ಬೆಂಗಳೂರು : ಸಿಲಿಕಾನ್ ಸಿಟಿಯ ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಆರ್.ವಿ. ರಸ್ತೆ-ಬೊಮ್ಮಸಂದ್ರ ನಡುವಿನ (19.15 ಕಿ.ಮೀ) ನಮ್ಮ ಮೆಟ್ರೋ ಹಳದಿ ಮಾರ್ಗ ಭಾನುವಾರ ಉದ್ಘಾಟನೆ ಆಗುತ್ತಿದೆ. ಮೂರು ರೈಲುಗಳ ಮೂಲಕ ಈ ಮಾರ್ಗದಲ್ಲಿ ಮೆಟ್ರೋ ರೈಲು ಸೋಮವಾರದಿಂದ ವಾಣಿಜ್ಯ ಸಂಚಾರ ಆರಂಭಿಸಲಿದೆ.
ಮೂರು ವರ್ಷದ ವಿಳಂಬದ ಬಳಿಕ ಹಳದಿ ಮಾರ್ಗ ಆರಂಭ ಆಗುತ್ತಿದೆ. ಸದ್ಯ ರೈಲುಗಳ ಕೊರತೆ ಇರುವುದರಿಂದ ಆರಂಭದ ಕೆಲ ತಿಂಗಳು 20-25 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸುವ ಸಾಧ್ಯತೆಯಿದೆ. ನಿತ್ಯ ಸುಮಾರು 25 ರಿಂದ 30 ಸಾವಿರ ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸುವ ನಿರೀಕ್ಷೆಯಿದೆ. 2026ರ ಮಾರ್ಚ್ ವೇಳೆಗೆ 12 ರೈಲು ಸೇರ್ಪಡೆ ಆಗಲಿದ್ದು, ಒಟ್ಟು 15 ರೈಲುಗಳು ಈ ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಿವೆ. ಮುಂದಿನ ದಿಗಳಲ್ಲಿ ಟ್ರಿಪ್‌ಗಳ ಸಂಖ್ಯೆ ಕೂಡ ಹೆಚ್ಚಾಗಲಿದ್ದು, ನಿತ್ಯ 3.5 ಲಕ್ಷ ಮಂದಿ ಪ್ರಯಾಣಿಸಬಹುದು ಎಂದು ಬಿಎಂಆರ್‌ಸಿಎಲ್ ಅಂದಾಜಿಸಿದೆ.
ಸದ್ಯಕ್ಕೆ ಹೊಸ ಹಳದಿ ಮಾರ್ಗದ ಟಿಕೆಟ್ ದರ, ರೈಲುಗಳ ಸಂಚಾರದ ಅವಧಿಯನ್ನು ಬೆಂಗಳೂರು ಮೆಟ್ರೋ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಅಧಿಕೃತವಾಗಿ ಒದಗಿಸಿಲ್ಲ.
ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ (ಸಿಎಸ್‌ಬಿ) ಡಬ್ಬಲ್ ಡೆಕ್ಕರ್ (3.3 ಕಿ.ಮೀ.) ನಿರ್ಮಿಸಲಾಗಿದೆ. ಡಬ್ಬಲ್ ಡೆಕ್ಕರ್ ಫ್ಲೈಓವರ್‌ನ ಮೇಲ್ಭಾಗದಲ್ಲಿ ನಮ್ಮ ಮೆಟ್ರೋ ರೈಲು ಓಡಾಡಲಿದೆ. ಕೆಳಭಾಗ ವಾಹನಗಳ ಓಡಾಟಕ್ಕೆ ಮೀಸಲಾಗಿದೆ. ಜತೆಗೆ ಈ ಮಾರ್ಗದ ಜಯದೇವ ಇಂಟರ್ ಚೇಂಜ್ ಮೆಟ್ರೋ ನಿಲ್ದಾಣ ಅತೀ ಎತ್ತರದ ಮೆಟ್ರೋ ನಿಲ್ದಾಣ ಎನ್ನಿಸಿದ್ದು ಐದು ಹಂತದ ಸಾರಿಗೆ ವ್ಯವಸ್ಥೆ ನಿರ್ಮಾಣವಾಗಿದೆ. 2026ರ ಡಿಸೆಂಬರ್‌ಗೆ ಈ ಮಾರ್ಗ ಉದ್ಘಾಟನೆ ಆಗಲಿದ್ದು, ಬಳಿಕವಷ್ಟೆ ಇದರ ಪೂರ್ಣ ಬಳಕೆ ಆಗಲಿದೆ.
