ಅಪಾಯದಲ್ಲಿದ್ದ ತಾಯಿ, ಮಗುವಿನ ಪ್ರಾಣ ರಕ್ಷಿಸಿದ ವೈದ್ಯರು

KannadaprabhaNewsNetwork | Published : Aug 29, 2024 12:47 AM

ಸಾರಾಂಶ

ಸರ್ಕಾರಿ ಆಸ್ಪತ್ರೆಯಲ್ಲೇ ಪ್ರಸೂತಿ ತಜ್ಞರಾದ ಡಾ. ಶಮ್ಸನೂರ್ ಅವರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಮಹಿಳೆಯ ಗರ್ಭಕೋಶವನ್ನು ಸಂಪೂರ್ಣ ಹೊರತೆಗೆದು ತಾಯಿ, ಮಗು ಇಬ್ಬರನ್ನೂ ರಕ್ಷಿಸಿದ್ದಾರೆ.

ಭಟ್ಕಳ: ಗರ್ಭಕೋಶದಲ್ಲಿ ಹೊಕ್ಕುಳ ಬಳ್ಳಿ ಸುತ್ತಿಕೊಂಡು ಅಪಾಯಕಾರಿ ಸ್ಥಿತಿಯಲ್ಲಿದ್ದ ಮಹಿಳೆಗೆ ಬುಧವಾರ ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ತಾಯಿ ಹಾಗೂ ಮಗುವಿನ ಪ್ರಾಣ ಕಾಪಾಡಿದ್ದಾರೆ.ತಾಲೂಕಿನ ಶಿರಾಲಿ ನಿವಾಸಿ 34 ವರ್ಷದ ಮಹಿಳೆ ಎರಡನೇ ಹೆರಿಗೆಗೆ ಮುಂಚೆ ಬೇರೆ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿದಾಗ ವೈದ್ಯರು ಮಣಿಪಾಲ ಇಲ್ಲವೇ ಮಂಗಳೂರಿಗೆ ತೆರಳುವಂತೆ ಸೂಚಿಸಿದ್ದರು. ಆದರೆ ಆಕೆಯ ಕುಟುಂಬದವರು ಅವರನ್ನು ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು.

ಸರ್ಕಾರಿ ಆಸ್ಪತ್ರೆಯ ಆಡಳಿತ ವೈದಾಧಿಕಾರಿ ಡಾ. ಸವಿತಾ ಕಾಮತ್ ಅವರು ಎಂಆರ್‌ಐ ಸ್ಕ್ಯಾನಿಂಗ್ ತಪಾಸಣೆ ಮಾಡಿಸಿ ಮಹಿಳೆಗೆ ಶಸ್ತ್ರಚಿಕಿತ್ಸೆ ಅಗತ್ಯ ಇರುವ ಗಂಭೀರತೆ ಅರಿತು ಸರ್ಕಾರಿ ಆಸ್ಪತ್ರೆಯಲ್ಲೇ ಪ್ರಸೂತಿ ತಜ್ಞರಾದ ಡಾ. ಶಮ್ಸನೂರ್ ಅವರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಮಹಿಳೆಯ ಗರ್ಭಕೋಶವನ್ನು ಸಂಪೂರ್ಣ ಹೊರತೆಗೆದು ತಾಯಿ, ಮಗು ಇಬ್ಬರನ್ನೂ ರಕ್ಷಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಡಾ. ಸವಿತಾ ಕಾಮತ್, ಅಪರೂಪದ ಪ್ರಕರಣ ಇದಾಗಿದೆ. ಇಂತಹ ಸನ್ನಿವೇಶದಲ್ಲಿ ಮಹಿಳೆಯರು ತೀವ್ರ ರಕ್ತಸ್ರಾವವಾಗಿ ಮರಣ ಹೊಂದುತ್ತಾರೆ. ಸರ್ಕಾರಿ ಆಸ್ಪತ್ರೆಯಲ್ಲಿ 25 ವರ್ಷಗಳ ನಂತರ ಇಂತಹ ಪ್ರಕರಣವನ್ನು ನಮ್ಮ ವೈದ್ಯರ ತಂಡ ಒಂದು ಗಂಟೆಯ ವರೆಗೆ ಶಸ್ತ್ರಚಿಕಿತ್ಸೆ ನಡೆಸಿ, ಯಶಸ್ವಿಯಾಗಿದ್ದಾರೆ ಎಂದರು.

ಕ್ಲಿಷ್ಟಕರ ಸನ್ನಿವೇಶದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ಕಾರ್ಯವನ್ನು ಅವರು ಶ್ಲಾಘಿಸಿದರು.

ಜನಿಸಿದ ಮಗು 1. 4 ಕೆಜಿ ತೂಕ ಹೊಂದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಎನ್‌ಐಸಿಯು ನಿಗಾದಲ್ಲಿ ಇರಿಸಲಾಗಿದೆ ಎಂದು ಮಕ್ಕಳ ತಜ್ಞ ಡಾ. ಸುರಕ್ಞಿತ ಶೆಟ್ಟಿ ಮಾಹಿತಿ ನೀಡಿದರು. ಶಸ್ತ್ರಚಿಕಿತ್ಸೆಗೆ ಪ್ರಸೂತಿ ತಜ್ಞೆ ಡಾ. ಶಮ್ಸನೂರು ಜತೆಗೆ ಡಾ. ಅರುಣಕುಮಾರ, ಪವನ, ಮಹಾಂತೇಶ ಸಹಕರಿಸಿದ್ದಾರೆ ಎಂದರು.

Share this article