ಕುಮಟಾ: ಸತ್ಯ, ಅಹಿಂಸೆ, ನೈತಿಕತೆ, ಶುದ್ಧತೆ ಮುಂತಾದ ಸದ್ಗುಣಗಳಿಂದ ಬದುಕುವುದರೊಟ್ಟಿಗೆ ಇತರರಿಗೂ ಬದುಕಲು ಬಿಡುವುದು ಭಗವಾನ್ ಮಹಾವೀರರು ನಮಗೆ ಹಾಕಿಕೊಟ್ಟ ಮಾರ್ಗವಾಗಿದೆ ಎಂದು ಏಲಾಚಾರ್ಯ ಶ್ರೀ ಪ್ರಸಂಗಸಾಗರ ಮಹಾರಾಜ ನುಡಿದರು.
ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಪಟ್ಟಣದ ಹವ್ಯಕ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು. ಪೂಜೆ, ಪ್ರಾರ್ಥನೆಗಳಿಗಿಂತ ಸದ್ಗುಣಶೀಲ ನಡತೆಯಿಂದ ಮಾತ್ರ ಪಾಪ ನಿವಾರಣೆ ಎಂದು ಜೈನ ತತ್ವವನ್ನು ಜಗತ್ತಿಗೆ ಸಾರಿದವರು ಭಗವಾನ ಮಹಾವೀರರು ಎಂದು ಹೇಳಿದರು.ಅಹಿಂಸೆಯೇ ಪರಮ ಧರ್ಮ ಎಂದವರಲ್ಲಿ ಮಹಾವೀರರೂ ಒಬ್ಬರು. ಕಾಯಾ-ವಾಚಾ-ಮನಸಾ ತ್ರಿಕರಣದಲ್ಲೂ ಹಿಂಸೆ ಮಾಡಬಾರದು. ಬ್ರಹ್ಮಚರ್ಯದ ಮಹತ್ವ ತಿಳಿಯಬೇಕು. ದೇಹದ ಹೊರಗಿನ ವಸ್ತ್ರ ಮಾತ್ರವಲ್ಲ, ಒಳಗಿನ ಕೆಟ್ಟ ಕಾಮನೆ, ವಾಸನೆಗಳನ್ನೂ ಬಿಸಾಕುವುದು ಮತ್ತು ಮೋಹ ಹಾಗೂ ತಿರಸ್ಕಾರವೆಂಬ ದೌರ್ಬಲ್ಯಗಳನ್ನು ಮೀರುವುದೇ ಮಹಾವೀರರು ತಿಳಿಸಿದ ದಿಗಂಬರ ಜೈನ ಸ್ವರೂಪವಾಗಿದೆ. ಮಹಾವೀರರ ಬೋಧನೆಗಳನ್ನು ಪಾಲಿಸುವುದೇ ಬದುಕಿನ ಸಾರ್ಥಕತೆಯಾಗಿದೆ. ಮಕ್ಕಳಿಗೆ ಸರಿಯಾದ ಸಂಸ್ಕಾರ ನೀಡುವುದು ಪಾಲಕರ ಜವಾಬ್ದಾರಿ. ಸಂಸ್ಕಾರ ಹೇಗಿರುತ್ತದೆಯೋ ಹಾಗೆ ವ್ಯಕ್ತಿ ರೂಪಿತವಾಗುತ್ತಾನೆ. ಯಾವುದೇ ಜಾತಿ, ಮತ, ಪಂಥದ ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಬದುಕುತ್ತಿರುವುದನ್ನು ಕುಮಟಾ ಭಾಗದಲ್ಲಿ ಗಮನಿಸಿದ್ದು ಸಂತೋಷ ತಂದಿದೆ ಎಂದು ಮುನಿಗಳು ಹೇಳಿದರು.ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಕಾರ್ಯಕ್ರಮ ಉದ್ಘಾಟಿಸಿದರು. ತಾಪಂ ಇಒ ರಾಜೇಂದ್ರ ಭಟ್ಟ ಮಾತನಾಡಿ, ಮಹಾವೀರರ ಜೀವನವೇ ಮಾರ್ಗದರ್ಶಿ ಬರಹದಂತಿದೆ. ನೀನೂ ಜೀವಿಸು, ಇತರರಿಗೂ ಜೀವಿಸಲು ಅವಕಾಶ ಮಾಡಿಕೊಡು ಎಂದವರು ಮಹಾವೀರರು. ಅಹಿಂಸೆ, ಸತ್ಯ, ಅಚೌರ್ಯ, ಬ್ರಹ್ಮಚರ್ಯ ಹಾಗೂ ಅಪರಿಗ್ರಹ ಎಂಬ ವ್ರತಗಳನ್ನು ಬೋಧಿಸಿದರು. ದರ್ಶನ, ಜ್ಞಾನ, ಚಾರಿತ್ರ್ಯವೆಂಬ ರತ್ನತ್ರಯ ಬೋಧನೆಗಳನ್ನು ಜೀವನದಲ್ಲಿ ನಾವು ಅಳವಡಿಸಿಕೊಳ್ಳಬೇಕಿದೆ ಎಂದರು.
ಜೈನ ದಿಗಂಬರ ಸಮಿತಿಯ ಅಧ್ಯಕ್ಷ ಎಂ.ಸಿ. ನಾಯ್ಕ, ಚಂದ್ರು ಗೌಡ, ಚೆನ್ನಬೈರಾದೇವಿ ದಿಗಂಬರ ಮಹಿಳಾ ಮಂಡಳಿ ಅಧ್ಯಕ್ಷೆ ರಾಜೇಶ್ವರಿ ಜೈನ, ಪುರಸಭಾ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ಸಿಪಿಐ ಯೋಗೇಶ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಜೈನ ಸಮುದಾಯದ ಸಾಧಕ ವಿದ್ಯಾರ್ಥಿಗಳಾದ ರಜತಕುಮಾರ್ ಜೈನ, ಪೂರ್ವಿ ಜೈನ ಹಾಗೂ ಶ್ರೇಯಸ್ ಜೈನ ಅವರನ್ನು ಸನ್ಮಾನಿಸಲಾಯಿತು. ಸರ್ಕಾರಿ ಪ್ರಾಯೋಗಿಕ ಶಾಲೆಯ ವಿದ್ಯಾರ್ಥಿನಿಯರು, ಶಿಕ್ಷಕಿಯರು ನಾಡಗೀತೆ ಪ್ರಸ್ತುತಪಡಿಸಿದರು. ಚೆನ್ನಬೈರಾದೇವಿ ದಿಗಂಬರ ಮಹಿಳಾ ಮಂಡಳಿ ಮಹಾವೀರರನ್ನು ಸ್ತುತಿಸಿದರು. ತಹಸೀಲ್ದಾರ ಕೃಷ್ಣ ಕಾಮ್ಕರ್ ಸ್ವಾಗತಿಸಿದರು. ಮಹಾವೀರ ಜೈನ ಕಾಗಾಲ ಪ್ರಾಸ್ತಾವಿಕ ಮಾತನಾಡಿದರು. ಮಹಾಲಕ್ಷ್ಮೀ ಜೈನ ಪರಿಚಯಿಸಿದರು. ಯೋಗೇಶ ಕೋಡ್ಕಣಿ ಕಾರ್ಯಕ್ರಮ ನಿರೂಪಿಸಿದರು. ಹೇಮಂತಕುಮಾರ ಗಾಂವಕರ ವಂದಿಸಿದರು.