ಕನ್ನಡಪ್ರಭವಾರ್ತೆ ಚನ್ನರಾಯಪಟ್ಟಣ
ನನ್ನ ಸ್ವಂತ ಪಿತ್ರಾರ್ಜಿತ ಮಳಿಗೆ ಖಾತೆ ಬದಲಾವಣೆಗಾಗಿ ಒಂದು ವರ್ಷದಿಂದ ಅಲೆದಾಡಿಸುತ್ತಿರುವ ಪುರಸಭಾ ಮುಖ್ಯಾಧಿಕಾರಿ ಹೇಮಂತ್ ವಿರುದ್ಧ ಉಪವಾಸ ಸತ್ಯಾಗ್ರಹವನ್ನು ನಡೆಸಲಾಗುವುದು ಎಂದು ಪುರಸಭಾ ಮಾಜಿ ಅಧ್ಯಕ್ಷ ಸಿ ಟಿ ಅಶೋಕ್ ಕುಮಾರ್ ತಿಳಿಸಿದರು.ಪಟ್ಟಣದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಶೋಕ್ ಕುಮಾರ್ ನಮ್ಮ ಪಿತ್ರಾಜಿತ ಮಳಿಗೆಯ ಖಾತೆ ಬದಲಾವಣೆಗಾಗಿ ಒಂದು ವರ್ಷದಿಂದ ನಿರಂತರವಾಗಿ ಕಂದಾಯವನ್ನು ಸಂಪೂರ್ಣವಾಗಿ ಪಾವತಿ ಮಾಡಿ ಅರ್ಜಿ ಸಲ್ಲಿಸಿದ್ದರು ಸಹ ಇಲ್ಲಿ ತನಕ ಖಾತೆ ಬದಲಾವಣೆ ಮಾಡಿರುವುದಿಲ್ಲ ಎಂದು ಆರೋಪಿಸಿದರು. ನನ್ನಂತಹ ಜನಪ್ರತಿನಿಧಿಗೆ ಒಂದು ವರ್ಷದಿಂದ ಖಾತೆ ಬದಲಾವಣೆ ಮಾಡಲು ಸತಾಯಿಸುತ್ತಿರುವ ಚನ್ನರಾಯಪಟ್ಟಣ ಪುರಸಭೆ ಮುಖ್ಯ ಅಧಿಕಾರಿ ಹೇಮಂತ ನಡೆ ಸರಿಯಲ್ಲ ಎಂದರು. ಪುರಸಭೆಯ ಮಾಜಿ ಅಧ್ಯಕ್ಷನಾದ ನನ್ನಂತಹ ಜನಪ್ರತಿನಿಧಿಗೆ ಈ ರೀತಿ ವರ್ಷಾನುಗಟ್ಟಲೆ ಸತಾಯಿಸುತ್ತಿರುವ ಮುಖ್ಯ ಅಧಿಕಾರಿ ಹೇಮಂತ್ ಜನ ಸಾಮಾನ್ಯರನ್ನು ಯಾವ ರೀತಿ ಸತಾಯಿಸುತ್ತಾರೆ ಎಂಬುದನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಪುರಸಭಾ ಅಧಿಕಾರಿ ತುಂಬಾ ಭ್ರಷ್ಟಾಚಾರದಲ್ಲಿ ತೊಡಗಿದ್ದು ಹಣ ಕೊಟ್ಟರೆ ಯಾರ ಹೆಸರಿಗೆ ಬೇಕಾದರೂ ಪುರಸಭೆಯ ಜಾಗವನ್ನು ಖಾತೆ ಮಾಡಿ ಕೊಡುತ್ತಾರೆ ಎಂದು ಆರೋಪಿಸಿದರು, ಪುರಸಭಾ ವ್ಯಾಪ್ತಿಯಲ್ಲಿ ಹಲವಾರು ಕಟ್ಟಡಗಳು ನೀತಿ ನಿಯಮಗಳನ್ನು ಮೀರಿ ಕಟ್ಟಡಗಳ ನಿರ್ಮಾಣ ಮಾಡುತ್ತಿದ್ದರೂ ಸಹ ಪುರಸಭಾ ಮುಖ್ಯ ಅಧಿಕಾರಿ ಕೇವಲ ಹಣ ಮಾಡುವ ಉದ್ದೇಶದಿಂದ ಮೌನವಾಗಿದ್ದಾರೆ ಎಂದು ಆರೋಪಿಸಿದರು. ಪುರಸಭಾ ವ್ಯಾಪ್ತಿಯಲ್ಲಿ ಹಲವಾರು ಖಾಸಗಿ ಕಟ್ಟಡಗಳಾದ ಬೆಂಗಳೂರು ಕ್ಲಾಸ್ ಸೆಂಟರ್, ಟಿವಿಎಸ್ ಶೋರೂಮ್ ಎದುರಿನ ಹೊಸ ಬಿಲ್ಡಿಂಗ್, ಮೈಸೂರು ರಸ್ತೆಯ ಬಿಜಿಎಸ್ ರಿಲಿಯನ್ ಸ್ಮಾರ್ಟ್ ಬಜಾರ್, ಬಿಜಿಎಸ್ ಕಟ್ಟಡ, ನಂದಗೋಕುಲ ಹೋಟೆಲ್, ಆರ್.ಸಿ.ಕ್ಲಬ್ ಸೇರಿದಂತೆ ಹಲವಾರು ಕಟ್ಟಡಗಳು ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಪುಟ್ಟಾತ್ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದರು ಸಹ ಇವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಮೌನವಾಗಿರುವುದು, ಪುರಸಭಾ ಮುಖ್ಯ ಅಧಿಕಾರಿಯ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು. ಪುಟ್ಟಾತ್ ರಸ್ತೆಯ ವ್ಯಾಪಾರಿಗಳಿಗೆ ಪ್ರತ್ಯೇಕ ಜಾಗದ ವ್ಯವಸ್ಥೆಯನ್ನು ಮಾಡದೆ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿ ಹಲವಾರು ಅಪಘಾತಗಳು ನಡೆದು ಸಾವುಗಳು ಆಗಿದ್ದರು, ಸಹ ಪುರಸಭೆ ಮುಖ್ಯ ಅಧಿಕಾರಿ ಯಾವುದೇ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಸರಿಯಲ್ಲ, ಕೂಡಲೇ ಜಿಲ್ಲಾಧಿಕಾರಿಗಳು ಪುರಸಭಾ ವ್ಯಾಪ್ತಿಯ ಸಾರ್ವಜನಿಕರ ಕುಂದು ಕೊರತೆಯನ್ನು ಆಲಿಸುವ ಉದ್ದೇಶದಿಂದ ತುರ್ತು ಸಭೆಯನ್ನು ಏರ್ಪಡಿಸಬೇಕೆಂದು ಮನವಿ ಮಾಡಿದರು. ಜಿಲ್ಲಾಧಿಕಾರಿಗಳು ಅತಿ ಶೀಘ್ರದಲ್ಲೇ ಪುರಸಭಾ ವ್ಯಾಪ್ತಿಯಲ್ಲಿ ಸಬೆ ನೆಡೆಸಿದರೆ ಈಗಿನ ಮುಖ್ಯ ಅಧಿಕಾರಿಯ ನಿಜವಾದ ಬಣ್ಣ ಬಯಲಾಗುತ್ತದೆ ಎಂದು ಹೇಳಿದರು. ಇಂತಹ ಭ್ರಷ್ಟ ಪುರಸಭೆ ಮುಖ್ಯ ಅಧಿಕಾರಿಯನ್ನು ನಾನು ಇದುವರೆಗೂ ನೋಡಿಲ್ಲ ಎಂದು ಆರೋಪಿಸಿದರು.