ಕನ್ನಡಪ್ರಭ ವಾರ್ತೆ ಬೆಳಗಾವಿ
ತಾಯಿ ಋಣ ಜನ್ಮಭೂಮಿಯ ಋಣ ತೀರಿಸಲು ಸಾಧ್ಯವಿಲ್ಲ ಎಂದು ಹಿರಿಯ ಸಾಹಿತಿ ಆಶಾ ಕಡಪಟ್ಟಿ ಹೇಳಿದರು.ನಗರದ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲೆ ಲೇಖಕಿಯರ ಸಂಘದ ಉದ್ಘಾಟನೆ ಮತ್ತು ಅಧಿಕಾರ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಲೇಖಕಿಯರ ಸಂಘದ ಬೆಳ್ಳಿ ಹಬ್ಬದ ಹೊಸ್ತಿಲಲ್ಲಿ ಎಲ್ಲ ಸಾಹಿತ್ಯಿಕ ಮನಸುಗಳಿಗೆ ಬರಹ ನಿರಂತರವಾಗಿರಲಿ, ಪ್ರತಿಯೊಬ್ಬರಲ್ಲಿಯೂ ಒಂದೊಂದು ಪ್ರತಿಭೆ ಇರುತ್ತದೆ. ಅಂತಹ ಪ್ರತಿಭೆಯನ್ನು ಪೋಷಿಸಿ ನೀರೆರೆದು ಬೆಳೆಸುವ ಸಾಹಿತ್ಯ ಮನಸುಗಳು ಬೇಕು ಎಂದರು.ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಸುಮಾ ಕಿತ್ತೂರ ಮಾತನಾಡಿ, ಅನುಭವ ಮಂಟಪದ ಅನುಭಾವದೊಂದಿಗೆ ಸಾಹಿತ್ಯ ಪ್ರಸ್ತುತ ಪಡಿಸಿದರೇ ಮಾತ್ರ ಬೆಳೆಯುತ್ತದೆ. ನಮ್ಮವರನ್ನು ನಾವು ಪರಿಚಯಿಸಿಕೊಳ್ಳಬೇಕು. ಸಮಗ್ರ ಸಾಹಿತ್ಯದ, ಮಹಾಕಾವ್ಯದ ಮಾತುಗಳು ವಿದ್ವತ್ಪೂರ್ಣ ಮಾತುಗಳಾಗಿದ್ದವು. ಸಾಹಿತ್ಯ ಲೋಕದಲ್ಲಿ ಮಹಿಳೆಯರು ಲೇಖಕಿಯರು ಬೆಳಕಿಗೆ ಬರಬೇಕೆಂಬುವುದೇ ನನ್ನ ಆಶೆ ಎಂದರು.ಹಿರಿಯ ಸಾಹಿತಿ ನೀಲಗಂಗಾ ಚರಂತಿಮಠ ಮಾತನಾಡಿ, ಎಲ್ಲ ಸಾಹಿತ್ಯಕ ಸಾಂಸ್ಕೃತಿಕ ರಾಯಭಾರಿಗಳು ನಮ್ಮ ಬೆಳಗಾವಿ ಲೇಖಕಿಯರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸಂಘದ ಉಪಾಧ್ಯಕ್ಷೆ ವಾಸಂತಿ ಮೇಳೆದ ಪ್ರಾಸ್ತಾವಿಕ ಮಾತನಾಡಿ, ಸಾಹಿತ್ಯ ಲೋಕದ ಅದ್ಭುತ ಅನುಭವ ಈ ಲೇಖಕಿಯರ ಸಂಘದ ಕಾರ್ಯಕ್ರಮ ಇಂದು ಈ ಸಂಘ ಬೆಳ್ಳಿ ಹಬ್ಬದ ಹೊಸ್ತಿಲಲ್ಲಿ ನಿಂತಿರುವುದು ಅಭಿಮಾನದ ಸಂಗತಿ ಎಂದರು.ಹಿರಿಯ ಸಾಹಿತಿ ಸುನಂದಾ ಎಮ್ಮಿ, ಪ್ರಾಚಾರ್ಯೆ ಡಾ.ನಿರ್ಮಲಾ ಬಟ್ಟಲ ಮಾತನಾಡಿದರು.ಈ ಸಂದರ್ಭದಲ್ಲಿ ಜ್ಯೋತಿ ಬಾದಾಮಿ, ವಿದ್ಯಾ ಹುಂಡೇಕರ , ಇಂದಿರಾ ಮೋಟೆಬೆನ್ನೂರ, ಸರ್ವಮಂಗಳಾ, ಸುನಂದಾ ಮುಳೆ ಶೈಲಜಾ ಭಿಂಗೆ, ಸುನಂದಾ ಹಾಲಭಾವಿ, ದಾನಮ್ಮ ಅಂಗಡಿ, ಹುಲಗಬಾಳಿ, ಪ್ರಭಾ ಪಾಟೀಲ, ಸುಮಾ ಹೀರೆಮಠ, ಹೇಮಾ ಸೊನೊಳ್ಳಿ, ಲಲಿತಾ ಕ್ಯಾಸನ್ನವರ, ಜಯಶೀಲ ಬ್ಯಾಕೋಡ ಮೊದಲಾದವರು ಉಪಸ್ಥಿತರಿದ್ದರು. ಆಶಾ ಯಮಕನಮರಡಿ ನಿರೂಪಿಸಿದರು. ಅನ್ನಪೂರ್ಣ ಹೀರೆಮಠ ವಂದಿಸಿದರು.