ಕನ್ನಡ ಕಾರ್ತಿಕೋತ್ಸವ, ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮದ ಸಮಾರೋಪ ಕನ್ನಡಪ್ರಭ ವಾರ್ತೆ ಕಾರಟಗಿ
ಇಲ್ಲಿನ ಕೆಪಿಎಸ್ ಶಾಲೆಯಲ್ಲಿ ಕಸಾಪ ತಾಲೂಕು ಘಟಕ ಹಮ್ಮಿಕೊಂಡಿದದ ಕನ್ನಡ ಕಾರ್ತಿಕೋತ್ಸವ ಮತ್ತು ಕುವೆಂಪು ಜನ್ಮದಿನಾಚರಣೆ ಹಿನ್ನೆಲೆ ಆಚರಿಸಲಾಗುವ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು.
ಕನ್ನಡ ಭಾಷೆ, ನೆಲ ಜಲಕ್ಕೆ ಕನ್ನಡಿಗರಿಂದಲೇ ಕುತ್ತು ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಬಹುಶಃ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ನಾಡು, ನುಡಿ ರಕ್ಷಣೆಯ ಹೆಸರಿನಲ್ಲಿ ವೇದಿಕೆಗಳು ಹೀಗೆ ಹತ್ತು ಹಲವು ಸಂಘಟನೆಗಳು ನಮ್ಮ ಮಾತೃ ಭಾಷೆ ರಕ್ಷಣೆಗೆ ಇದ್ದರೂ ಕನ್ನಡ ಭಾಷೆಗೆ ಕುತ್ತು ಬಂದಿರುವುದು ವಿಪರ್ಯಾಸ ಎಂದು ವಿಷಾದ ವ್ಯಕ್ತಪಡಿಸಿದರು.ಕುವೆಂಪು ಅವರ ಮನುಜಮತ- ವಿಶ್ವಪಥ ಸಂದೇಶದ ಕುರಿತು ವಿಶೇಷ ಉಪನ್ಯಾಸ ನೀಡಿದ ಅಕ್ಷರ ಸಂಗಾತ ಪತ್ರಿಕೆಯ ಸಂಪಾದಕ ಟಿ.ಎಸ್. ಗೊರವರ, ಮಾನವ ಹುಟ್ಟುತ್ತಾ ವಿಶ್ವಮಾನವನಾಗಿ ಹುಟ್ಟುತ್ತಾನೆ. ಬೆಳೆಯುತ್ತಲೇ ಆತ ಜಾತಿ, ಧರ್ಮಗಳು, ಮೌಢ್ಯತೆಯಂತಹ ಸಂಕೋಲೆಗಳಲ್ಲಿ ಸಿಲುಕಿ ಅಲ್ಪಮಾನವನಾಗುತ್ತಾನೆ. ಆತನಿಗೆ ಶಿಕ್ಷಣ, ಮೌಲ್ಯಗಳನ್ನು ನೀಡಿ ಪುನಃ ವಿಶ್ವಮಾನವನನ್ನಾಗಿ ಮಾಡುವ, ಸರ್ವರು ಸಮಾನರು ಎಂಬ ಭಾತೃತ್ವದ ಚಿಂತನೆ ಸಾರಿದ ಕುವೆಂಪು ಅವರ ಕೊಡುಗೆ ಅನನ್ಯವಾಗಿದೆ ಎಂದರು.
