ಕನ್ನಡಪ್ರಭ ವಾರ್ತೆ ಸಕಲೇಶಪುರ
"ಅರಣ್ಯ ಇಲಾಖೆಯವರೇನು ರೌಡಿಗಳೇನ್ರಿ, ಹಳ್ಳಿಜನರ ಮೇಲೆ ದೊಣ್ಣೆ ಎತ್ತಿಕೊಂಡು ಹೋಗುತ್ತೀರಲ್ಲ, ನಿಮ್ಮ ವರ್ತನೆ ಸರಿಪಡಿಸಿಕೊಳ್ಳದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ "ಇದು ಶಾಸಕ ಸಿಮೆಂಟ್ ಮಂಜು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೀಡಿದ ಎಚ್ಚರಿಕೆ.ಬುಧವಾರ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಏನ್ರೀ ಅರಣ್ಯ ಇಲಾಖೆಯವರು ಮೇಲಿನಿಂದ ಇಳಿದು ಬಂದವರ. ಸಾರ್ವಜನಿಕರ ಸೇವೆಗೆ ನಿಮ್ಮನ್ನು ನೇಮಿಸಿರುವುದು. ಸಾರ್ವಜನಿಕರ ಹಣದಿಂದಲೇ ನಿಮಗೆ ಸಂಬಳ ನೀಡುವುದು. ಹಳ್ಳಿಜನರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಲು ನಿಮಗ್ಯಾರ್ರಿ ಅಧಿಕಾರ ನೀಡಿದ್ದು. ಗ್ರಾಮಕ್ಕೆ ತೆರಳುವ ವೇಳೆ ದೊಣ್ಣೆ ಹಿಡಿದುಕೊಳ್ಳಬಹುದೇನ್ರಿ. ತಾಲೂಕಿನಲ್ಲಿ ಎಲ್ಲಿ ನೋಡಿದ್ರೂ ನಿಮ್ಮದೆ ಸಮಸ್ಯೆ. ನಿಮ್ಮಿಂದ ತಾಲೂಕಿನ ಅಭಿವೃದ್ಧಿಯೇ ಕುಂಠಿತಗೊಂಡಿದೆ. ರಸ್ತೆ ಮಾಡಲು ಹೋದ್ರೆ ಅಡ್ಡಿಪಡಿಸುತ್ತೀರಿ, ಜನರು ಪ್ರವಾಸಿ ತಾಣಗಳಿಗೂ ಹೋಗದಂತೆ ಮಾಡಿದ್ದೀರ, ಕುಡಿಯುವ ನೀರಿನ ಯೋಜನೆಗೂ ಅಡ್ಡಿಪಡಿಸುತ್ತೀರ. ಕನಿಷ್ಠ ಅರ್ಧ ಅಡಿ ಜಾಗದಲ್ಲಿ ಕೊರೆಯಲಾಗುವ ಕೊಳವೆಬಾವಿಗೂ ಅಡ್ಡಿಪಡಿಸುತ್ತೀರ ಎಂದರೆ ನಿಮಗೇನು ಹೇಳುವುದು. ತಾಲೂಕಿನಲ್ಲಿ ಅರಣ್ಯವೇ ಹೆಚ್ಚಿದೆ. ನೀವುಗಳು ಹುಟ್ಟುವ ಪೂರ್ವದಿಂದಲೂ ಜನರು ಇಲ್ಲೇ ವಾಸಿಸುತ್ತಿದ್ದಾರೆ. ಈಗ ನಿಮಗೆ ಅನುಕೂಲವಾಗುವಂತ ಕಾನೂನು ಮಾಡಿಕೊಂಡು ಎಲ್ಲ ಕೆಲಸಕ್ಕೂ ಅಡ್ಡಿಪಡಿಸುತ್ತಿದ್ದೀರ ಎಂದರೆ ಏನರ್ಥ ನೀವೇ ಹೇಳಿ? ಇಲ್ಲಿರುವವರನ್ನು ಎಲ್ಲಿಗೆ ಕಳುಹಿಸುವುದು. ಅಲ್ರೀ ತಾಲೂಕಿನಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆ ಬೆಳೆಯುವುದನ್ನೇ ರೈತರು ಬಿಟ್ಟಿದ್ದಾರೆ. ಅಳಿದುಳಿದ ರೈತರು ಅಲ್ಪಸ್ವಲ್ಪ ಬೆಳೆ ಬೆಳೆಯುತ್ತಿದ್ದಾರೆ. ಅದನ್ನು ಕಾಡುಹಂದಿಗಳು ತಿಂದು ಹಾಳು ಮಾಡುತ್ತಿವೆ. ಬೆಳೆ ಹಾಳು ಮಾಡುವ ವೇಳೆ ಹಂದಿ ಕೊಂದವರ ಮೇಲೆ ಕಠಿಣ ಸೆಕ್ಷನ್‌ಗಳನ್ನು ಹಾಕಿ ಜೈಲಿಗೆ ಹಾಕಿಸುವಷ್ಟು ಕ್ರೂರತನ ಏಕ್ರೀ? ಕನಿಷ್ಠ ಮನುಷ್ಯತ್ವ ಇಟ್ಟುಕೊಂಡು ಕೆಲಸ ಮಾಡಿ ಎಂದು ಯಸಳೂರು ವಲಯ ಅರಣ್ಯಾಧಿಕಾರಿ ಕೃಷ್ಣ ಹಾಗೂ ಸಕಲೇಶಪುರ ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್ ಅವರನ್ನು ತರಾಟೆ ತೆಗೆದುಕೊಂಡರು.
