ಧರೆಗುರುಳಿದ ಮರ ತೆರವಿಗೆ ಪಾಲಿಕೆ ಸರ್ಕಸ್‌!

KannadaprabhaNewsNetwork |  
Published : May 20, 2026, 12:45 AM IST
ಹುಬ್ಬಳ್ಳಿ ರವಿನಗರದಲ್ಲಿ ಮಳೆಗೆ ಬಿದ್ದಿರುವ ಮರಗಳನ್ನು ತೆರವುಗೊಳಿಸದಿರುವುದು. | Kannada Prabha

ಸಾರಾಂಶ

ಬಿರುಗಾಳಿ ಮಳೆಗೆ ಹುಬ್ಬಳ್ಳಿ ನಗರದ ಜನತೆ ಅಕ್ಷರಶಃ ನಲುಗಿದ್ದಾರೆ. ಪ್ರತಿ ವಾರ್ಡ್‌ನಲ್ಲೂ ಹತ್ತಾರು ವರ್ಷಗಳ ಕಾಲ ನೆರಳು ನೀಡಿದ್ದ ಬೃಹತ್‌ ಮರಗಳು ರಸ್ತೆ, ಮನೆ, ಅಂಗಡಿ, ಮುಂಗಟ್ಟುಗಳ ಮೇಲೆ ಉರುಳಿವೆ.

ಹುಬ್ಬಳ್ಳಿ:

ಹು-ಧಾ ಮಹಾನಗರದಲ್ಲಿ ಕಳೆದ ಭಾನುವಾರ ಮತ್ತು ಸೋಮವಾರ ಸುರಿದ ಬಿರುಗಾಳಿ ಮಳೆಗೆ 400ಕ್ಕೂ ಅಧಿಕ ಮರಗಳು ಧರೆಗುರುಳಿವೆ. ಆದರೆ, ಈ ವರೆಗೂ ಪಾಲಿಕೆ ತೆರವುಗೊಳಿಸಿರುವುದು ಬರೀ 50 ಮರಗಳನ್ನು ಮಾತ್ರ. ಹೀಗಾಗಿ ಕೆಲವೆಡೆ ಈ ವರೆಗೆ ರಸ್ತೆ ಸಂಚಾರಕ್ಕೆ ತೊಂದರೆಯಾಗಿದ್ದರೆ, ಹಲವು ಬಡಾವಣೆಗಳಲ್ಲಿ ಸೋಮವಾರ ಸಂಜೆಯಿಂದಲೇ ವಿದ್ಯುತ್‌ ಕಡಿತವಾಗಿದೆ.

ಬಿರುಗಾಳಿ ಮಳೆಗೆ ನಗರದ ಜನತೆ ಅಕ್ಷರಶಃ ನಲುಗಿದ್ದಾರೆ. ಪ್ರತಿ ವಾರ್ಡ್‌ನಲ್ಲೂ ಹತ್ತಾರು ವರ್ಷಗಳ ಕಾಲ ನೆರಳು ನೀಡಿದ್ದ ಬೃಹತ್‌ ಮರಗಳು ರಸ್ತೆ, ಮನೆ, ಅಂಗಡಿ, ಮುಂಗಟ್ಟುಗಳ ಮೇಲೆ ಉರುಳಿವೆ. ಮರಗಳು ಉರುಳಿ ಎರಡು ದಿನ ಕಳೆದರೂ ಮಹಾನಗರ ಪಾಲಿಕೆ ಅವುಗಳನ್ನು ತೀವ್ರಗತಿಯಲ್ಲಿ ತೆರವುಗೊಳಿಸುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಬೆರಳೆಣಿಕೆ ಮರಗಳ ತೆರವು:

ಹಳೇಹುಬ್ಬಳ್ಳಿ ಶಿವಪುತ್ರ ನಗರದಲ್ಲಿ ಮೆಹಬೂಬ್‌ ಸುಬಾನಿ ದರ್ಗಾದ ಮೇಲೆ ಬೃಹತ್ ಮರಬಿದ್ದು ತೀವ್ರ ಹಾನಿಯಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಪಾಲಿಕೆ ಅಧಿಕಾರಿಗಳು ಸೋಮವಾರ ಸಂಜೆ ವರೆಗೆ ಕಾರ್ಯಾಚರಣೆ ನಡೆಸಿ ಮರ ತೆರವುಗೊಳಿಸಿದ್ದರು. ಕಾರವಾರ ಮುಖ್ಯ ರಸ್ತೆ, ಬಿವಿಬಿ ಕಾಲೇಜು ಎದುರಿನ ರಂಭಾಪುರಿ ಕಲ್ಯಾಣ ಮಂಟಪ ಬಳಿ, ಐಬಿಎಂಆರ್‌ ಕಾಲೇಜು ಬಳಿ ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದಿದ್ದ ಮರ, ಬೇಸ್‌ ಕಾಲೇಜು ಬಳಿಯೂ ಆಟೋ, ಬೈಕ್‌ಗಳ ಮೇಲೆ ಬಿದ್ದಿದ್ದ ಮರಗಳನ್ನು ಪಾಲಿಕೆ ಸಿಬ್ಬಂದಿ ಮಂಗಳವಾರ ತೆರವುಗೊಳಿಸಿದ್ದಾರೆ. ಇನ್ನುಳಿದ ಕಡೆ ಮುಖ್ಯ ರಸ್ತೆ, ವಾರ್ಡ್‌ಗಳಲ್ಲಿ ಎಲ್ಲೆಂದರಲ್ಲಿ ಮರಗಳು ಬಿದ್ದಿವೆ. ಇಂಥವುಗಳನ್ನು ತಾತ್ಕಾಲಿಕವಾಗಿ ರಸ್ತೆಯ ಪಕ್ಕಕ್ಕೆ ಸರಿಸಿ ಕೈಬಿಡಲಾಗಿದೆ. ಆದಷ್ಟು ಬೇಗ ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸ್ಥಳಿಯರು ಒತ್ತಾಯಿಸಿದ್ದಾರೆ.

