಸ ನಡೆಯುತ್ತಿದೆ. ಯಾರೊಬ್ಬರೂ ಈ ಸಮೀಕ್ಷೆಯಿಂದ ಹೊರಗುಳಿಯಬಾರದು. ಸಮೀಕ್ಷೆ ಮುಗಿಯುವವರೆಗೂ ಸಮಾಜದ ಮುಖಂಡರು ಕಾರ್ಯಕ್ರಮಗಳನ್ನು ಮಾಡಬಾರದು. ಎಲ್ಲರೂ ಊರಲ್ಲೇ ಇದ್ದು, ಎಲ್ಲರನ್ನು ನೋಂದಾಯಿಸಬೇಕು ಎಂದು ಮನವಿ ಮಾಡಿದರು.

ಒಳ‌ಮೀಸಲಾತಿ ಅನುಷ್ಠಾನ ಆದ ಮೇಲೆಯೇ ಹೊಸ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಕಳೆದ ವರ್ಷ ಅಕ್ಟೋಬರ್ 10ರಿಂದ ಯಾವುದೇ ಹೊಸ ಹುದ್ದೆಗಳನ್ನು ತುಂಬಬಾರದು ಎಂದು ನಿಲ್ಲಿಸಿದ್ದೇವೆ. ಈ ಬಾರಿ ಜೂನ್‌ನಲ್ಲಿ ಎಷ್ಟೊತ್ತಿದ್ದರೂ ಒಳಮೀಸಲಾತಿ ಸೌಲಭ್ಯ ಅನುಷ್ಠಾನ ಆಗಲೇಬೇಕು. ಅದನ್ನು ಸಿಎಂ ಸಿದ್ದರಾಮಯ್ಯ ಮಾಡುತ್ತಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಮೇಶ ಆಸಂಗಿ, ಸುಭಾಷ ಕಾಲೇಬಾಗ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

------

ಬಾಕ್ಸ್‌

ಸರ್ಟಿಫಿಕೇಟ್‌ ಕೊಟ್ಟ ತಹಸೀಲ್ದಾರ್‌ರನ್ನು ಜೈಲಿಗೆ ಹಾಕಿ

ರಾಜ್ಯದಲ್ಲಿ ವೀರಶೈವ ಲಿಂಗಾಯತ ಜಂಗಮರು ಹಾಗೂ ಬೇಡ ಜಂಗಮರು ಇದ್ದಾರೆಂದು ಸೌಲಭ್ಯ ಪಡೆಯುವ ಕೆಲಸ ನಡೆಯುತ್ತಿದೆ. ಆದರೆ ಇವರಲ್ಲಿ ಒಬ್ಬರಿಗೊಬ್ಬರು ಸಂಬಂಧವಿಲ್ಲ. ಲಿಂಗಾಯತ ಜಂಗಮರು ಪೂಜೆ ಮಾಡೋರು, ಬೇಡ ಜಂಗಮರು ದನದ ಮಾಂಸ ತಿನ್ನುವವರು. ಇದೀಗ ಬೇಡ ಜಂಗಮ ಸಮುದಾಯವೇ ನಶಿಸಿಹೋಗಿದೆ. ಆದರೆ, ಬೇಡ ಜಂಗಮರ ಸೌಲಭ್ಯವನ್ನು ಲಿಂಗಾಯತ ಜಂಗಮರಿಗೆ ನೀಡಿ ಯಾವ ಯಾವ ತಹಸೀಲ್ದಾರ್‌ ಸರ್ಟಿಫಿಕೇಟ್ ಕೊಟ್ಟಿದ್ದಾರೋ ಅವರನ್ನು ಜೈಲಿಗೆ ಹಾಕುವ ಕೆಲಸ ಆಗಬೇಕು. ಇಲ್ಲದಿದ್ದರೆ ಒಳ ಮೀಸಲಾತಿಯಲ್ಲಿನ 101 ಒಳ ಜಾತಿಗಳ ಜನರೆಲ್ಲ ಸೇರಿ ಹೋರಾಟ ಮಾಡಲಾಗುವುದು. ಬೇಡ ಜಂಗಮ ಜನರೇ ಈಗ ರಾಜ್ಯದಲ್ಲಿ ಇಲ್ಲದ ಕಾರಣದಿಂದ ಅದನ್ನು ಶೆಡ್ಯೂಲ್‌ ಕಾಸ್ಟ್ ಪಟ್ಟಿಯಿಂದಲೇ ಕೇಂದ್ರದಲ್ಲಿಯೇ ತೆಗೆದುಹಾಕಬೇಕು. ಯಾರ್‍ಯಾರು ಬೇಡ ಜಂಗಮ ಎಂದು ಬೋಗಸ್‌ ಸರ್ಟಿಫಿಕೇಟ್ ಪಡೆದು ಸೇರಿದ್ದಾರೆ, ಅವರನ್ನೆಲ್ಲ ಆಯೋಗ ಪಟ್ಟಿಯಿಂದ ತೆಗೆದು ಹಾಕಬೇಕು. ಅವಕಾಶ ವಂಚಿತ ಸಮುದಾಯಗಳಿಗೆ ಅವಕಾಶ ಕಲ್ಪಿಸಿ ಕೊಡುವುದು ಸರ್ಕಾರದ ಔದಾರ್ಯ. ಅದನ್ನು ಸಿಎಂ ಮಾಡುತ್ತಿದ್ದಾರೆ ಎಂದು ಎಚ್‌.ಆಂಜನೇಯ ಹೇಳಿದರು.--------