ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿದ ಸಚಿವರು

KannadaprabhaNewsNetwork | Published : Jun 18, 2024 12:47 AM

ಸಾರಾಂಶ

ಮಿನಿ ವಿಧಾನಸೌಧ, ನ್ಯಾಯಾಲಯ ಸಂಕೀರ್ಣ, ಪುರಸಭೆ ಕಾರ್ಯಾಲಯ ಮತ್ತು ಸರ್ಕಾರದ ವಿವಿಧ ಕಚೇರಿ ನಿರ್ಮಾಣಕ್ಕೆ ಅವಶ್ಯ ಸ್ಥಳ ಪರಿಶೀಲನೆ ಕಾರ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳ ತಂಡದೊಂದಿಗೆ ಸೋಮವಾರ ಇಲ್ಲಿ ನಡೆಸಿದರು.

ಪ್ರಸ್ತಾವನೆ ಸಿದ್ಧಗೊಳಿಸುವಂತೆ ಅಧಿಕಾರಿಗಳಿಗೆ ಶಿವರಾಜ ತಂಗಡಗಿ ಸೂಚನೆ । ಶೀಘ್ರದಲ್ಲಿಯೇ ಇಂದಿರಾ ಕ್ಯಾಂಟಿನ್ ಕಟ್ಟಡಕ್ಕೆ ಭೂಮಿ ಪೂಜೆ

ಕನ್ನಡಪ್ರಭ ವಾರ್ತೆ ಕಾರಟಗಿ

ಮಿನಿ ವಿಧಾನಸೌಧ, ನ್ಯಾಯಾಲಯ ಸಂಕೀರ್ಣ, ಪುರಸಭೆ ಕಾರ್ಯಾಲಯ ಮತ್ತು ಸರ್ಕಾರದ ವಿವಿಧ ಕಚೇರಿ ನಿರ್ಮಾಣಕ್ಕೆ ಅವಶ್ಯ ಸ್ಥಳ ಪರಿಶೀಲನೆ ಕಾರ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳ ತಂಡದೊಂದಿಗೆ ಸೋಮವಾರ ಇಲ್ಲಿ ನಡೆಸಿದರು.

ತಾಲೂಕು ಕೇಂದ್ರವಾಗಿ ರಚನೆಯಾದ ಬಳಿಕ ಮೊದಲ ಬಾರಿಗೆ ಪಟ್ಟಣಕ್ಕೆ ಮಿನಿ ವಿಧಾನಸೌಧ, ಪುರಸಭೆ ಕಾರ್ಯಾಲಯ, ನ್ಯಾಯಾಲಯ ಸಂಕೀರ್ಣ ಹಾಗೂ ಕ್ರೀಡಾಂಗಣದ ಜೊತೆ ವಿವಿಧ ಕಚೇರಿಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಅದಕ್ಕೆ ಸೂಕ್ತ ಸ್ಥಳ ಪರಿಶೀಲನೆಯನ್ನು ಸಚಿವರು ಮಾಡಿದರು.

ಪಟ್ಟಣದ ಮಧ್ಯಭಾಗದಲ್ಲಿನ ಸರ್ವೇ ನಂ.೪೧೬ರ ಪ್ರದೇಶದಲ್ಲಿ ಮಿನಿ ವಿಧಾನಸೌಧ, ಪುರಸಭೆ ಕಾರ್ಯಾಲಯ, ನ್ಯಾಯಾಲಯ ಸಂಕೀರ್ಣ ಹಾಗೂ ತಾಲೂಕಾ ಕ್ರೀಡಾಂಗಣ ನಿರ್ಮಾಣಕ್ಕೆ ನೀಲ ನಕ್ಷೆ ಸಿದ್ಧಪಡಿಸಲಾಗಿದ್ದು ಭೂಮಿ ಲಭ್ಯತೆ ಸೇರಿದಂತೆ ಅಗತ್ಯ ದಾಖಲೆಗಳು ಪ್ರಸ್ತಾವನೆ ಸಿದ್ಧಪಡಿಸಬೇಕು.

