ಊಟದಲ್ಲಿ ಸ್ವೀಟ್‌ ನೀಡಿಲ್ಲವೆಂದು ಮದುವೆಯೇ ರದ್ದು!

KannadaprabhaNewsNetwork |  
Published : May 06, 2024, 12:35 AM IST
ಸ್ವೀಟ್‌ | Kannada Prabha

ಸಾರಾಂಶ

ಹಲವು ತಿಂಗಳ ಹಿಂದೆಯೇ ನಿಗದಿಯಾಗಿದ್ದ ಮದುವೆ ಕ್ಲುಲ್ಲಕ ಕಾರಣಕ್ಕೆ ರದ್ದುಗೊಂಡು ಆಹ್ವಾನಿತರು ಬಂಧು ಬಳಗದವರಲ್ಲಿ ಬೇಸರ ಮೂಡಿಸಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಮದುವೆ ಹಿಂದಿನ ದಿನ ಊಟಕ್ಕೆ ಸಿಹಿತಿಂಡಿ ನೀಡಿಲ್ಲ ಎಂಬ ಕಾರಣಕ್ಕೆ ಮದುವೆಯನ್ನೇ ರದ್ದುಗೊಳಿಸಿದ ಘಟನೆ ಪಟ್ಟಣದ ಕಲ್ಯಾಣಮಂಟಪವೊಂದರಲ್ಲಿ ನಡೆದಿದೆ.

ಸಮೀಪದ ಹಾನಗಲ್ಲು ಗ್ರಾಮದ ಯುವತಿಯ ವಿವಾಹ ತುಮಕೂರು ಜಿಲ್ಲೆಯ ಯುವಕನೊಂದಿಗೆ ನಿಶ್ಚಯವಾಗಿತ್ತು. ಭಾನುವಾರ ಪಟ್ಟಣದ ಹಾಲ್‌ ಒಂದರಲ್ಲಿ ವಿವಾಹಕ್ಕೆ ಎಲ್ಲ ಸಿದ್ಧತೆ ಮಾಡಲಾಗಿತ್ತು.

ಶನಿವಾರ ಸಂಜೆ ತುಮಕೂರಿನಿಂದ ವರನ ಕಡೆಯವರು ಮಂಟಪಕ್ಕೆ ಆಗಮಿಸಿದ್ದರು. ರಾತ್ರಿಯ ಊಟದಲ್ಲಿ ಸಿಹಿತಿಂಡಿ ಇಲ್ಲ ಎಂಬ ಕಾರಣಕ್ಕೆ ತಗಾದೆ ತೆಗೆದು ಗಲಾಟೆ ಆರಂಭವಾಯಿತು. ಮಂಟಪದಲ್ಲಿಯೇ ಎರಡೂ ಕಡೆಯವರ ಮಧ್ಯೆ ಮಾತಿನ ಚಕಮಕಿ, ತಳ್ಳಾಟ ನೂಕಾಟ ನಡೆಯಿತು. ಭಾನುವಾರ ಬೆಳಗ್ಗೆ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತು. ಶನಿವಾರ ರಾತ್ರಿ ಮದುವೆಯೇ ಬೇಡ ಎಂದು ಉಂಗುರ ಕಳಚಿಕೊಟ್ಟಿದ್ದ ವರ, ‘ನಾನು ಮದುವೆಯಾಗುತ್ತೇನೆ’ ಎಂದು ಹೊಸ ವರಸೆ ಶುರು ಮಾಡಿದ್ದ.

ದಿಢೀರ್ ಘಟನಾವಳಿಯಿಂದ ಬೇಸತ್ತ ವಧು ‘ಈ ಮದುವೆಯೇ ಬೇಡ’ ಎಂದು ಪೊಲೀಸರೆದುರು ಹೇಳಿಕೆ ನೀಡಿದಳು. ಮದುವೆಗೆಂದು ಖರ್ಚು ಮಾಡಿರುವ ಹಣವನ್ನು ವರನ ಕಡೆಯವರು ನೀಡಬೇಕೆಂದು ವಧುವಿನ ಕಡೆಯವರು ಠಾಣೆ ಎದುರು ಆಗ್ರಹಿಸಿದರು. ಅಂತಿಮವಾಗಿ ಹಣಕಾಸಿನ ವಿಚಾರವನ್ನು ನೀವುಗಳೇ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿ ಪೊಲೀಸರು ಪ್ರಕರಣಕ್ಕೆ ಇತಿಶ್ರೀ ಹಾಡಿದರು. ಹಲವು ತಿಂಗಳ ಹಿಂದೆಯೇ ನಿಗದಿಯಾಗಿದ್ದ ಮದುವೆ, ಕ್ಷುಲ್ಲಕ ಕಾರಣಕ್ಕೆ ರದ್ದುಗೊಂಡು, ಆಹ್ವಾನಿತರು, ಬಂಧು ಬಳಗದವರಲ್ಲಿ ಬೇಸರ ಮೂಡಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆನಂದಪುರ : ಮರದ ರಂಬೆ ಮರ್ಮಾಂಗಕ್ಕೆ ತಗುಲಿ ವ್ಯಕ್ತಿ ಸಾವು
ಅಪಘಾತದಿಂದ ಕೆಲ್ಸ ಕಳ್ಕೊಂಡ ಮಹಿಳೆ ನೆರವಿಗೆ ಕೋರ್ಟ್‌