ಕಾವೇರಿ ಸಮಸ್ಯೆಗೆ ಮೇಕೆದಾಟು ಅಣೆಕಟ್ಟು ಶಾಶ್ವತ ಪರಿಹಾರ

KannadaprabhaNewsNetwork |  
Published : Sep 11, 2026, 01:30 AM IST
10ಕೆಎಂಎನ್‌ಡಿ-2ಪಿ.ರವಿಕುಮಾರ್‌ | Kannada Prabha

ಸಾರಾಂಶ

ಕಾವೇರಿ ವಿಚಾರದಲ್ಲಿ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಲು ಮುಂದಾಗಿರುವುದನ್ನು ಉಲ್ಲೇಖಿಸಿದ ಅವರು, ಕಾವೇರಿ ವಿಚಾರದಲ್ಲಿ ರಾಜ್ಯದ ಹಿತ ಕಾಪಾಡಲು ಮತ್ತಷ್ಟು ಪರಿಣಾಮಕಾರಿ ಕಾನೂನು ಹೋರಾಟ ಅಗತ್ಯವಿದೆ. ಸಮಿತಿ ಮತ್ತು ಪ್ರಾಧಿಕಾರಕ್ಕೆ ಕಣ್ಣು, ಕಿವಿ, ಮೂಗು ಇಲ್ಲವೇ ಎಂಬುದು ಅರ್ಥವಾಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ. ರವಿಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ನಿರ್ವಹಣಾ ಸಮಿತಿ ಹಾಗೂ ಪ್ರಾಧಿಕಾರದಲ್ಲಿ ತಮಿಳುನಾಡಿನ ಅಧಿಕಾರಿಗಳ ಪ್ರಭಾವ ಹೆಚ್ಚಿದೆ. ನಾವು ಏನೇ ಹೇಳಿದರೂ ಕೇಳದೆ ನೀರು ಬಿಡುವಂತೆ ಸೂಚಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮೆಟ್ಟೂರು ಜಲಾಶಯದಲ್ಲಿ ನೀರು ಸಂಗ್ರಹಿಸಿಕೊಂಡು, ಕರ್ನಾಟಕದಿಂದ ನೀರು ಬಿಡಿಸುವುದು ನ್ಯಾಯಸಮ್ಮತವಲ್ಲ. ಕರ್ನಾಟಕದ ರೈತರಿಗೆ ಬೆಳೆ ಬೆಳೆಯಬೇಡಿ ಎಂದು ಹೇಳುವ ಪರಿಸ್ಥಿತಿ ಇದ್ದರೆ, ತಮಿಳುನಾಡಿನಲ್ಲಿ ಬೆಳೆ ಬೆಳೆಯಲು ನೀರು ಬಿಡಲಾಗುತ್ತಿದೆ. ಈ ತಾರತಮ್ಯವನ್ನು ಒಪ್ಪಲು ಸಾಧ್ಯವಿಲ್ಲ. ರಾಜ್ಯದ ಕುಡಿಯುವ ನೀರಿನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ನೀರು ಬಿಡಬಾರದು ಎಂಬುದು ತಮ್ಮ ನಿಲುವು ಎಂದರು.

ಕಾವೇರಿ ವಿಚಾರದಲ್ಲಿ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಲು ಮುಂದಾಗಿರುವುದನ್ನು ಉಲ್ಲೇಖಿಸಿದ ಅವರು, ಕಾವೇರಿ ವಿಚಾರದಲ್ಲಿ ರಾಜ್ಯದ ಹಿತ ಕಾಪಾಡಲು ಮತ್ತಷ್ಟು ಪರಿಣಾಮಕಾರಿ ಕಾನೂನು ಹೋರಾಟ ಅಗತ್ಯವಿದೆ ಎಂದರು.

ಸಮಿತಿ ಮತ್ತು ಪ್ರಾಧಿಕಾರಕ್ಕೆ ಕಣ್ಣು, ಕಿವಿ, ಮೂಗು ಇಲ್ಲವೇ ಎಂಬುದು ಅರ್ಥವಾಗುತ್ತಿಲ್ಲ. ತಮಿಳುನಾಡಿನ ಅಧಿಕಾರಿಗಳ ಲಾಬಿ ಎಲ್ಲೆಡೆ ಇದೆ. ಕೇಂದ್ರ ಮಟ್ಟದಲ್ಲೂ ಅವರ ಪ್ರಭಾವವಿದೆ ಎಂದು ಆರೋಪಿಸಿದರು.

ಕಾವೇರಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಮೇಕೆದಾಟು ಯೋಜನೆ ನಿರ್ಮಾಣವಾಗಬೇಕು, ಕರ್ನಾಟಕದ ಹಿತದ ವಿಚಾರದಲ್ಲಿ ಕೇಂದ್ರದ 18 ಬಿಜೆಪಿ ಸಂಸದರು ಧ್ವನಿ ಎತ್ತುತ್ತಿಲ್ಲ. ಅಭಿವೃದ್ಧಿ ಹಾಗೂ ರಾಜ್ಯದ ಪ್ರಮುಖ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳದ ವಿರೋಧ ಪಕ್ಷವನ್ನು ಈ ಬಾರಿ ನೋಡುತ್ತಿದ್ದೇವೆ ಎಂದು ಅವರು ವಾಗ್ದಾಳಿ ನಡೆಸಿದರು.

ಇ.ಡಿ. ದಾಳಿ ರಾಜಕೀಯ ಪ್ರೇರಿತ

ಸಚಿವ ಸತೀಶ್ ಜಾರಕಿಹೋಳಿ ಅವರಿಗೆ ಸಂಬಂಧಿಸಿದವರ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ನಡೆಸಿರುವ ದಾಳಿ ರಾಜಕೀಯ ಪ್ರೇರಿತ ಎಂದು ಶಾಸಕ ಪಿ. ರವಿಕುಮಾರ್ ಆರೋಪಿಸಿದರು.

ಇ.ಡಿ.ಬಿಜೆಪಿಯ ಬ್ರಾಂಚ್ ಆಫೀಸ್‌ನಂತೆ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ನ್ನು ದುರ್ಬಲಗೊಳಿಸುವ ಉದ್ದೇಶದಿಂದ ಬಲಿಷ್ಠ ನಾಯಕರನ್ನು ಹುಡುಕಿ ಹುಡುಕಿ ದಾಳಿ ನಡೆಸಲಾಗುತ್ತಿದೆ ಎಂದು ಟೀಕಿಸಿದರು.

ಸತೀಶ್ ಜಾರಕಿಹೋಳಿ ಅವರ ಬಾಮೈದರಿಂದ ತಪ್ಪು ನಡೆದಿದೆಯೇ ಎಂಬುದು ಗೊತ್ತಿಲ್ಲ. ಆದರೆ, ಅದಕ್ಕೂ ಸತೀಶ್ ಜಾರಕಿಹೋಳಿ ಅವರಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ ಗಣಿಗ, ಸರ್ಕಾರದಲ್ಲಿ ಬಿರುಕು ಮೂಡಿಸಬಹುದೇ ಎಂಬ ಉದ್ದೇಶದಿಂದ ಇಂತಹ ದಾಳಿಗಳನ್ನು ನಡೆಸಲಾಗುತ್ತಿದೆ ಎಂದರು.

ದಾಳಿ ನಡೆಸಿದ ಬಳಿಕ ನಮ್ಮ ಪಕ್ಷಕ್ಕೆ ಸೇರಿ ಎಂದು ಬೆದರಿಕೆ ಹಾಕುವುದು ರಾಜಕೀಯ ಆಟ. ಯಾರು ಪ್ರಬಲರಾಗಿದ್ದಾರೆ ಅವರನ್ನೇ ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬರುವ ಉದ್ದೇಶದಿಂದ ಇಂತಹ ಆಟ ಆಡುತ್ತಿದೆ ಎಂದು ಆರೋಪಿಸಿದರು.

ಸತೀಶ್ ಜಾರಕಿಹೋಳಿ ಅವರು ಕಾಂಗ್ರೆಸ್‌ನ ನಿಷ್ಠಾವಂತ ಸಚಿವರಾಗಿದ್ದು, ಅವರ ವಿರುದ್ಧದ ಕ್ರಮವನ್ನು ಬಿಜೆಪಿ ಕೃಪಾಪೋಷಿತ ನಾಟಕ ಮಂಡಳಿ ಎಂದು ಶಾಸಕ ಗಣಿಗ ರವಿಕುಮಾರ್ ವ್ಯಂಗ್ಯವಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಂದ್ರಗುತ್ತಿಯಲ್ಲಿ ದಸರಾ ಉತ್ಸವಕ್ಕೆ ಸಕಲ ಸಿದ್ಧತೆ
₹ 2.5 ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿಗೆ ಚಾಲನೆ: ಎಚ್. ಗಣಪತಿ