ಕೆರೆ ಕೋಡಿ ನೀರು ಹಳ್ಳಕ್ಕೆ ಹರಿಸಿದ ಪುರಸಭೆ: ಆಕ್ರೋಶ

KannadaprabhaNewsNetwork |  
Published : Oct 22, 2024, 01:16 AM IST
ಕೋಡಿಯ ನೀರು ವಸತಿ ಪ್ರದೇಶಕ್ಕೆ ನುಗ್ಗುತ್ತೀರುವುದು | Kannada Prabha

ಸಾರಾಂಶ

ಚನ್ನಗಿರಿ ಪಟ್ಟಣದಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ ಕೆರೆಗೆ ಕೋಡಿ ಮೂಲಕ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಕೋಡಿಯ ಪಕ್ಕದಲ್ಲಿಯೇ ಇರುವ ತಗ್ಗು ಪ್ರದೇಶಗಳಿಗೆ ನೀರು ಹರಿದು ಮನೆಗಳು ಜಲಾವೃತವಾಗಿದ್ದು, ನಿವಾಸಿಗಳಿಂದ ಆಕ್ರೋಶ ವ್ಯಕ್ತವಾಗಿದೆ.

- ಬಡಾವಣೆ ಮನೆಗಳ ಕಡೆ ನುಗ್ಗಿದ ನೀರು । ಕೆರೆ ನೀರು ರಕ್ಷಿಸಲು ಕ್ರಮಕ್ಕೆ ಆಗ್ರಹ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ ಕೆರೆಗೆ ಕೋಡಿ ಮೂಲಕ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಕೋಡಿಯ ಪಕ್ಕದಲ್ಲಿಯೇ ಇರುವ ತಗ್ಗು ಪ್ರದೇಶಗಳಿಗೆ ನೀರು ಹರಿದು ಮನೆಗಳು ಜಲಾವೃತವಾಗಿದ್ದು, ನಿವಾಸಿಗಳಿಂದ ಆಕ್ರೋಶ ವ್ಯಕ್ತವಾಗಿದೆ.

ದಿಗ್ಗೇನಹಳ್ಳಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ನಿರ್ಮಿಸಲಾಗಿರುವ ಬಡಾವಣೆ ನಿವಾಸಿಗಳು ಕೆರೆ ನೀರು ನಿವೇಶನಗಳು, ಮನೆಗಳ ಕಡೆಗೆ ಹರಿಯುತ್ತಿದೆ, ಕೋಡಿ ಕಾಲುವೆಯ ಒಡೆದು ನೀರು ಹಳ್ಳಕ್ಕೆ ಹರಿಯುವಂತೆ ಕ್ರಮ ಕೈಗೊಳ್ಳಿ ಎಂದು ಕೆಲವರು ಪುರಸಭೆಗೆ ಮನವಿ ಮಾಡಿದ್ದರು ಎನ್ನಲಾಗಿದೆ. ಇದರಿಂದಾಗಿ ಕೋಡಿ ಒಡೆದಿದ್ದರಿಂದ ಕೆರೆ ನೀರು ಹಳ್ಳ ಸೇರುತ್ತಿತ್ತು. ಇದನ್ನು ಗಮನಿಸಿದ ಪಟ್ಟಣದ ಕೆಲ ರಾಜಕಾರಣಿಗಳು, ಜನತೆ ಪುರಸಭೆ ಅಧಿಕಾರಿಗಳ ಕ್ರಮ ಖಂಡಿಸಿ, ಕೋಡಿ ಪ್ರದೇಶ ಬಳಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಪುರಸಭೆ ಮಾಜಿ ಸದಸ್ಯ ಎಲ್.ಎಂ. ರೇಣುಕಾ, ಕುರುಬ ಸಮಾಜ ಅಧ್ಯಕ್ಷ ಕೆ.ಆರ್.ಗೋಪಿ ಮಾತನಾಡಿ, ಕಳೆದೆರಡು ವರ್ಷಗಳಿಂದ ಪಟ್ಟಣದ ಜನತೆ ಭೀಕರ ಬರಗಾಲ ಎದುರಿಸುತ್ತಿದ್ದಾರೆ. ಈ ವರ್ಷ ಉತ್ತಮ ಮಳೆಯಾದ ಕಾರಣ ಪಟ್ಟಣದ ಕೆರೆಗೆ ನೀರು ಹರಿದುಬರುತ್ತಿದೆ. ಆದರೆ, ಪುರಸಭೆ ಅಧಿಕಾರಿಗಳು ಕೆಲವರಿಗೆ ಒಳ್ಳೆಯವರಾಗಲು ಹೋಗಿ, ಕೆರೆ ನೀರು ಹಳ್ಳಕ್ಕೆ ಹರಿಸಿ, ಪಟ್ಟಣದ ಜನತೆಗೆ ಮತ್ತು ಸುತ್ತಮುತ್ತಲ ಗ್ರಾಮದ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.