ಇದಕ್ಕೆ ಸಮಜಾಯಿಷಿ ನೀಡಿದ ಅಧಿಕಾರಿಗಳು ಹಲ್ಲೆ ಪ್ರಕರಣಕ್ಕೆ ವಿಷಾದವಿದೆ ಸಾರ್. ಮುಂದೆ ಹೀಗೆ ಆಗಲು ಬಿಡುವುದಿಲ್ಲ. ಕಾಮಗಾರಿ ಅಡ್ಡಿ ವಿಚಾರದಲ್ಲಿ ಇದುವರೆಗೆ ಆಗಿದ್ದು ಬಿಡಿ ಸಾರ್ ಮುಂದೆ ಯಾವುದೇ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳುತ್ತೇವೆ. ಹಂದಿ ಕೊಂದ ಪ್ರಕರಣದಲ್ಲಿ ಗ್ರಾಮಸ್ಥರೇ ದೂರು ನೀಡುತ್ತಿದ್ದಾರೆ. ನಾವು ಕ್ರಮ ಕೈಗೊಳ್ಳದಿದ್ದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ಹೋಗಲಿದೆ. ಆದ್ದರಿಂದ, ಕ್ರಮ ಅನಿವಾರ್ಯವಾಗಿದೆ ಎಂದರು.ಹೊಂದಾಣಿಕೆ ಕೊರತೆ: ಜಲಜೀವನ್ ಮಿಷನ್ ಕಾಮಗಾರಿ ಪ್ರಗತಿ ಕುಂಠಿತಗೊಂಡಿದ್ದು ಅರಣ್ಯ ಇಲಾಖೆ, ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಮತ್ತು ಚೆಸ್ಕಾಂ ಅಧಿಕಾರಿಗಳು ಜೋಡೆತ್ತಿನಂತೆ ಕೆಲಸ ಮಾಡಿದರೆ ಕಾಮಗಾರಿಗಳು ಈ ವೇಳೆಗೆ ಮುಕ್ತಾಯಗೊಳ್ಳಲಿದ್ದವು. ಆದರೆ, ನಿಮ್ಮಲ್ಲಿ ಹೊಂದಾಣಿಕೆ ಕೊರತೆ ಕಾಡುತ್ತಿದೆ. ಕುಡಿಯುವ ನೀರಿನ ಇಲಾಖೆಯವರೇನು ಅವರ ಮನೆ ಕಾಮಗಾರಿ ಮಾಡುತ್ತಿದ್ದಾರ? ಇಲ್ಲದ ಕಾರಣ ನೀಡಿ ವಿದ್ಯುತ್ ಸಂಪರ್ಕ ಏಕ್ರೀ ನೀಡುತ್ತಿಲ್ಲ ಎಂದು ಚೆಸ್ಕಾ ಎಇಇ ಅವರನ್ನು ತರಾಟೆಗೆ ತೆಗೆದುಕೊಂಡರು. ಬೇರೇನೂ ನನಗೆ ಬೇಕಿಲ್ಲ ಇನ್ನೂ ಹದಿನೈದು ದಿನಗಳ ಒಳಗಾಗಿ ಎಲ್ಲ ಕುಡಿಯುವ ನೀರಿನ ಘಟಕಗಳಿಗೂ ಸಂಪರ್ಕ ಕಲ್ಪಿಸ ಬೇಕು ಎಂದರು.