ರೈಲುಗಳ ಸೇರ್ಪಡೆ:
ಹಳದಿ ಮಾರ್ಗ ಸದ್ಯ ಕೇವಲ ಮೂರು ರೈಲುಗಳಿಂದ ಕಾರ್ಯಾಚರಣೆ ಆಗಲಿದೆ. ಚಾಲಕ ರಹಿತ ರೈಲಿಗಾಗಿ ಸಿಬಿಟಿಸಿ (ಕಮ್ಯುನಿಕೇಶನ್ ಬೇಸ್ಡ್ ಟ್ರೈನ್ ಕಂಟ್ರೋಲ್) ತಂತ್ರಜ್ಞಾನ ಬಳಸಲಾಗಿದೆ. 2026ರ ವೇಳೆಗೆ ಈ ಮಾರ್ಗಕ್ಕೆ 14 ರೈಲು ಸೇರ್ಪಡೆ ಆಗಲಿದ್ದು, ಆಗ 90 ಸೆಕೆಂಡ್‌ಗೆ ಒಮ್ಮೆ ರೈಲುಗಳು ಸಂಚರಿಸಲಿವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಅರಂಭದಲ್ಲಿ ಚಾಲಕ ಸಹಿತವಾಗಿ ಸಂಚರಿಸಿ ಬಳಿಕ ಚಾಲಕರಹಿತವಾಗಿ ರೈಲನ್ನು ಓಡಿಸಲಾಗುವುದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಹಳದಿ ಮಾರ್ಗದಲ್ಲಿ ಮೂರು ಇಂಟರ್‌ಚೇಂಜ್
ನಿಲ್ದಾಣ ಮಾರ್ಗ ಎಲ್ಲಿಂದ - ಎಲ್ಲಿಗೆ
ಆರ್.ವಿ. ರೋಡ್ ಹಸಿರು ಮಾರ್ ರೇಷ್ಮೆ ಸಂಸ್ಥೆ - ಮಾದಾವರ
ಜಯದೇವ ಆಸ್ಪತ್ರೆ ಗುಲಾಬಿ ಮಾರ್ಗ ನಾಗಾವರ - ಕಾಳೇನ ಅಗ್ರಹಾರ
ಸಿಲ್ಕ್ ಬೋರ್ಡ್ ನೀಲಿ ಮಾರ್ಗ (2ಎ) ಸಿಲ್ಕ್‌ಬೋರ್ಡ್ - ಕೆಆರ್ ಪುರಂ
ಹಳದಿ ಮಾರ್ಗದ ನಿಲ್ದಾಣಗಳು ಯಾವುವು?
ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರು ರಸ್ತೆ, ಇನ್ಫೋಸಿಸ್ ಫೌಂಡೇಶನ್ (ಕೋನಪ್ಪನ ಅಗ್ರಹಾರ), ಎಲೆಕ್ಟ್ರಾನಿಕ್ ಸಿಟಿ, ಬೆರಟೇನ ಅಗ್ರಹಾರ, ಹೊಸ ರಸ್ತೆ, ಸಿಂಗಸಂದ್ರ, ಕೂಡ್ಲುಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ, ರಾಗಿಗುಡ್ಡ, ಆರ್.ವಿ.ರಸ್ತೆ ನಿಲ್ದಾಣ.
ಹಳದಿ ಮಾರ್ಗದ ವಿವರ
ಮಾರ್ಗ ಹಳದಿ
ಸಂಪರ್ಕ ಆರ್.ವಿ.ರಸ್ತೆ - ಬೊಮ್ಮಸಂದ್ರ
ಉದ್ದ 19.15 ಕಿಮೀ
ನಿಲ್ದಾಣ 16
ಇಂಟರ್‌ಚೇಂಜ್ 3
ಡಬ್ಬಲ್ ಡೆಕ್ಕರ್ ರಾಗಿಗುಡ್ಡ - ಸೆಂಟ್ರಲ್ ಸಿಲ್ಕ್ ಬೋರ್ಡ್ (3.3ಕಿಮೀ)
ಒಟ್ಟೂ ವೆಚ್ಚ ₹ 5,056.99 ಕೋಟಿ
ಮೆಟ್ರೋ 3ನೇ ಹಂತದ ಯೋಜನೆ
ಮೆಟ್ರೋ 3ನೇ ಹಂತದ ಯೋಜನೆಗೆ ಇಂದು ಶಂಕು ಸ್ಥಾಪನೆ ಆಗಲಿದೆ. ಜೆ.ಪಿ.ನಗರ 4ನೇಹಂತದಿಂದ ಕೆಂಪಾಪುರ (32.15-ಕಿಮೀ) ಹಾಗೂ ಹೊಸಹಳ್ಳಿ - ಕಡಬಗೆರೆ (12.5-ಕಿಮೀ) ನಡುವಿನ ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೂ ಇಂದು ಶಂಕು ಸ್ಥಾಪನೆ ಆಗಲಿದೆ. ಇದು 15,611 ಕೋಟಿ ಮೊತ್ತದ್ದಾಗಿದ್ದು, ಎರಡು ಕಾರಿಡಾರ್ ಸೇರಿ 44.65 ಕಿ.ಮೀ ಉದ್ದವಿರಲಿದೆ. ಈ ಮಾರ್ಗದ ಕಾಮಗಾರಿ 2028ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 9.12 ಲಕ್ಷ ಪ್ರಯಾಣಿಕರಿಗೆ ನೆರವಾಗಲಿದೆ ಎಂದು ಬಿಎಂಅರ್‌ಸಿಎಲ್ ತಿಳಿಸಿದೆ.
ಮೂರನೇ ಹಂತದ ನಮ್ಮ ಮೆಟ್ರೋ ಒಟ್ಟು 30 ನಿಲ್ದಾಣ ಒಳಗೊಂಡಿದೆ. (ಕಾರಿಡಾರ್ 1 ರಲ್ಲಿ 21 ನಿಲ್ದಾಣಗಳು ಮತ್ತು ಕಾರಿಡಾರ್ 2 ರಲ್ಲಿ 9 ನಿಲ್ದಾಣಗಳು ಇರಲಿವೆ). ಇವುಗಳಲ್ಲಿ ಏಳು ಇಂಟರ್ಚೇಂಜ್ ನಿಲ್ದಾಣಗಳಾಗಿವೆ. ಜೆಪಿ ನಗರ 4 ನೇ ಹಂತ, ಜೆಪಿ ನಗರ, ಮೈಸೂರು ರಸ್ತೆ, ಸುಮನಹಳ್ಳಿ ಕ್ರಾಸ್, ಗೋರಗುಂಟೆಪಾಳ್ಯ, ಹೆಬ್ಬಾಳ ಮತ್ತು ಕೆಂಪಾಪುರ ಸೇರಿವೆ.