ಕೆರೆ ಅಭಿವೃದ್ಧಿಪಡಿಸುವ ಸಂದರ್ಭ ಕೋಡಿ ನೀರು ಸರಾಗವಾಗಿ ಹರಿಯುವಂತೆ ಮತ್ತು ಕೆರೆಗೆ ಬಂದ ನೀರು ಹೊರಹೋಗದಂತೆ ಸೂಕ್ತ ಕಾಮಗಾರಿ ಕೈಗೊಳ್ಳಬೇಕಾಗಿತ್ತು. ಆದರೆ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೆರೆಗೆ ಬಂದ ನೀರು ಕೋಡಿ ಕಾಲುವೆ ಒಡೆದು ನೀರು ಹೊರಬಿಟ್ಟಿದ್ದರಿಂದ ಅಪಾರ ನೀರು ಪೋಲಾಗುತ್ತಿದೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕೋಡಿ ಕಾಲುವೆ ದುರಸ್ತಿಪಡಿಸಬೇಕು. ಅಲ್ಲದೇ, ಕೆರೆಯಲ್ಲಿ ನೀರು ಸಮರ್ಪಕ ನಿಲ್ಲುವಂತೆ ಮಾಡಬೇಕಾಗಿದೆ ಎಂದು ಹೇಳಿದರು.

ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ ಮಾತನಾಡಿ, ಈ ಬಡಾವಣೆಯ ಜನರ ಹಿತದೃಷ್ಠಿಯಿಂದ ಕೋಡಿಯ ಕಾಲುವೆ ಒಡೆದು ಹಳ್ಳಕ್ಕೆ ನೀರು ಹರಿಸಿದ್ದಾರೆ. ಕೋಡಿ ದುರಸ್ತಿಪಡಿಸುವ ಬಗ್ಗೆ ಈ ದಿನವೇ ಮೇಲಧಿಕಾರಿಗಳ ಗಮನಕ್ಕೆ ತಂದು, ತಕ್ಷಣವೇ ದುರಸ್ತಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭ ಪಟ್ಟಣದ ನಾಗರೀಕರಾದ ವಿಶ್ವನಾಥ್, ಓಂಕಾರ್, ದರ್ಶನ್, ಮಂಜುನಾಥ್, ನಾಗರಾಜ್, ಸುನೀಲ್, ಶಿವಕುಮಾರ್, ಸಂಜನ್ ಮೊದಲಾದವರು ಹಾಜರಿದ್ದರು.

- - - -21ಕೆಸಿಎನ್‌ಜಿ3: ಕೆರೆ ಕೋಡಿ ನೀರು ವಸತಿ ಪ್ರದೇಶಕ್ಕೆ ನುಗ್ಗುತ್ತಿರುವುದು.

-21ಕೆಸಿಎನ್‌ಜಿ4: ಕೆರೆ ನೀರು ಪೋಲು ಖಂಡಿಸಿದ ಸಾರ್ವಜನಿಕರು ಪುರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