5, 7ನೇ ವಲಯದಲ್ಲೇ ಹೆಚ್ಚು ಹಾನಿ

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 12 ವಲಯಗಳಿದ್ದು 5 ಮತ್ತು 7ನೇ ವಲಯದಲ್ಲಿ ಮಳೆಯಿಂದ ಹೆಚ್ಚಿನ ಹಾನಿಯಾಗಿದೆ. 5ನೇ ವಲಯ ವ್ಯಾಪ್ತಿಯ ಅಕ್ಷಯ ಪಾರ್ಕ್, ತೋಳನಕೆರೆ, ಲಿಂಗರಾಜ ನಗರ, ರವಿನಗರ, 7ನೇ ವಲಯ ವ್ಯಾಪ್ತಿಯ ಗೋಕುಲ ರಸ್ತೆ, ಇಂಡಸ್ಟ್ರೀಯಲ್‌ ಲೇಔಟ್‌, ಪ್ರಿಯದರ್ಶಿನಿ ಕಾಲನಿ, ಮಹಾಲಕ್ಷ್ಮೀ ಲೇಔಟ್ ಸೇರಿದಂತೆ ಸುತ್ತಲಿನ ವಾರ್ಡ್‌ಗಳಲ್ಲಿಯೇ ಹೆಚ್ಚು ಮರಗಳು ಧರೆಶಾಹಿಯಾಗಿವೆ.. ಇದರೊಂದಿಗೆ ಕೆಎಂಸಿಆರ್‌ಐನ ಮುಖ್ಯಪ್ರವೇಶ ದ್ವಾರದ ಎದುರು, ಮಂಜುನಾಥ ನಗರ, ಸನ್ಮಾನ ಕಾಲನಿ, ಸುರಭಿ ನಗರ, ನವನಗರ, ಅಧ್ಯಾಪಕ ನಗರ, ಶಿರೂರ್ ಪಾರ್ಕ್‌, ಕಾಳಿದಾಸ ನಗರ, ಭಾಗ್ಯಲಕ್ಷ್ಮೀ ನಗರ, ಬಾಪೂಜಿ ಕಾಲನಿ, ತಿಮ್ಮಸಾಗರ ರಸ್ತೆ, ಡಾಲರ್ಸ್‌ ಕಾಲನಿ, ವಿದ್ಯಾನಗರ, ನವನಗರ, ಜಗದೀಶ ನಗರ, ಮೃತ್ಯುಂಜಯ ನಗರ, ನೃಪತುಂಬ ಬೆಟ್ಟ ಸುತ್ತಮುತ್ತ, ಹಳೇಹುಬ್ಬಳ್ಳಿ, ಉಣಕಲ್ಲ, ಗೋಪನಕೊಪ್ಪ, ಕೇಶ್ವಾಪುರ ಸೇರಿದಂತೆ ಹಲವು ಕಡೆ ಮರಗಳು ನೆಲಕ್ಕುರುಳಿವೆ.

