ಮುಖ್ಯಾಧಿಕಾರಿಯಿಲ್ಲದೆ ಅನಾಥವಾದ ಪುರಸಭೆ ಆಡಳಿತ!

KannadaprabhaNewsNetwork |  
Published : Jun 08, 2025, 11:47 PM ISTUpdated : Jun 08, 2025, 11:48 PM IST
ಕಂಪ್ಲಿ ಪುರಸಭೆ ಕಚೇರಿ  | Kannada Prabha

ಸಾರಾಂಶ

ಮುಖ್ಯಾಧಿಕಾರಿಗಳಿಲ್ಲದೇ ಸ್ಥಳೀಯ ಪುರಸಭೆ ಕಚೇರಿ ಅನಾಥವಾಗಿದ್ದು, ಸದ್ಯ ನಾವಿಕನಿಲ್ಲದ ದೋಣಿಯಂತೆ ಪುರಸಭೆ ಆಡಳಿತದ ಪರಿಸ್ಥಿತಿಯಾಗಿದೆ. ಅಲ್ಲದೇ ಸಾರ್ವಜನಿಕರ ಅನೇಕ ಕಾರ್ಯಗಳು ನನೆಗುದಿಗೆ ಬಿದ್ದಿವೆ.

ನಾವಿಕನಿಲ್ಲದ ದೋಣಿಯಂತಾಗಿರುವ ಪರಿಸ್ಥಿತಿ । ಅನೇಕ ಕಾರ್ಯಗಳು ನನೆಗುದಿಗೆ । ಸೇವೆ ಪಡೆಯಲು ಸಾರ್ವಜನಿಕರ ಪರದಾಟಬಿ.ಎಚ್.ಎಂ. ಅಮರನಾಥ ಶಾಸ್ತ್ರಿ

ಕನ್ನಡಪ್ರಭ ವಾರ್ತೆ ಕಂಪ್ಲಿ

ಮುಖ್ಯಾಧಿಕಾರಿಗಳಿಲ್ಲದೇ ಸ್ಥಳೀಯ ಪುರಸಭೆ ಕಚೇರಿ ಅನಾಥವಾಗಿದ್ದು, ಸದ್ಯ ನಾವಿಕನಿಲ್ಲದ ದೋಣಿಯಂತೆ ಪುರಸಭೆ ಆಡಳಿತದ ಪರಿಸ್ಥಿತಿಯಾಗಿದೆ. ಅಲ್ಲದೇ ಸಾರ್ವಜನಿಕರ ಅನೇಕ ಕಾರ್ಯಗಳು ನನೆಗುದಿಗೆ ಬಿದ್ದಿವೆ.

ಈ ಮುಂಚೆಯಿದ್ದ ಮುಖ್ಯಾಧಿಕಾರಿ ಕೆ.ದುರುಗಣ್ಣ ಮೇ 31ರಂದು ವಯೋ ನಿವೃತ್ತಿ ಹೊಂದಿ ಇಂದಿಗೆ 8 ದಿನಗಳು ಕಳೆದಿವೆ. ಈ ವರೆಗೂ ಪುರಸಭೆಯ ಆಡಳಿತ ನಡೆಸಲು ಮುಖ್ಯಾಧಿಕಾರಿಗಳು ಅಥವಾ ಪ್ರಭಾರಿಯಾಗಿ ಯಾವುದೇ ಅಧಿಕಾರಿ ಆಗಲಿ ನಿಯೋಜನೆಗೊಳ್ಳದೆ ಇರುವುದರಿಂದ ಸಾರ್ವಜನಿಕರಿಗೆ ತೀರಾ ಸಮಸ್ಯೆಯಾಗಿದೆ.

