ಕನ್ನಡಪ್ರಭ ವಾರ್ತೆ ಬೆಳಗಾವಿ
ಗಡಿ ವಿವಾದದ ಬಗ್ಗೆ ಬೆಳಕು ಚೆಲ್ಲುವ ಫಾಲೋವರ್ ಎಂಬ ಮರಾಠಿ ಚಿತ್ರ ಪ್ರದರ್ಶನವನ್ನು ಕರವೇ ಕಾರ್ಯಕರ್ತರು ರದ್ದುಗೊಳಿಸಿದ ಘಟನೆ ಬೆಳಗಾವಿ ನಗರದಲ್ಲಿ ರಾತ್ರಿ ನಡೆದಿದೆ.ಗಡಿ ವಿವಾದದ ಕುರಿತು ಚಿತ್ರ ಪ್ರದರ್ಶನ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧಾರದ ಮೇಲಿಂದ ಕರವೇ (ಶಿವರಾಮೇಗೌಡ ಬಣ)ದ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೋಡಿ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಐನಾಕ್ಸ್ ಚಿತ್ರಮಂದಿರಕ್ಕೆ ತೆರಳಿದ್ದಾರೆ. ನಂತರ ಈ ಚಿತ್ರ ಪ್ರದರ್ಶನ ನಿಲ್ಲಿಸುವಂತೆ ಮನವಿ ಕೂಡ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಗಲಾಟೆ ಆಗಬಹುದು ಎಂಬ ಹಿನ್ನೆಲೆಯಲ್ಲಿ ಥಿಯೇಟರ್ ಸಿಬ್ಬಂದಿ ಪ್ರದರ್ಶನವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.
ಫಾಲೋವರ್ ಚಿತ್ರವನ್ನು ಬೆಳಗಾವಿ ನಗರದ ಬಿಇ ಪದವೀಧರ ಹರ್ಷದ್ ನಲವಡೆ ನಿರ್ಮಿಸಿದ್ದಾರೆ. ಬೆಳಗಾವಿ ಐನಾಕ್ಸ್ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರವು ಶುಕ್ರವಾರ ರಾತ್ರಿ 8ಗಂಟೆಗೆ ಮೊದಲ ಪ್ರದರ್ಶನ ನಡೆಯುತ್ತಿತ್ತು. ಇದಕ್ಕೆ ಕರವೇ ಬ್ರೇಕ್ ಹಾಕಿದೆ. ಮೂವಿ ಟ್ರೈಲರ್‌ನಲ್ಲಿ ಬೆಳಗಾವಿ ಯಳ್ಳೂರು ಮಹಾರಾಷ್ಟ್ರ ಬೋರ್ಡ್ ವಿವಾದ ಪ್ರಸ್ತಾವ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಈ ಚಿತ್ರವನ್ನು ರದ್ದುಗೊಳಿಸಲು ಕರವೇ ಆಗ್ರಹಿಸಿತು.ಐನಾಕ್ಸ್ ಚಿತ್ರ ಮಂದಿರದಲ್ಲಿ ಚಿತ್ರ ತಂಡದವರು ಕೂಡ ಕರವೇ ಕಾರ್ಯಕರ್ತರೊಂದಿಗೆ ವಾಗ್ವಾದ ನಡೆಸಿತು. ನಂತರ ವಿಷಯ ಅರಿತ ಖಡೇಬಜಾರ್ ಎಸಿಪಿ ಶೇಖರಪ್ಪ, ಕ್ಯಾಂಪ್ ಪೊಲೀಸ ಠಾಣೆ ಸಿಪಿಐ ಅವರು ಸ್ಥಳಕ್ಕೆ ಬಂದಿದ್ದಾರೆ. ಇದೆ ವೇಳೆ ಕರವೇ ಕಾರ್ಯಕರ್ತರ ಆರೋಪ ಸುಳ್ಳು ಎಂದು ಫಾಲೋವರ್ ಚಿತ್ರತಂಡ ಹೇಳಿದೆ.
ನಮ್ಮ ಬೆಳಗಾವಿ ಹುಡುಗರು 7 ವರ್ಷ ಕಷ್ಟಪಟ್ಟು ಮೂವಿ ಮಾಡಿದ್ದಾರೆ. ಇದರಲ್ಲಿ ಯಾವುದೇ ರೀತಿಯ ಗಡಿ ವಿವಾದ ಇಲ್ಲವೇ ಇಲ್ಲ. ಮೂರು ಜನ ಸ್ನೇಹಿತರ ಸುತ್ತಲೂ ಮೂವಿ ಇದೆ. ಕನ್ನಡ ಭಾಷೆಯಲ್ಲೇ ಮೂವಿ ಪ್ರದರ್ಶನ ಮಾಡ್ತಿದ್ದೇವೆ. ಒಂದ ಶೋ ರದ್ದಾದ್ರೆ ಎಷ್ಟು ನಷ್ಟ ಆಗುತ್ತೆ ನಮಗೆ ಗೊತ್ತಿದೆ. ರೋಟರ್‌ಡ್ಯಾಮ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನಗೊಂಡಿದೆ. ಈಗ ಏಕಾಏಕಿ ಮೂವಿ ಪ್ರದರ್ಶನ ರದ್ದು ಮಾಡಿದ್ದಾರೆ. ಮತ್ತೆ ಭಾನುವಾರ ಪ್ರದರ್ಶನ ಮಾಡುತ್ತೇವೆ. ನೀವೆ ಮೂವಿ ನೋಡಿ ಹೇಳಿ ಎಂದ ಚಿತ್ರ ತಂಡದ ಕುಟುಂಬ ಸದಸ್ಯರು ಹೇಳಿದ್ದಾರೆ.ಚಿತ್ರ ಪ್ರದರ್ಶನ ರದ್ದು ಹಿನ್ನೆಲೆ ಸಿನಿ ಪ್ರಿಯರಿಗೆ ಟಾಕೀಸ್ ಸಿಬ್ಬಂದಿ ಹಣ ವಾಪಸ್ ಕೊಟ್ಟಿದ್ದಾರೆ. ಘಟನೆ ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.