ಜಾತಿ, ಧರ್ಮ, ಮೌಢ್ಯತೆಯಂತಹ ಮುಂತಾದ ಸಾಮಾಜಿಕ ಅನಿಷ್ಟಗಳ ವಿರುದ್ಧ "ವಿಶ್ವ ಭಾತೃತ್ವ " ಪ್ರತಿಪಾದಿಸಿದ್ದಾರೆ. ವೈಚಾರಿಕತೆಯನ್ನು ವಿದ್ಯಾರ್ಥಿ ದೆಸೆಯಿಂದಲೇ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಕ್ರಾಂತಿಯ ಮನೋಭಾವ ಕೇವಲ ರಾಜಕೀಯ ವ್ಯವಸ್ಥೆಯ ವಿರುದ್ಧವಾಗಿ ಮಾತ್ರ ಸೀಮಿತವಾಗಿರದೆ, ಸಾಹಿತ್ಯದಲ್ಲಿಯೂ ಇರಬೇಕೆಂದು ಅವರ ನಿಲುವಾಗಿತ್ತು ಎಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಕುವೆಂಪು ಬರಹವು ಆಧುನಿಕ ಸಮಾಜಕ್ಕೆ ವೈಚಾರಿಕ ನೆಲೆಗಟ್ಟನ್ನು ಒದಗಿಸಿದೆ. ಸಮಾಜದಲ್ಲಿರುವ ಅಮಾನವೀಯ ಅಂಶಗಳನ್ನು ದೂರಿಕರಿಸಲು ಲೇಖನಿಯನ್ನು ಅರ್ಥಪೂರ್ಣವಾಗಿ ಬಳಸಿದರು. ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂದು ಹೇಳುವ ಮೂಲಕ ಎಲ್ಲರಲ್ಲಿಯೂ ಕನ್ನಡತನ ಗುಣ ಮೈಗೂಡಿಸಿಕೊಳ್ಳಬೇಕು ಎಂದು ಕರೆ ಕೊಟ್ಟಿದ್ದಾರೆ ಎಂದರು.
ನಂತರ ಸಿಂಧನೂರಿನ ಕನ್ನಡ ಸಾಹಿತ್ ಪರಿಷತ್ ತಾಲೂಕಾಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ, ಕಸಾಪ ನಿಕಟಪೂರ್ವ ಅಧ್ಯಕ್ಷ ಚನ್ನಬಸಪ್ಪ ವಕ್ಕಳದ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ವಿಠ್ಠಲ್ ಜೀರಗಾಳಿ, ಕಸಾಪ ಜಿಲ್ಲಾ ಘಟಕದ ಮಹಿಳಾ ಪ್ರತಿನಿಧಿ ವಿಜಯಲಕ್ಷ್ಮೀ ಮೇಲಿನಮನಿ ಮಾತನಾಡಿದರು. ಕೆಪಿಎಸ್ ಪ್ರೌಢಶಾಲಾ ವಿಭಾಗದ ಉಪ ಪ್ರಾಚಾರ್ಯ ಶರಣಪ್ಪ ಸೋಮಲಾಪುರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಕಸಾಪ ತಾಲೂಕಾಧ್ಯಕ್ಷ ಶರಣಪ್ಪ ಕೋಟ್ಯಾಳ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಈ ಸಂದರ್ಭ ಶಿಕ್ಷಕರ ಪತ್ತಿನ ಸಂಘದ ನಿರ್ಧೇಶಕ ಬಸವರಾಜ ರ‍್ಯಾವಳದ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ವಾಲ್ಮೀಕಿ ಮಂಜುನಾಥ, ಸಿ.ಆರ್.ಪಿಗಳಾದ ತಿಮ್ಮಣ್ಣ ನಾಯಕ, ಭೀಮಣ್ಣ ಕರಡಿ, ಕೆಪಿಎಸ್‌ನ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಶಾಲೆಯ ಸಂಗೀತ ಶಿಕ್ಷಕ ಸಂತೋಷ ಹಾಗೂ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಕಸಾಪ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಚಿಕೇನಕೊಪ್ಪ ನಿರೂಪಿಸಿ, ಸದಸ್ಯರುಗಳಾದ ಹುಲಗಪ್ಪ ದಿಡ್ಡಿ, ಮಲ್ಲಿಕಾರ್ಜುನ ಯತ್ನಟ್ಟಿ, ಅಲಿ ಹುಸೇನ್ ಕಾರ್ಯಕ್ರಮ ನಿರ್ವಹಿಸಿದರು.