ಚಿತ್ರದುರ್ಗ: ಬಂದೂಕು, ಗುಂಡು ಇಲ್ಲದೆ ಅಹಿಂಸೆ, ಸತ್ಯದ ಹಾದಿಯಲ್ಲಿ ಬ್ರಿಟೀಷರ ಕಪಿಮುಷ್ಠಿಯಿಂದ ಭಾರತವನ್ನು ಮುಕ್ತಿಗೊಳಿಸಿದ ಮಹಾನ್ ನಾಯಕ ಮಹಾತ್ಮಗಾಂಧೀಜಿ ಸೇರಿ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ನಮ್ಮೆಲ್ಲರ ಹೊಣೆಗಾರಿಕೆ ಆಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ಗಾಂಧೀಜಿ ಕೇವಲ ದೇಶಕ್ಕೆ ಸ್ವತಂತ್ರ ತಂದುಕೊಡುವುದಷ್ಟಕ್ಕೆ ಸೀಮಿತವಾಗಿಲ್ಲದೆ ಪಾನಮುಕ್ತ ದೇಶ ನಿರ್ಮಾಣದ ಕನಸು ಕಂಡಿದ್ದರು. ಭಾರತದಲ್ಲಿ ತಾಂಡವವಾಡುತ್ತಿದ್ದ ಅಸ್ಪೃಶ್ಯತೆ ವಿರುದ್ಧ ಅಭಿಯಾನ, ಪಾದಯಾತ್ರೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ನೊಂದ ಜನರು ಮುಖ್ಯವಾಹಿನಿಗೆ ಬರುವ ರೀತಿ ಕಾರ್ಯನಿರ್ವಹಿಸಿದರು ಎಂದು ಹೇಳಿದರು.
ಪರಿಶಿಷ್ಟರ ಕಾಲನಿಗಳಿಗೆ ತೆರಳಿ ಶೌಚಗೃಹ, ಚರಂಡಿ, ಬೀದಿಬದಿ ಸ್ವಚ್ಛತೆಗೊಳಿಸುವ ಕಾರ್ಯ ಸ್ವತಃ ನಡೆಸಿದ ಗಾಂಧೀಜಿ, ಎಲ್ಲರೂ ಮಾನವರೇ ಎಂಬ ಸಂದೇಶ ರವಾನಿಸಿದರು. ಜಾತಿಯಿಂದ ಯಾರೊಬ್ಬರೂ ಅವಮಾನಿತರಾಗಬಾರದೆಂದು ಅಸ್ಪೃಶ್ಯ ನೋವುಂಡುತ್ತಿದ್ದ ಜನರನ್ನು ಹರಿಜನರೆಂದು ಕರೆದು ಜನರ ಮನಸ್ಸಿನಿಂದ ಅಸ್ಪೃಶ್ಯತೆ ದೂರಗೊಳಿಸಲು ಮುಂದಾದ ಕಾರ್ಯ ಸ್ಮರಣೀಯ ಎಂದು ತಿಳಿಸಿದರು.ದಲಿತರ ಮಕ್ಕಳನ್ನು ಶಿಕ್ಷಣವಂತರನ್ನಾಗಿಸಬೇಕೆಂಬ ಆಶಯದೊಂದಿಗೆ ತಾವು ಕಾಲಿಟ್ಟ ಕಡೆಗಳಲ್ಲಿ ಹರಿಜನ ವಿದ್ಯಾರ್ಥಿ ನಿಲಯಗಳ ಸ್ಥಾಪನೆ ಮಾಡಿದ್ದು, ದಲಿತರಲ್ಲಿ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿತು ಎಂದರು.
ಎಸ್ಸಿ ಘಟಕದ ತಾಲೂಕು ಅಧ್ಯಕ್ಷ ಅನಿಲ್ ಕೋಟಿ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಬೋರೇನಹಳ್ಳಿ, ಶಾಮಿಯಾನ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ, ಮುಖಂಡರಾದ ಮಣಿ, ಪಾಂಡುರಂಗಪ್ಪ ಚಿಕ್ಕಾಲಘಟ್ಟ, ಇಂಗಳದಾಳ್ ರಘು ಇತರರಿದ್ದರು.