ಕೊಪ್ಪಳ: ಆಸೆ ಮಿತಿಮೀರಿ ಹಣವಿದ್ದರೂ ನೆಮ್ಮದಿಯ ನಿದ್ರೆ ಇಲ್ಲದಂತಾಗಿದೆ. ಭಾರತದಲ್ಲಿ ಮಾನವೀಯತೆಗೆ ಮೊದಲ ಆದ್ಯತೆ ಕೊಡಬೇಕು ಇಲ್ಲದಿದ್ದರೆ ಅಭಿವೃದ್ಧಿ ಹೆಸರಲ್ಲಿ ನಡೆಯುತ್ತಿರುವ ಹುಚ್ಚಾಟದಿಂದ ಅಭಿವೃದ್ಧಿ ಆಗಿ ನಾವೇ ಅಂಗವಿಕಲರಾದರೆ ಅಂತಹ ಅಭಿವೃದ್ಧಿಗೆ ಅರ್ಥವಿಲ್ಲ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಯನ್ಸ್ ಶ್ರೀನಿವಾಸ ಗುಪ್ತಾ ಅಭಿಪ್ರಾಯಪಟ್ಟರು.
ಅವರು ನಗರಸಭೆ ಹತ್ತಿರ ನಡೆಯುತ್ತಿರುವ ಬಲ್ಡೋಟ (ಬಿಎಸ್ಪಿಎಲ್) ಮಾರಕ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ನಡೆದಿರುವ ಅನಿರ್ದಿಷ್ಟಾವಧಿ ಧರಣಿ 37ನೇ ದಿನ ಕೊಪ್ಪಳ ಲಯನ್ಸ್ ಕ್ಲಬ್, ಸ್ವಾಮಿ ವಿವೇಕಾನಂದ ಶಾಲೆ ಮತ್ತು ಸ್ವಾಮಿ ವಿವೇಕಾನಂದ ಸಿಬಿಎಸ್ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ಮತ್ತು ಸಿಬ್ಬಂದಿ ಭಾಗವಹಿಸಿ ಬೆಂಬಲಿಸಿ ಮಾತನಾಡಿದರು.ಸಣ್ಣ ಗುಡಿ ಕೈಗಾರಿಕೆ ತಂದರೆ ಒಳ್ಳೆಯದು ಹೊರತು ಈ ರೀತಿಯ ಕಾರ್ಖಾನೆಗಳಿಂದ ನಯಾಪೈಸೆ ಲಾಭವಿಲ್ಲ, ಕೊಪ್ಪಳ ಇಲ್ಲಿಯವರೆಗೆ ಬೆಳೆದದ್ದು ಇಲ್ಲಿನವರ ಶ್ರಮದಿಂದ ಹೊರತು ಕಾರ್ಖಾನೆಗಳಿಂದ ಅಲ್ಲವೇ ಅಲ್ಲ. ಹೋರಾಟಕ್ಕೆ ನಾವು ದೊಡ್ಡ ಪ್ರಮಾಣದಲ್ಲಿ ಬೆಂಬಲ ನೀಡಿ ಹೆಚ್ಚಿನ ಮಹಿಳೆಯರನ್ನು ಸೇರಿಸೋಣ ಎಂದರು.
ನಿವೃತ್ತ ಎಲ್‍ಐಸಿ ಅಧಿಕಾರಿ ವೆಂಕಟೇಶ ಶ್ಯಾನಬಾಗ ಮಾತನಾಡಿ, ನಮ್ಮ ಮುಂದಿನ ಪೀಳಿಗೆಗೆ ಗಾಳಿ ಕೊಡಿ ಎಂದು ಸರ್ಕಾರವನ್ನು ಅಂಗಲಾಚುತ್ತಿದ್ದೇವೆ. ಪಂಚಭೂತಗಳಿಂದ ನಿರ್ಮಾಣ ಆದ ನಮ್ಮ ಶರೀರ ಈಗ ಕೆಡುತ್ತಿದೆ. ನಮ್ಮೂರಲ್ಲಿ ಇರುವ ಹಸಿರು ಗಿಡಮರ ಕೆಂಪಾಗಿ ನಮ್ಮ ಮಕ್ಕಳು ಪ್ರಶ್ನೆ ಮಾಡುವಂತಾಗುತ್ತದೆ. ಎಷ್ಟೇ ಕಷ್ಟ ಎನಿಸಿದರೂ ಎಲ್ಲರೂ ಬರಬೇಕು, ಒಂದು ಹೊತ್ತು ಊಟ ಬಿಡಿ, ರಜೆ ಹಾಕಿ ಆದರೆ ಬನ್ನಿ ಹೋರಾಡೋಣ ಎಂದರು.ಲಯನ್ಸ್ ಕ್ಲಬ್ ಅಧ್ಯಕ್ಷ ಬಸವರಾಜ ಬಳ್ಳೊಳ್ಳಿ ಮಾತನಾಡಿ, ಈಗಿರುವ ಕಾರ್ಖಾನೆ ಹೊಲಸು, ಧೂಳು, ವಿಷಾನಿಲ ನಿಭಾಯಿಸಲು ಸಾಧ್ಯವಿಲ್ಲದಾಗ ಮುಂದೆ ಆಧುನಿಕ ತಂತ್ರಜ್ಞಾನ ತರ್ತಿವಿ ಆದರಿಂದ ಮಾಲಿನ್ಯ ಆಗಲ್ಲ ಎನ್ನುವದು ಕೇವಲ ಕಣ್ಣೊರೆಸುವ ತಂತ್ರ. ನಾವು ಯಾರನ್ನೂ ದೂಷಿಸದೇ ಹೋರಾಟ ಮಾಡೋಣ. ಎಲ್ಲರೂ ಇದರಲ್ಲಿ ಭಾಗವಹಿಸಬೇಕು ಎಂದರು.
