ಕನ್ನಡ ಕ್ರಿಯಾ ವೇದಿಕೆ ವಿದ್ಯಾರ್ಥಿ ಘಟಕ ಉದ್ಘಾಟನೆ, ರಾಜ್ಯೋತ್ಸವ ಸಮಾರಂಭ
ಆಯಾ ರಾಜ್ಯದ ಮಾತೃ ಭಾಷೆಯಲ್ಲಿಯೇ ಒಂದರಿಂದ ಹತ್ತನೆಯ ತರಗತಿಯವರಿಗೆ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಅಗತ್ಯವಿದ್ದು, ಈ ದಿಸೆಯಲ್ಲಿ ಸಂವಿಧಾನದಲ್ಲಿ ತಿದ್ದುಪಡಿ ಮಾಡಬೇಕಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದ್ದಾರೆ.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಪದವಿ ಕಾಲೇಜಿನಲ್ಲಿ ಗುರುವಾರ ಕಾಲೇಜಿನ ಕನ್ನಡ ವಿಭಾಗ ಆಯೋಜನೆ ಮಾಡಿದ್ದ ಕನ್ನಡ ಕ್ರಿಯಾ ವೇದಿಕೆ ವಿದ್ಯಾರ್ಥಿ ಘಟಕ ಉದ್ಘಾಟನೆ ಮತ್ತು ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಮಾತೃಭಾಷೆ ಶಿಕ್ಷಣ ಬಲಶಾಲಿಯಾದದ್ದು, ಅದರಲ್ಲೇ ಮಕ್ಕಳು ಕಲಿತರೆ ವಿಷಯ ಚೆನ್ನಾಗಿ ಅರ್ಥವಾಗುತ್ತದೆ. ಹಾಗಾಗಿ ಎಲ್ಲ ರಾಜ್ಯಗಳು ಈ ದಿಶೆಯಲ್ಲಿ ಆಲೋಚಿಸುವ ಅಗತ್ಯವಿದೆ. ವಿದ್ಯಾರ್ಥಿಗಳು ಕನ್ನಡ ಸಾಹಿತ್ಯವನ್ನು ಮನಸ್ಸು ಕೊಟ್ಟು ಓದಬೇಕು. ಓದಿದ್ದು ಮನನವಾದರೆ ಅವರ ಭವಿಷ್ಯ ಚೆನ್ನಾಗಿ ಇರಬಲ್ಲದು.
ಶಿಕ್ಷಣ ಪ್ರೇಮಿ ಬಿ.ಜಿ. ಕರಿಗಾರ ಮಾತನಾಡಿ, ವಿದ್ಯಾರ್ಥಿಗಳು ಕುವೆಂಪು, ಬೇಂದ್ರೆ ಇತರ ಸಾಹಿತಿಗಳ ಪುಸ್ತಕಗಳನ್ನು ಓದಬೇಕು. ಕನ್ನಡ ಮಾಧ್ಯಮದಲ್ಲಿ ಓದಿದವರು ಉನ್ನತ ಹುದ್ದೆ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಹುಲಿಗೆಮ್ಮ ಮಾತನಾಡಿದರು.ವೇದಿಕೆಯಲ್ಲಿ ಕಾಲೇಜಿನ ಉಪನ್ಯಾಸಕರಾದ ಡಾ. ಗವಿಸಿದ್ದಪ್ಪ ಮುತ್ತಾಳ, ಡಾ. ಪ್ರದೀಪ್ ಕುಮಾರ್, ಡಾ. ನರಸಿಂಹ, ಡಾ. ಅಶೋಕ ಕುಮಾರ್, ಸುಮಿತ್ರ, ಶುಭ, ಶಿವಪ್ರಸಾದ್ ಹಾದಿಮನಿ, ಡಾ. ಮಂಜಪ್ಪ, ಡಾ. ಸೂರಪ್ಪ, ವಿರೂಪಾಕ್ಷಪ್ಪ, ಮುತ್ತಾಳ ಹಾಗೂ ಕಾಲೇಜಿನ ಎಲ್ಲ ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.
ಕಾವೇರಿ, ನೇತ್ರಾ ಮತ್ತು ಸಬಿಹಾ ಪ್ರಾರ್ಥಿಸಿದರು. ಗೀತಾ ಭಜಂತ್ರಿ ಸ್ವಾಗತಿಸಿದರು. ಗಂಗಮ್ಮ ವಂದಿಸಿ, ಭೂಮಿಕಾ ಹೂಗಾರ ನಿರೂಪಿಸಿದರು.