ಈ ವೇಳೆ ಮಾತನಾಡಿದ ಚೆಸ್ಕಾಂ ಎಇಇ ಹರೀಶ್, ಸರ್ಕಾರದಿಂದ ನಮಗೆ ಹಣ ಬಿಡುಗಡೆಯಾಗಿಲ್ಲ. ಆ ಕಾರಣದಿಂದ ಸಂಪರ್ಕ ವಿಳಂಬವಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಿ ಸಂಪರ್ಕ ಕಲ್ಪಿಸಲಾಗುವುದು ಎಂದರು.ಅಧಿಕಾರಿಗೆ ತಾಕೀತು: ಬೆಟ್ಟದ ಬೈರವೇಶ್ವರದೇವಸ್ಥಾನ ಸಮೀಪ ಸುಮಾರು ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ವೀಕ್ಷಣಾ ಗೋಪುರ ಕಾಮಗಾರಿ ಶೇ. ೬೦ ರಷ್ಟು ಮುಕ್ತಾಯಗೊಂಡಿದೆ. ಈಗ ಅರಣ್ಯ ಇಲಾಖೆ ಅಧಿಕಾರಿಗಳ ಕಾಮಗಾರಿ ಸ್ಥಗಿತಗೊಳಿಸಿದ್ದಾರೆಂದು ಗ್ರಾಮೀಣ ರಸ್ತೆ ಅಭಿವೃದ್ಧಿ ಇಲಾಖೆ ಎಇಇ ನವ್ಯಶ್ರೀ ಶಾಸಕರಲ್ಲಿ ದೂರು ನೀಡಿದರು. ಇದಕ್ಕೆ ಕೆಂಡಾಮಂಡಲರಾದ ಶಾಸಕ ಏಕ್ರೀ ಕೆಲಸ ನಿಲ್ಲಿಸಿದ್ದೀರ. ಹಾಗಾದರೆ ಈ ಜಾಗ ನಿಮ್ಮದು ಎನ್ನಲು ನಿಮಗೆಲ್ಲಿದೆ ದಾಖಲೆ ತನ್ನಿ ಎಂದು ಸಕಲೇಶಪುರ ವಲಯ ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರದ ಒಂದು ಯೋಜನೆ ಜಾರಿಯಾಗುವ ಮುನ್ನ ಸ್ಥಳದ ಸಂಪೂರ್ಣ ವಿವರ ಜಿಲ್ಲಾಧಿಕಾರಿಗಳಿಗೆ ಸಲ್ಲಿಕೆಯಾಗಿರುತ್ತದೆ. ಮತ್ತೆ ಏಕ್ರೀ ಜಾಗದ ವಿವಾದ ಮಾಡುತ್ತೀರ. ಕಾಮಗಾರಿ ಸ್ಥಳಕ್ಕೆ ನಾನು ಬರುತ್ತೇನೆ ಕೆಲಸ ಆರಂಭಿಸಿ ಎಂದು ಕೆಆರ್‌ಡಿಎಲ್ ಅಧಿಕಾರಿಗೆ ತಾಕೀತು ಮಾಡಿದರು. ತಾಲೂಕಿನ ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ಲಂಚದ ಹಾವಳಿ ಹೆಚ್ಚಿದೆ. ಭಾಗ್ಯಲಕ್ಷ್ಮಿಬಾಂಡ್ ಮೆಚೂರಿಟಿ ಹಣ ನೀಡಲು ಬೇಡಿಕೆ ಇಡುತ್ತಿದ್ದಾರೆಂಬ ದೂರನ್ನು ಸಾರ್ವಜನಿಕರು ನೀಡಿದ್ದಾರೆ. ಅಂಗನವಾಡಿಗಳ ನಿರ್ವಹಣೆ ಸಹ ಸರಿ ಇಲ್ಲ ಎಂಬ ಆರೋಪವಿದೆ. ಕೆಲವು ಅಂಗನವಾಡಿಗಳಲ್ಲಿ ಮಕ್ಕಳ ಬರದಿದ್ದರೂ ಸಂಬಳ ಮಾತ್ರ ಪಡೆಯಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಎಲ್ಲ ತಪ್ಪುಗಳನ್ನು ಸರಿಪಡಿಸಿಕೊಳ್ಳದಿದ್ದರೆ ಕ್ರಮ ಅನಿವಾರ್ಯವಾಗಲಿದೆ ಎಂದು ಇಲಾಖೆ ಅಧಿಕಾರಿ ಉಮಾ ಅವರಿಗೆ ಸೂಚನೆ ನೀಡಿದರು. ಸಭೆಯಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಉದಯ, ತಹಸೀಲ್ದಾರ್ ಮೇಘನಾ, ಇಒ ಗಂಗಾಧರ್, ನಾಮನಿರ್ದೇಶಿತ ಸದಸ್ಯರಾದ ಕೊಮಾರಯ್ಯ, ಪ್ರೇಮಕುಮಾರ್, ರವಿಕುಮಾರ್ ಉಪಸ್ಥಿತರಿದ್ದರು.