ಗ್ರಾಮಗಳ ಸಮಗ್ರ ಅಭಿವೃದ್ಧಿ ವಿಬಿ ಜಿ ರಾಮಜಿ ಮುಖ್ಯ ಉದ್ದೇಶ

KannadaprabhaNewsNetwork |  
Published : Jul 03, 2026, 02:15 AM IST
ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಬಿ- ಜಿ ರಾಮಜಿ ಯೋಜನೆ ಒಂದು ದಿನದ ಕಾರ್ಯಾಗಾರವನ್ನು ಜಿಪಂ ಸಿಇಒ ದಲ್ಜೀತಕುಮಾರ ಉದ್ಘಾಟಿಸಿದರು. | Kannada Prabha

ಸಾರಾಂಶ

ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ಹಾಗೂ ಶಾಶ್ವತ ಆಸ್ತಿಗಳ ನಿರ್ಮಾಣದ ಮೂಲಕ ಗ್ರಾಮಗಳ ಸಮಗ್ರ ಅಭಿವೃದ್ಧಿ ಸಾಧಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಲ್ಜೀತ್ ಕುಮಾರ ಹೇಳಿದರು.

ಹಾವೇರಿ: ಜಿಲ್ಲೆಯಲ್ಲಿ ಜು. 1ರಿಂದ ವಿಕಸಿತ ಭಾರತ್-ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಅಜೀವಿಕ ಮಿಷನ್-ಗ್ರಾಮೀಣ (ವಿಬಿ- ಜಿ ರಾಮಜಿ) ಯೋಜನೆ ಅನುಷ್ಠಾನಗೊಳಿಸಲಾಗಿದೆ. ಗ್ರಾಮೀಣ ಪ್ರದೇಶದ ಪ್ರತಿಯೊಂದು ಅರ್ಹ ಕುಟುಂಬದ ಜೀವನೋಪಾಯವನ್ನು ಭದ್ರಪಡಿಸುವುದು, ಉದ್ಯೋಗಾವಕಾಶಗಳನ್ನು ವಿಸ್ತರಿಸುವುದು, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ಹಾಗೂ ಶಾಶ್ವತ ಆಸ್ತಿಗಳ ನಿರ್ಮಾಣದ ಮೂಲಕ ಗ್ರಾಮಗಳ ಸಮಗ್ರ ಅಭಿವೃದ್ಧಿ ಸಾಧಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಲ್ಜೀತ್ ಕುಮಾರ ಹೇಳಿದರು.

ಸ್ಥಳೀಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಕಸಿತ ಭಾರತ್-ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಅಜೀವಿಕ ಮಿಷನ್-ಗ್ರಾಮೀಣ (ವಿಬಿ- ಜಿ ರಾಮಜಿ) ಯೋಜನೆ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಈ ಯೋಜನೆಯಡಿ ಪ್ರತಿ ಅರ್ಹ ಗ್ರಾಮೀಣ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ 125 ದಿನಗಳವರೆಗೆ ಅಕುಶಲ ಕೂಲಿ ಉದ್ಯೋಗ ನೀಡಲು ಅವಕಾಶ ಕಲ್ಪಿಸಲಾಗಿದೆ. ಗ್ರಾಮೀಣ ಕುಟುಂಬಗಳಿಗೆ ಸ್ಥಳೀಯ ಮಟ್ಟದಲ್ಲೇ ಉದ್ಯೋಗ ದೊರೆಯುವುದರಿಂದ ವಲಸೆ ಕಡಿಮೆಯಾಗುವುದರ ಜೊತೆಗೆ ಆರ್ಥಿಕವಾಗಿ ಸದೃಢ ಜೀವನ ನಡೆಸಲು ಸಹಕಾರಿಯಾಗಲಿದೆ. ಕೇಂದ್ರ ಸರ್ಕಾರದ ಅಧಿಸೂಚನೆಯಂತೆ 2026-27ನೇ ಸಾಲಿಗೆ ಪ್ರತಿ ದಿನದ ಕೂಲಿ ದರ 382 ರು.ಗೆ. ನಿಗದಿಪಡಿಸಲಾಗಿದೆ ಎಂದರು.

ಕೇಂದ್ರ ಸರ್ಕಾರದ ಅನುಮೋದಿತ 318 ಕಾಮಗಾರಿಗಳನ್ನು ಈ ಯೋಜನೆಯಡಿ ಕೈಗೊಳ್ಳಲು ನಿರ್ದೇಶನಗಳನ್ನು ಅನುಷ್ಠಾನಾಧಿಕಾರಿಗಳಿಗೆ ನೀಡಲಾಗಿದೆ. ಈಗಾಗಲೇ ಪ್ರಗತಿಯಲ್ಲಿರುವ ಅರ್ಹ ಕಾಮಗಾರಿಗಳನ್ನು ಸಹ ವಿಬಿ- ಜಿ ರಾಮ ಜಿ ಯೋಜನೆಯಡಿ ಮುಂದುವರಿಸಬಹುದಾಗಿದೆ ಎಂದು ಹೇಳಿದರು.