ಗವಿಸಿದ್ಧೇಶ್ವರ ಬ್ಯಾಂಕ್ ಮಾಜಿ ಅಧ್ಯಕ್ಷ ಗವಿಸಿದ್ದಪ್ಪ ಮುದಗಲ್ ಮಾತನಾಡಿ, ಭೂಮಿ, ವಾಯು, ಜಲ ನಾಶ ಹೇಗೆ ಆಗುತ್ತದೆ ಎಂಬ ಅರಿವು ಜನರಿಗೆ ಸಿಕ್ಕಿದೆ. ಈಗ ನಾವು ಅಂತಹ ನಾಶದ ವಿರುದ್ಧ ಹೋರಾಡಬೇಕು. ಕೊಪ್ಪಳ ಭಾಗ್ಯನಗರದ ಜನ ಹೋರಾಟಕ್ಕೆ ಬೆಂಬಲವಾಗಿ ಇದ್ದಾರೆ. ತಮ್ಮ ಕೆಲಸದ ಒತ್ತಡಕ್ಕೆ ಸಿಲುಕಿದ್ದಾರೆ. ಲಯನ್ಸ್ ಕ್ಲಬ್ ಮತ್ತು ಶಾಲೆ ಸದಾ ಹೋರಾಟದ ಜತೆಯಾಗಿ ಇರುತ್ತದೆ. ಲಯನ್ಸ್ ಕ್ಲಬ್ ಸದಾಜನರ ಸೇವೆಗೆ ಬದ್ಧ ಎಂದರು.ಲಯನ್ಸ್ ಸಂಸ್ಥೆಯ ಶರಣು ಅಗಡಿ, ಎಸ್.ವಿ.ಎಂ. ಶಾಲೆಯ ಮುಖ್ಯೋಪಾಧ್ಯಾಯಿನಿ ವೈ. ಪದ್ಮಜಾ, ಉದ್ಯಮಿ ಲಯನ್ಸ್ ಪರಮೇಶ್ವರಪ್ಪ ಕೊಪ್ಪಳ, ಹೋರಾಟ ವೇದಿಕೆಯ ಮಂಜುನಾಥ ಜಿ. ಗೊಂಡಬಾಳ ಸೇರಿ ಅನೇಕರು ಮಾತನಾಡಿದರು.
ಧರಣಿಯಲ್ಲಿ ಡಿ.ಎಂ. ಬಡಿಗೇರ, ಶರಣು ಗಡ್ಡಿ, ಪ್ರೊ.ಮನೋಹರ ದಾದ್ಮಿ, ಗುರುರಾಜ ಹಲಗೇರಿ, ಪಂಪಣ್ಣ ವಾರದ, ಸುಜಾತಾ ಹಲಗೇರಿ, ಜ್ಯೋತಿ ಅಗಡಿ, ಅಪರ್ಣ ಬಳ್ಳೊಳ್ಳಿ, ಸ್ಪೂರ್ತಿ ಮಾಗಿ, ಸಿ.ವಿ. ಜಡಿಯವರ, ಶಾಂತಯ್ಯ ಅಂಗಡಿ, ಮಹಾದೇವಪ್ಪ, ವಿ.ಬಿ. ಕಟ್ಟಿ, ವಿರೇಶ ಕೊಪ್ಪಳ, ಮಾರುತಿ, ರವಿ ಕಾಂತನವರ, ಪದ್ಮನಗೌಡ ಪಾಟೀಲ್, ಮುದಕಪ್ಪ ಹೊಸಮನಿ, ಎಸ್.ಬಿ.ರಾಜೂರ, ಎಫ್.ಎಸ್. ಜಾಲಿಹಾಳ, ಟಿ.ಆರ್.ಬೆಲ್ಲದ, ಜಿ. ಬಿ.ಪಾಟೀಲ್, ಎಸ್.ಕೆ.ಸಿದ್ನೆಕೊಪ್ಪ, ಸ್ವಾಮಿ ವಿವೇಕಾನಂದ ಸಿಬಿಎಸ್ ಶಾಲೆ ಮುಖ್ಯೋಪಾಧ್ಯಾಯ ಮಂಜುನಾಥ ಕೆ.ಕಂಡಕಿ ನೂರಾರು ಜನ ಭಾಗವಹಿಸಿದ್ದರು.