ದಾಬಸ್‍ಪೇಟೆ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗಾಗಿ ಆಯೋಜಿಸುವ ಶೈಕ್ಷಣಿಕ ಉತ್ಸವವನ್ನು ಕಲಿಕಾ ಹಬ್ಬವಾಗಿ ಆಚರಿಸುತ್ತಾ, ಮಕ್ಕಳನ್ನು ಮತ್ತಷ್ಟು ಉತ್ತೇಜಿಸುವುದಲ್ಲದೆ ಕಲಿಕಾಸಕ್ತಿ ಮೂಡಿಸುವುದು ಕಲಿಕಾ ಹಬ್ಬದ ಪ್ರಮುಖ ಉದ್ದೇಶವಾಗಿದೆ ಎಂದು ಕಳಲುಘಟ್ಟ ಗ್ರಾಪಂ ಅಧ್ಯಕ್ಷೆ ಮಮತ ಹೇಳಿದರು.
ಗ್ರಾಪಂ ಪಿಡಿಒ ಗೀತಾಮಣಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿನ ಬೋಧನೆ, ಕಲಿಕಾ ಕ್ರಮ ಅತ್ಯಂತ ಅರ್ಥಪೂರ್ಣ ಮತ್ತು ಸಂತಸದಾಯಕವಾಗಿದೆ. ನುರಿತ, ಪ್ರತಿಭಾವಂತ ಶಿಕ್ಷಕರ ಸಮೂಹ ಇಲ್ಲಿದೆ. ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಗು ಸರ್ವತೋಮುಖ ಬೆಳವಣಿಗೆ ಹೊಂದುತ್ತದೆ. ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸುವ ಜತೆಗೆ, ಸಂತೋಷದಾಯಕ ಮತ್ತು ಅನುಭವ ಆಧಾರಿತ ಕೌಶಲ ಬಲವರ್ಧನೆಗೆ ಸಹಾಯ ಮಾಡುವ ಕಲಿಕೆಗೆ ಉತ್ತೇಜಿಸುವುದು ಕಲಿಕಾ ಹಬ್ಬದ ಉದ್ದೇಶವಾಗಿದೆ ಎಂದರು.
ಬಿಇಒ ರಮೇಶ್ ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದವರಿಗೆ ಕ್ಲಸ್ಟರ್ ಮಟ್ಟದ ಸ್ಪರ್ಧೆಗಳ ಮೂಲಕ ಜ್ಞಾನ ನೀಡುವುದು ಮತ್ತು ಸಮುದಾಯ ಭಾಗವಹಿಸುವಿಕೆಯನ್ನು ಉತ್ತೇಜನ ನೀಡಲಾಗುತ್ತದೆ. ಓದು, ಬರವಣಿಗೆ, ಗಣಿತ, ಮೂಲಭೂತ ಕೌಶಲಗಳನ್ನು ಬಲಪಡಿಸಲು ಸಹಕಾರಿಯಾಗಿದೆ ಎಂದರು.ಕಾರ್ಯಕ್ರಮದದಲ್ಲಿ ಉಪಾಧ್ಯಕ್ಷ ನರಸಿಂಹಮೂರ್ತಿ, ಸದಸ್ಯ ಹರೀಶ್, ಸಿಆರ್ ಪಿ ಹನುಮೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕಿ ನೀಲಮ್ಮ, ಮುಖ್ಯಶಿಕ್ಷಕಿ ಸರ್ವಮಂಗಳ ಸೇರಿ ಕ್ಲಸ್ಟರ್ ಮಟ್ಟದ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.