ಈ ಕಾಮಗಾರಿಗಳಲ್ಲಿ ಗ್ರಾಮೀಣ ರಸ್ತೆ ಅಭಿವೃದ್ಧಿ, ಕೆರೆ-ಕಟ್ಟೆಗಳ ಅಭಿವೃದ್ಧಿ ಮಳೆನೀರು ಸಂಗ್ರಹಣೆ, ಜಲ ಸಂರಕ್ಷಣೆ, ವನೀಕರಣ, ಕೃಷಿ ಅಭಿವೃದ್ಧಿ, ತೋಟಗಾರಿಕೆ, ಸಾರ್ವಜನಿಕ ಆಸ್ತಿ ನಿರ್ಮಾಣ, ಗ್ರಾಮ ಸ್ವಚ್ಛತೆ, ನೀರಿನ ಸಂರಕ್ಷಣೆ ಹಾಗೂ ಇತರೆ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತದೆ. ಈ ಹೊಸ ಯೋಜನೆಯಡಿ 318 ಕಾಮಗಾರಿಗಳನ್ನು 4 ವರ್ಗೀಕರಣ ಮಾಡಲಾಗಿದೆ ಎಂದರು.

ಜಲ ಸಂಬಂಧಿತ ಕಾರ್ಯಗಳ ಮೂಲಕ ಜಲ ಭದ್ರತ ಅಡಿ, 6 ಉಪವರ್ಗ ಮಾಡಲಾಗಿದೆ. ಇದರಡಿ 107 ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ. ಮೂಲ ಗ್ರಾಮೀಣ ಮೂಲಸೌರ್ಯ ಅಡಿ 9 ಉಪವರ್ಗ ಮಾಡಲಾಗಿದೆ. ಇದರಡಿ 90 ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ. ಜೀವನೋಪಾಯ ಸಂಬಂಧಿತ ಮೂಲಸೌಕರ್ಯಅಡಿ, 9 ಉಪವರ್ಗ ಮಾಡಲಾಗಿದೆ. ಇದರಡಿ 86 ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ. ತೀವ್ರ ಹವಾಮಾನ ಘಟನೆಗಳ ಶಮನಕ್ಕಾಗಿ ಕಾರ್ಯಗಳು ಅಡಿ, 5 ಉಪವರ್ಗ ಮಾಡಲಾಗಿದೆ. ಇದರಡಿ 35 ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ.

ಯೋಜನೆಯ ಪ್ರಮುಖ ಉದ್ದೇಶಗಳು: ಗ್ರಾಮೀಣ ಕುಟುಂಬಗಳಿಗೆ ಖಾತರಿಯ ಉದ್ಯೋಗ ಒದಗಿಸುವುದು, ಗ್ರಾಮೀಣ ಪ್ರದೇಶದಲ್ಲಿ ಶಾಶ್ವತ ಆಸ್ತಿಗಳ ನಿರ್ಮಾಣ, ಕೃಷಿ ಹಾಗೂ ನೀರಿನ ಸಂರಕ್ಷಣೆಗೆ ಉತ್ತೇಜನ, ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಅವಕಾಶ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ದುರ್ಬಲ ವರ್ಗಗಳ ಜೀವನಮಟ್ಟ ಸುಧಾರಣೆ, ಪರಿಸರ ಸಂರಕ್ಷಣೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿ, ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ವೇಗ ನೀಡುವುದಾಗಿದೆ ಎಂದು ಹೇಳಿದರು.

ಜಿಪಂ ಉಪ ಕಾರ್ಯದರ್ಶಿ ಡಾ.ಪುನೀತ್ ಬಿ.ಆರ್. ಮಾತನಾಡಿ, ಜಿಲ್ಲೆಯ ಎಲ್ಲ ತಾಲೂಕಿನ, ಗ್ರಾಮ ಪಂಚಾಯತಿಗಳ ಹಾಗೂ ಇಲಾಖೆಯ ಅನುಷ್ಠಾನ ಅಧಿಕಾರಿಗಳಿಗೆ, ತಾಂತ್ರಿಕ ಸಿಬ್ಬಂದಿಗಳ ಮತ್ತು ಸಿಬ್ಬಂದಿಗಳಿಗೆ ಹೊಸ ಯೋಜನೆ ತರಬೇತಿ ನೀಡಲಾಗಿದ್ದು, ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ಯೋಜನೆ ಅನುಷ್ಠಾನ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಅಕುಶಲ ಕೆಲಸ ಪಡೆಯಲು ನಿಮ್ಮ ಗ್ರಾಮ ಪಂಚಾಯತಿಯನ್ನು ಇಂದೇ ಸಂಪರ್ಕಿಸಿ ನಿಮ್ಮ ಕುಟುಂಬದ ಆರ್ಥಿಕ ಭದ್ರತೆಗೆ ವಿಬಿ- ಜಿ ರಾಮ ಜಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕ ಡಾ.ಕೆ.ಮಲ್ಲಿಕಾರ್ಜುನ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರ್ಹರು ಮತದಾರ ಪಟ್ಟಿಯಲ್ಲಿ ಉಳಿಯಲಿ
ಫ.ಗು.ಹಳಕಟ್ಟಿಯಿಂದ ವಚನಗಳಿಗೆ ಶಾಶ್ವತ ಅಸ್ತಿತ್ವ