ಮುಷ್ಕರದ ಬಿಸಿ:

ಕರ್ನಾಟಕ ರಾಜ್ಯ ಪೌರ ನೌಕರರ ಸಂಘದವರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯದಾದ್ಯಂತ ಮೇ 27ಕ್ಕೆ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು. ಈ ಹೋರಾಟದಿಂದ ಹಲವು ದಿನಗಳ ಕಾಲ ಪಟ್ಟಣದಲ್ಲಿ ಯಾವುದೇ ಸ್ವಚ್ಛತೆ ಕಾರ್ಯವಾಗಲಿ, ಪುರಸಭೆ ಕಚೇರಿಯಲ್ಲಿನ ಕೆಲಸಗಳಾಗಲಿ ಜರುಗಿರಲಿಲ್ಲ. ಇದರಿಂದಾಗಿ ಫಾರಂ ನಂ. 3 ಸೇರಿ ಅನೇಕ ಕೆಲಸಗಳಿಗೆ ಜನರು ಪರದಾಡುವ ಪರಿಸ್ಥಿತಿ ಉಂಟಾಗಿತ್ತು. ಬಳಿಕ ಮುಖ್ಯಾಧಿಕಾರಿಗಳ ನಿವೃತ್ತಿ ಸೇರಿ ಈವರೆಗೂ ಎರಡು ವಾರಗಳ ಕಾಲ ಪುರಸಭೆಯಲ್ಲಿ ಎ ಖಾತಾ, ಬಿ ಖಾತಾ ಪಡೆಯಲು, ಫಾರಂ ನಂ.3 ಸೇರಿ ಇತರೆ ಕಾರ್ಯಗಳಿಗೆ ಜನರು ಅಲೆದಾಡುವ ಪರಿಸ್ಥಿತಿ ಇದೆ. ಒಂದೆಡೆ ಪೌರ ನೌಕರರ ಧರಣಿ ಇನ್ನೊಂದೆಡೆ ಮುಖ್ಯಾಧಿಕಾರಿಗಳಿಲ್ಲದಿರುವುದು ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಮುಂಚೆ ಮುಖ್ಯಾಧಿಕಾರಿಯಾಗಿದ್ದ ಕೆ.ದುರುಗಣ್ಣ ನಿವೃತ್ತಿ ಹೊಂದುವ ವಿಚಾರ ಗೊತ್ತಿದ್ದರೂ ಮುಂದಾಲೋಚನೆಯ ಮೂಲಕ ಆಡಳಿತದ ಹಿತದೃಷ್ಟಿಯಿಂದ ಪುರಸಭೆಗೆ ಮುಖ್ಯ ಅಧಿಕಾರಿಯ ನಿಯೋಜನೆ ಅಥವಾ ಕಚೇರಿಯಲ್ಲಿನ ಯಾವುದೇ ಅಧಿಕಾರಿಯನ್ನು ಪ್ರಭಾರಿಯನ್ನಾಗಿ ನಿಯೋಜಿಸಬೇಕಿತ್ತು. ಆದರೆ ಈವರೆಗೂ ಆ ಕಾರ್ಯ ಜರುಗಿಲ್ಲ. ಸಾರ್ವಜನಿಕರ ಗೋಳು ಕೇಳೋರ್‍ಯಾರು ಇಲ್ಲದಂತಾಗಿದೆ. ಕೂಡಲೇ ಸರ್ಕಾರ ಪುರಸಭೆಗೆ ನೂತನ ಮುಖ್ಯಾಧಿಕಾರಿಗಳನ್ನು ನಿಯೋಜನೆ ಮಾಡಬೇಕು. ಇಲ್ಲವೇ ಜಿಲ್ಲಾಧಿಕಾರಿ ಇತ್ತ ಕೊಂಚ ಗಮನ ಹರಿಸಿ ಪಟ್ಟಣದ ಜನತೆಯ ಹಿತ ದೃಷ್ಟಿಯಿಂದಾಗಿ ಸರ್ಕಾರದ ಆದೇಶ ಜಾರಿಗೆಯಾಗುವವರೆಗೂ ಕಚೇರಿಯಲ್ಲಿನ ಯಾವುದಾದರೂ ಹಿರಿಯ ಅಧಿಕಾರಿಯನ್ನು ಪ್ರಭಾರಿಯಾಗಿ ನಿಯೋಜಿಸಿ ಸಾರ್ವಜನಿಕರ ಕೆಲಸಗಳು ಸುಗಮವಾಗಿ ನಡೆಯಲು ಅನುಕೂಲ ಕಲ್ಪಿಸಿಕೊಡಬೇಕು ಎನ್ನುವುದು ಜನತೆಯ ಒತ್ತಾಯವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''