ಕಗ್ಗತ್ತಲಿನಲ್ಲಿ ಅರ್ಧ ಹುಬ್ಬಳ್ಳಿ

ನಗರದಲ್ಲಿ ಎರಡ್ಮೂರು ದಿನದಿಂದ ಸುರಿದ ಮಳೆಗೆ ಬರೋಬ್ಬರಿ 114 ವಿದ್ಯುತ್‌ ಕಂಬ ನೆಲಕ್ಕುರುಳಿವೆ. ಅದರಲ್ಲೂ ಸೋಮವಾರ ಸುರಿದ ಮಳೆಗೆ ಹೆಚ್ಚಿನ ಹಾನಿಯಾಗಿದ್ದು, 24 ಗಂಟೆಗೂ ಹೆಚ್ಚು ಕಾಲ ಅರ್ಧ ಹುಬ್ಬಳ್ಳಿ ಕತ್ತಲಲ್ಲೇ ಇತ್ತು. ಇಲ್ಲಿನ ಗೋಕುಲರೋಡ್‌, ಶಿರೂರು ಪಾರ್ಕ್‌, ರವಿನಗರ, ಬಸವೇಶ್ವರ ನಗರ, ವಿದ್ಯಾನಗರ ಸೇರಿದಂತೆ ವಿವಿಧೆಡೆ ಸೋಮವಾರ ಸಂಜೆ 7ರಿಂದಲೇ ಕೈಕೊಟ್ಟಿರುವ ವಿದ್ಯುತ್‌ ಮಂಗಳವಾರ ರಾತ್ರಿವರೆಗೂ ಬದಿರಲಿಲ್ಲ. ಬುಧವಾರ ಬೆಳಗ್ಗೆ ಬರುವ ಸಾಧ್ಯತೆ ಇದೆ. ಸೋಮವಾರವೇ 90ಕ್ಕೂ ಹೆಚ್ಚು ವಿದ್ಯುತ್‌ ಕಂಬ ನೆಲಕ್ಕುರುಳಿವೆ. ಹಲವೆಡೆ ಬೃಹತ್‌ ಮರಗಳು ವಿದ್ಯುತ್‌ ಕಂಬ, ಮನೆ, ಅಂಗಡಿ- ಮುಂಗಟ್ಟುಗಳ ಮೇಲೆ ಬಿದ್ದಿರುವ ಹಿನ್ನೆಲೆ ಹು-ಧಾ ಮಹಾನಗರ ವ್ಯಾಪ್ತಿಯಲ್ಲಿ ಕಳೆದ 2 ದಿನಗಳಿಂದ ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ. ವಿದ್ಯುತ್‌ ಸಮಸ್ಯೆ ಕುರಿತು ಹೆಸ್ಕಾಂಗೆ ಕರೆ ಮಾಡಿದರೆ ಮರಗಳು ಬಿದ್ದು ಸಮಸ್ಯೆಯಾಗಿದೆ ಆದಷ್ಟು ಬೇಗನೆ ಸರಿಪಡಿಸಲಾಗುವುದು ಎಂಬ ಉತ್ತರ ಬರುತ್ತಿದೆ. ಹೆಸ್ಕಾಂ ಸಿಬ್ಬಂದಿ ಸೋಮವಾರ ಸಂಜೆಯಿಂದಲೇ ದುರಸ್ತಿ ಕಾರ್ಯದಲ್ಲಿ ತೊಡಗಿದೆ. ಬುಧವಾರದ ವರೆಗೂ ದುರಸ್ತಿ ಕಾರ್ಯ ಮುಂದುವರಿಯಲಿದೆ. ಆ ಬಳಿಕವೇ ವಿದ್ಯುತ್‌ ಸಂಪರ್ಕ ಆಗಬಹುದು ಎಂದು ಹೆಸ್ಕಾಂ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ತಿಳಿಸುತ್ತಾರೆ.

ಮಳೆಯಿಂದಾಗಿ ಹು-ಧಾ ಮಹಾನಗರದಲ್ಲಿ 400ಕ್ಕೂ ಹೆಚ್ಚು ಮರಗಳು ಧರೆಗುರುಳಿ ಹಾನಿಯಾಗಿದೆ. ತೀವ್ರಗತಿಯಲ್ಲಿ ತೆರವು ಕಾರ್ಯಾಚರಣೆ ಮಾಡುತ್ತಿದ್ದು ಗುರುವಾರದೊಳಗೆ ಬಿದ್ದಿರುವ ಎಲ್ಲ ಮರ ತೆರವುಗೊಳಿಸಲಾಗುವುದು.

ಮೊಹಮ್ಮದ ಫಿರೋಜ್, ಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತರ

ಮಳೆಯಿಂದ ನೂರಾರು ಮರಗಳು ಧರೆಗುರುಳಿವೆ. ಇವುಗಳನ್ನು ತೀವ್ರಗತಿಯಲ್ಲಿ ತೆರವುಗೊಳಿಸಬೇಕಿದ್ದ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದ ತೀವ್ರ ಸಮಸ್ಯೆಯಾಗುತ್ತಿದೆ. ಆದಷ್ಟು ಬೇಗನೆ ಬಿದ್ದ ಮರಗಳನ್ನು ತೆರವುಗೊಳಿಸಲಿ.

ರಾಜೇಂದ್ರ ಮರಿದೇವಣ್ಣವರ, ಐಶ್ವರ್ಯಾ ಬೇವಿನಮರದ, ಸ್ಥಳಿಯರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿತ್ತನೆ ಬೀಜಗಳಿಗೆ ಏಕರೂಪ ದರ ನಿಗದಿಗೊಳಿಸುವಂತೆ ಆಗ್ರಹ
ಬಿಸಿಲೂರು ಬಳ್ಳಾರಿಯಲ್ಲಿ ಮಳೆ-ಗುಡುಗಿನ ಆರ್ಭಟ