ಒಟ್ಟು ೩೬ ಎಕರೆ ಪ್ರದೇಶವಿದ್ದು, ಅದರಲ್ಲಿ ಕೆರೆ ನಿರ್ಮಿಸಲಾಗಿದೆ. ಉಳಿದ ಪ್ರದೇಶದಲ್ಲಿ ನಾಲ್ಕೈದು ಎಕರೆಯಲ್ಲಿ ಒಳ ಮತ್ತು ಹೊರ ಕ್ರೀಡಾಂಗಣ, ಇದೇ ಪ್ರದೇಶದಲ್ಲಿನ ನಿರುಪಯುಕ್ತ ನಿಲ್ದಾಣದ ಜಾಗೆಯಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸಂಬಂಧ ಪ್ರಸ್ತಾವನೆ ಸಿದ್ಧಗೊಳಿಸುವಂತೆ ಸ್ಥಳದಲ್ಲಿದ್ದ ತಹಸೀಲ್ದಾರ್ ಕುಮಾರಸ್ವಾಮಿಗೆ ಸೂಚಿಸಿದರು.

ಸಂತೆ ಮಾರುಕಟ್ಟೆ ಮತ್ತು ಸೊಸೈಟಿ ಮಧ್ಯದಲ್ಲಿ ನ್ಯಾಯಾಲಯ ಸಂಕೀರ್ಣ ಮತ್ತು ಅದರ ಗ್ರಾಪಂಗೆ ಸೇರಿದ ಜಾಗೆಯಲ್ಲಿ ಪುರಸಭೆ ಕಚೇರಿ ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದು, ಒಟ್ಟಾರೆಯಾಗಿ ಇನ್ನು ನಾಲ್ಕೈದು ತಿಂಗಳಲ್ಲಿ ನೂತನ ತಾಲೂಕಾ ಕೇಂದ್ರಕ್ಕೆ ಬೇಕಾದ ಎಲ್ಲ ಕಚೇರಿಗಳನ್ನು ನಿರ್ಮಿಸುವ ಗುರಿ ಇಟ್ಟುಕೊಳ್ಳಲಾಗಿದೆ ಅಧಿಕಾರಿಗಳು ತ್ವರಿತವಾಗಿ ಸಂಬಂಧಿಸಿದ ಕಡತಗಳನ್ನು ಸಿದ್ದಪಡಿಸಿ ಪ್ರಸ್ತಾವನೆಯನ್ನು ಕಳುಹಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಹೊಸ ಬಸ್ ನಿಲ್ದಾಣದ ಮುಂದಿನ ಸರ್ಕಾರಿ ಆಸ್ಪತ್ರೆಯ ಜಾಗೆಯಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳವನ್ನೂ ಸಚಿವರು ಪರಿಶೀಲಿಸಿ ಈಗಾಗಲೇ ಅಲ್ಲಿದ್ದ ಗೂಡಂಗಡಿಗಳನ್ನು ತೆರವುಗೊಳಿಸಿದ್ದು, ಅಲ್ಲಿ ಶೀಘ್ರದಲ್ಲಿಯೇ ಇಂದಿರಾ ಕ್ಯಾಂಟಿನ್ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸುವುದಾಗಿ ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ತಂಗಡಗಿ, ನಿರುಪಯುಕ್ತ ಹಳೇ ಬಸ್ ನಿಲ್ದಾಣ ಸಂಬಂಧ ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಮಾತನಾಡಿದ್ದು, ತಮ್ಮ ಇಲಾಖೆಯಿಂದ ಆದಷ್ಟು ಬೇಗ ಕಂದಾಯ ಇಲಾಖೆಗೆ ವರ್ಗಾಂತರಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಇನ್ನು 3-4 ತಿಂಗಳಲ್ಲಿ ಮಿನಿ ವಿಧಾನಸೌಧಕ್ಕೆ ಭೂಮಿ ಪೂಜೆ ನೆರವೇರಿಸುತ್ತೇವೆ ಎಂದು ಭರವಸೆ ನೀಡಿದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ, ಎಸಿ ಕ್ಯಾಪ್ಟನ್ ಮಹೇಶ್‌ಮಾಲಗತ್ತಿ, ತಹಸೀಲ್ದಾರ್ ಎಂ. ಕುಮಾರಸ್ವಾಮಿ, ಪುರಸಭೆ ಸದಸ್ಯರಾದ ಎಚ್. ಈಶಪ್ಪ, ಹಿರೇಬಸ್ಸಪ್ಪ ಸಜ್ಜನ್, ದೊಡ್ಡಬಸವರಾಜ್ ಬೂದಿ, ಮಂಜುನಾಥ್ ಮೇಗೂರು, ಮಾಜಿ ಸದಸ್ಯ ರವಿ ಪಾಟೀಲ್ ನಂದಿಹಳ್ಳಿ, ಮುಖಂಡರಾದ ಶಶಿಧರಗೌಡ, ಶರಣೇಗೌಡ ಮಾ.ಪಾ, ಕೆ. ಸಿದ್ದನಗೌಡ, ಚನ್ನಬಸಪ್ಪ ಸುಂಕದ, ಶರಣಪ್ಪ ಪರಕಿ, ಬಸವರಾಜ ಪಗಡದಿನ್ನಿ, ಅಯ್ಯಪ್ಪ ಉಪ್ಪಾರ ಸೇರಿ ಇತರರಿದ್ದರು.ಎಂಜಿನಿಯರ್ ಅಮಾನತಿಗೆ ಸೂಚನೆ:

