ಹಸಿರು ಟವೆಲ್ ಬಳಸಿಕೊಳ್ಳುವ ದಂಧೆ ಕೋರರ ಮುಖವಾಡ ಕಳಚಿ

KannadaprabhaNewsNetwork |  
Published : Mar 31, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ  | Kannada Prabha

ಸಾರಾಂಶ

ಹಂಪಯ್ಯನಮಾಳಿಗೆಯಲ್ಲಿ ನಡೆದ ರೈತ ಸಂಘದ ಪುನಶ್ಚೇತನ ಕಾರ್ಯಕ್ರಮದಲ್ಲಿ ಬಡಗಲಪುರ ನಾಗೇಂದ್ರ ತಾಕೀತು

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಹಸಿರು ಟವೆಲ್ ಬಳಸಿಕೊಂಡು ದಂಧೆಯಲ್ಲಿ ಮುಳುಗಿರುವವರ ಮುಖವಾಡ ಕಳಚುವಂತೆ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಕರೆ ನೀಡಿದರು.

ಚಿತ್ರದುರ್ಗ ತಾಲೂಕಿನ ಹಂಪಯ್ಯನಮಾಳಿಗೆಯಲ್ಲಿ ಆಯೋಜಿಸಿದ್ದರೈತ ಸಂಘದ ಪುನಶ್ಚೇತನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರು ಹೆಗಲ ಮೇಲೆ ಹಾಕಿಕೊಳ್ಳುವ ಹಸಿರು ಟವಲ್‍ಗೆ ಮಹತ್ವವಿದೆ.ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳು ಕಳೆದಿದ್ದರೂ ಇನ್ನು ಸಂವಿಧಾನದ ಹಕ್ಕುಗಳು ರೈತರಿಗೆ ತಲುಪಿಲ್ಲ. ರೈತ ಎದೆಯುಬ್ಬಿಸಿ ನಡೆಯುವಂತ ಶಕ್ತಿ ಕೊಟ್ಟಿದ್ದು, ರೈತ ಚಳುವಳಿ. ಎಲ್ಲಾ ಧರ್ಮಕ್ಕಿಂತ ದೊಡ್ಡದು ರೈತ ಧರ್ಮ. ಅಧಿಕಾರದಲ್ಲಿರುವವರು ಧರ್ಮ ಜಾತಿಯನ್ನು ಎತ್ತಿ ಕಟ್ಟುವ ಮೂಲಕ ರೈತರನ್ನು ಹೊಡೆದಾಳುತ್ತಿದ್ದಾರೆ. ಅದಕ್ಕಾಗಿ ಧರ್ಮ ಜಾತಿಯನ್ನು ಮೀರಿ ರೈತರು ಒಂದಾಗಬೇಕು. ಗ್ರಾಮೀಣ ಕೃಪಾಂಕ ರೈತರ ಕೊಡುಗೆ. ಸರ್ಕಾರಿ ಶಾಲೆಗಳು ಮುಚ್ಚಿದರೆ ಬಡ ರೈತನ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆಂದರು.

ಶಾಸಕ ದರ್ಶನ ಪುಟ್ಟಣ್ಣಯ್ಯ ಮಾತನಾಡಿ,ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ದೊರೆತರೆ ಮಾತ್ರ ರೈತ ಸಂಕಷ್ಯಗಳಿಂದ ಪಾರಾಗುತ್ತಾನೆ. ರೈತ ಬೆವರು ಸುರಿಸಿ ಬೆಳೆಯುವ ಬೆಳೆಯನ್ನು ತೆಗೆದುಕೊಂಡು ಹೋಗುವ ಮಧ್ಯವರ್ತಿಗಳು ಲಾಭ ಗಳಿಸುತ್ತಿದ್ದಾರೆ. ದೇಶಕ್ಕೆ ಅನ್ನ ನೀಡುವ ರೈತ ಸಾಲಗಾರನಾಗುತ್ತಿದ್ದಾನೆ. ನಾವು ಎಲ್ಲಿ ಎಡವುತ್ತಿದ್ದೇವೆನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳದಿದ್ದರೆ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ. ರೈತ ಸಂಘಟನೆಗಳು ಓಳಾಗಬಾರದು. ಒಗ್ಗಟ್ಟಾಗಿದ್ದಾಗ ಮಾತ್ರ ಆಳುವ ಸರ್ಕಾರಗಳನ್ನು ಮಣಿಸಲು ಸಾಧ್ಯ. ದೊಡ್ಡ ಶಕ್ತಿಯಾಗಿ ರೈತರು ಬೆಳೆದಾಗ ರೈತ ಕುಲ ಉಳಿಯುತ್ತದೆ ಎಂದರು.

ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿ ಅತಿವೃಷ್ಟಿ, ಅನಾವೃಷ್ಟಿ, ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದೆ ರೈತ ಸಾಲಗಾರನಾಗುತ್ತಿದ್ದಾನೆ. ಚುನಾವಣೆ ಸಮಯದಲ್ಲಿ ಜಾತಿ ಆಧಾರದ ಮೇಲೆ ರೈತ ಸಂಘದಲ್ಲಿ ಒಡಕುಂಟಾಗುತ್ತದೆ. ನಿಮ್ಮಲ್ಲಿ ಒಗ್ಗಟ್ಟಿಲ್ಲದಿರುವುದು ಇದಕ್ಕೆ ಕಾರಣ. ಕೃಷಿಗೆ ಸಂಕಷ್ಟ ಎದುರಾಗಿದೆ. ಸಂಘಟಿತರಾಗಿದ್ದಾಗ ಮಾತ್ರ ರೈತ ಸಮುದಾಯ ನ್ಯಾಯ ಪಡೆಯಬಹುದು ಎಂದು ಹೇಳಿದರು.

ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ ರೈತರೆ ನಿಜವಾದ ಮಣ್ಣಿನ ಮಕ್ಕಳು. ದೇಶಕ್ಕೆ ಅನ್ನ ನೀಡುವ ರೈತನ ಬದುಕು ಇನ್ನು ಸುಧಾರಣೆಯಾಗಿಲ್ಲ. ಎಲ್ಲರೂ ಸಂಘಗಳನ್ನು ಕಟ್ಟಿಕೊಂಡಿದ್ದಾರೆ. ರೈತನ ಮೇಲೆ ಹಲ್ಲೆ ನಡೆದರೆ ಕೇಳುವವರು ಇಲ್ಲದಂತಾಗಿದ್ದಾರೆ. ರೈತನ ಶಕ್ತಿ ಮಾರ್ಕೆಟ್‍ನಲ್ಲಿ ಬಿದ್ದು ಹೋಗುತ್ತದೆ. ಹೆಗಲ ಮೇಲೆ ಹಸಿರು ಟವಲ್ ಹಾಕಿಕೊಳ್ಳಿ ಬದುಕು ಹಸನಾಗುತ್ತದೆ ಎಂದರು.

ಉಗ್ರ ನರಸಿಂಹಗೌಡ, ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಮಲ್ಲಾಪುರ ತಿಪ್ಪೇಸ್ವಾಮಿ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ಧನಂಜಯ ಹಂಪಯ್ಯನಮಾಳಿಗೆ, ಜಿಲ್ಲಾ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ರಾಜ್ಯ ವಲಯ ಉಪಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ಹಂಪಯ್ಯನಮಾಳಿಗೆ ಗ್ರಾಮದ ಮುಖಂಡ ಗೋವಿಂದರೆಡ್ಡಿ ಇನ್ನು ಅನೇಕರು ವೇದಿಕೆಯಲ್ಲಿದ್ದರು. ಗೊಲ್ಲರಹಟ್ಟಿ, ಬೊಮ್ಮನಹಳ್ಳಿ, ಹೊಸಮಾಳಿಗೆ ರೈತರು ರೈತ ಸಂಘದ ಪುನಃಶ್ಚೇತನ ಸಮಾರಂಭದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

೪೩೪೦೦ ಕೋಟಿ ರು. ಮೀಸಲು: ಟಿ.ಬಿ.ಜಯಚಂದ್ರ
ಮಹಾವೀರರ ತತ್ವಗಳಿಂದ ಉದ್ವಿಗ್ನತೆ ಶಮನ