ಹಾನಗಲ್ಲ: ಅಂತಃಕರಣ ತುಂಬಿದ ನಡೆ, ನುಡಿಯೊಂದಿಗೆ ಸಂಭ್ರಮದ ಮನಸ್ಸಿನಿಂದ ನಮ್ಮ ಮನೆಗಳು ಮಹಾಮನೆಯಾದರೆ ಸುಖ, ಸಮೃದ್ಧಿಯ ನೆಲೆಯಾಗಲು ಸಾಧ್ಯವಿದೆ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳು ತಿಳಿಸಿದರು.ತಾಲೂಕಿನ ದೇವರ ಹೊಸಪೇಟೆ ಗ್ರಾಮದಲ್ಲಿ ಏಳುಮಕ್ಕಳ ತಾಯಿ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿ, ಶರಣರ ಬದುಕು, ಬರಹ ಒಂದೇ ಆಗಿತ್ತು. ಮನೆಗಳು ಸಾಮರಸ್ಯದ ಮೂಲಕ ಸಂತಸದಿಂದಿರಬೇಕಾಗಿದೆ. ಮಕ್ಕಳಿಗೆ ವಚನಗಳ ಸಾರದ ಅರಿವು ಮಾಡಿಕೊಡಲು ಎಲ್ಲರೂ ಮುಂದಾಗಬೇಕಿದೆ ಎಂದರು.ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ನಾವೀಗ ಬದಲಾವಣೆಯ ಕಾಲದಲ್ಲಿದ್ದೇವೆ. ಇದುವರೆಗೆ ಕುಟುಂಬದ ಜವಾಬ್ದಾರಿ ಹೊರುತ್ತಿದ್ದ ಮಹಿಳೆಯರು ಆರ್ಥಿಕವಾಗಿಯೂ ಕುಟುಂಬವನ್ನು ನಿಭಾಯಿಸುವಷ್ಟು ಸಬಲರಾಗಿದ್ದಾರೆ. ಆರ್ಥಿಕವಾಗಿ ಶಕ್ತಿಯುತರಾಗಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ಸಹ ಪುರುಷರಿಗೆ ಸರಿಸಮನಾಗಿ ಮಹಿಳೆಯರೂ ದಿಟ್ಟ ಹೆಜ್ಜೆ ಹಾಕುತ್ತಿದ್ದಾರೆ. ಎಲ್ಲಿಯೂ ಹಿಂದೆ ಬೀಳದೇ ಸಾಧನೆಯ ಹಾದಿಯಲ್ಲಿ ಮುಂದೆ ಸಾಗುತ್ತಿದ್ದಾರೆ ಎಂದರು.ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ, ಕೂಡಲದ ಗುರುನಂಜೇಶ್ವರ ಮಠದ ಗುರುಮಹೇಶ್ವರ ಸ್ವಾಮೀಜಿ, ಹೋತನಹಳ್ಳಿಯ ಸಿಂದಗಿ ಮಠದ ಶಂಭುಲಿಂಗ ಸ್ವಾಮೀಜಿ, ಹೇರೂರಿನ ಗುಬ್ಬಿ ನಂಜುಂಡೇಶ್ವರ ಮಠದ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ರಟ್ಟೀಹಳ್ಳಿ: ಮಹಾ ಶಿವರಾತ್ರಿ ಅಂಗವಾಗಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕಾರ್ಯಕರ್ತರಿಂದ ಈಶ್ವರನ ಮೂರ್ತಿ ಪ್ರತಿಷ್ಠಾಪಿಸಿ ಪಟ್ಟಣ ಪ್ರಮುಖ ಬೀದಿಗಳಲ್ಲಿ ಬುಧವಾರ ಮೆರವಣಿಗೆ ಮಾಡಲಾಯಿತು.
ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಹಳೇ ಬಸ್ ಸ್ಟ್ಯಾಂಡ್ ಸರ್ಕಲ್, ಕೋಟಿ ಓಣಿ, ಹಳೇ ಪೇಟೆ, ಕುಮಾರೇಶ್ವರ ಹೈಸ್ಕೂಲ್ ರೋಡ್, ಕುರುಬರ ಓಣಿ, ಸಂಗೊಳ್ಳಿ ರಾಯಣ್ಣ ವೃತ್ತ, ಮುಖಾಂತರ ಒಕ್ಕಲಗೇರಿ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.ಕದಂಬೇಶ್ವರ ದೇಗುಲ: ಮಹಾ ಶಿವರಾತ್ರಿ ಅಂಗವಾಗಿ ಐತಿಹಾಸಿಕ ಕದಂಬೇಶ್ವರ ದೇಗುಲಕ್ಕೆ ಸಾವಿರಾರು ಭಕ್ತರು ಶಿವನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ದೇವರ ದರ್ಶನ ಪಡೆದು ಪುನೀತರಾದರು.ಅರ್ಚಕ ಗಿರೀಶ ಭಟ್ ನಾಡಗೇರ ನೇತೃತ್ವದಲ್ಲಿ ಶಿವನ ಮೂರ್ತಿಗೆ ಮುಂಜಾನೆ ರುದ್ರಾಭಿಷೇಕ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸಂಜೆ ಪ್ರಸಾದ ವಿತರಣೆ ಕಾರ್ಯಕ್ರಮ ಜರುಗಿತು.ಈಶ್ವರ ದೇವಸ್ಥಾನ: ಪಟ್ಟಣದ ಹಳೇ ಪೇಟೆಯಲ್ಲಿರುವ ಈಶ್ವರ ದೇವಸ್ಥಾನದಲ್ಲಿ ಈಶ್ವರನಿಗೆ ಬೆಳಗ್ಗೆ ರುದ್ರಾಭಿಷೇಕ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸಂಜೆ ಪ್ರಸಾದ ವಿತರಣೆ ಕಾರ್ಯಕ್ರಮ ಜರುಗಿತು.