ಪಟ್ಟಣದ ಮಧ್ಯಭಾಗದಲ್ಲಿ ಕಳೆದ ವರ್ಷ ನಿರ್ಮಾಣಗೊಂಡ ₹೪ ಕೋಟಿ ವೆಚ್ಚದ ಕೆರೆಗೆ ಸಚಿವರು ತೆರಳಿ ಸ್ಥಿತಿಗತಿ ವೀಕ್ಷಿಸಿದರು. ಈ ವೇಳೆ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿರುವ ಕೆರೆಯನ್ನು ಕಂಡ ಸಚಿವರು ಅಲ್ಲಿದ್ದ ಸಣ್ಣ ನೀರಾವರಿ ಇಲಾಖೆ ಎಇಇ ಸೆಲ್ವ ಕುಮಾರ ಮತ್ತು ಗುತ್ತಿಗೆದಾರ ಮಲ್ಲಿಕಾರ್ಜುನ ಪೂಜಾರಿಯನ್ನು ತರಾಟೆಗೆ ತೆಗೆದುಕೊಂಡರು.

ಕೆರೆಗೆ ನೀರು ಸಂಗ್ರಹಿಸಲು ಮತ್ತು ಹೊರ ಬಿಡಲು ಒಳ ಮತ್ತು ಹೊರ ಹರಿವು ಕಾಲುವೆ ಎಲ್ಲಿದೆ. ನಾಲ್ಕು ಕೋಟಿಯಲ್ಲಿ ಈಗಾಗಲೇ ೨ ಕೋಟಿ ವ್ಯಯಿಸಿರುವುದಾಗಿ ತಿಳಿಸಿದ್ದೀರಿ ಉಳಿದ ಹಣದಲ್ಲಿ ಇನ್ನೇನು ಮಾಡುತ್ತಿರಿ ಎಂದು ಪ್ರಶ್ನಿಸಿದರು. ಈ ಕೆರೆ ಕಾಮಗಾರಿಯಲ್ಲಿ ಸರ್ಕಾರದ ಹಣ ಪೋಲಾಗಿದೆ. ಯಾವುದೂ ವೈಜ್ಞಾನಿಕವಾಗಿಲ್ಲ, ಕೂಡಲೇ ಸೆಲ್ವ ಕುಮಾರ ಅವರನ್ನು ಅಮಾನತು ಮಾಡಿ ಮತ್ತು ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಸಚಿವರು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ರಾಜೇಂದ್ರಗೆ ಸೂಚಿಸಿ ಕೂಡಲೇ ಈ ಕುರಿತು ಸಮಗ್ರ ವರದಿ ನೀಡುವಂತೆ ತಾಕೀತು ಮಾಡಿದರು.

ಎಂಜಿನಿಯರ್ ಸೂಚನೆ ಪ್ರಕಾರ ಕಾಮಗಾರಿ ನಿರ್ಮಾಣ ಮಾಡಲಾಗಿದೆ ತಪ್ಪೇನೂ ಇಲ್ಲ ಎಂದು ಗುತ್ತಿಗೆದಾರರು ಸಮರ್ಥನೆ ಮಾಡಿಕೊಂಡರು. ಆಗ ಸಚಿವರು ಪಟ್ಟಣದ ಮಧ್ಯಭಾಗದಲ್ಲಿ ಬೃಹತ್ ಕೆರೆಯನ್ನು ಗಟ್ಟಿ ಇಲ್ಲದೆ ಇಂಥ ಕಳಪೆ, ಅವೈಜ್ಞಾನಿಕ ಕಾಮಗಾರಿ ಮಾಡಲು ನಿಮ್ಮ ಮನಸ್ಸು ಹೇಗೆ ಬಂತು ಎಂದು ತರಾಟೆ ತೆಗೆದುಕೊಳ್ಳುವ ವೇಳೆ ಗುತ್ತಿಗೆದಾರ ಎಂಜಿನಿಯರ್ ಕಡೆ ಮುಖ ತಿರುಗಿಸಿದರು.

Share this article