ರಂಗೂಪುರ ಶಿವಕುಮಾರ್
ಇಲ್ಲಿನ ಪುರಸಭೆ ಅಧ್ಯಕ್ಷ ಕಿರಣ್ ಗೌಡ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಅಂಗೀಕೃತವಾಗಿ ೨೬ ದಿನ ಕಳೆದರೂ ಪುರಸಭೆ ಆಡಳಿತಾಧಿಕಾರಿ ನೇಮಕವಾಗಿಲ್ಲ. ಇತ್ತ ಪುರಸಭೆ ಅಧ್ಯಕ್ಷರೂ ಆಯ್ಕೆಯಾಗಿಲ್ಲ.
ಕಳೆದ ೨೦೨೪ ಡಿ.೧೬ ರಂದು ಪುರಸಭೆ ಅಧ್ಯಕ್ಷ ಕಿರಣ್ ಗೌಡ ಪಕ್ಷದ ಒಳ ಒಪ್ಪಂದದಂತೆ ರಾಜೀನಾಮೆ ಸಲ್ಲಿಸಿದ್ದರು. ೨೦೨೪ ರ ಡಿ.೨೬ ರಂದು ಪುರಸಭೆ ಅಧ್ಯಕ್ಷರ ರಾಜೀನಾಮೆ ಅಂಗೀಕಾರ ಕೂಡ ಆಗಿದೆ. ಪುರಸಭೆ ಅಧ್ಯಕ್ಷ ಸ್ಥಾನ ರಾಜೀನಾಮೆಯಿಂದ ತೆರವಾಗಿದೆ. ತೆರವಾದ ಪುರಸಭೆ ಅಧ್ಯಕ್ಷ ಸ್ಥಾನದ ಬದಲು ಪುರಸಭೆಗೆ ಆಡಳಿತಾಧಿಕಾರಿ ನೇಮಕವಾಗಬೇಕು, ಪುರಸಭೆ ಅಧ್ಯಕ್ಷರ ಚುನಾವಣೆ ನಡೆಯಬೇಕಿತ್ತು.ಆದರೆ ಆಡಳಿತಾಧಿಕಾರಿಗಳ ನೇಮಕವೂ ಆಗಿಲ್ಲ, ಇತ್ತ ಪುರಸಭೆ ಅಧ್ಯಕ್ಷ ಸ್ಥಾನಕ್ಕೂ ಚುನಾವಣೆ ನಿಗದಿಯಾಗದ ಕಾರಣ ಪುರಸಭೆಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಮಾತಿದೆ. ಪುರಸಭೆಗೆ ಆಡಳಿತಾಧಿಕಾರಿ ಇಲ್ಲದ ಕಾರಣ ಪುರಸಭೆ ಮುಖ್ಯಾಧಿಕಾರಿಗಳು ಆಡಳಿತಾತ್ಮಕ ಕೆಲಸಗಳನ್ನು ಮಾಡುತ್ತಿದ್ದಾರೆ. ಆಡಳಿತಾತ್ಮಕ ಕ್ರೀಯಾಯೋಜನೆ ಅನುಮೋದನೆಗೆ ಪುರಸಭೆ ಅಧ್ಯಕ್ಷ ಅಥವಾ ಆಡಳಿತಾಧಿಕಾರಿ ಅಧ್ಯಕ್ಷತೆಯಲ್ಲಿ ಕೌನ್ಸಲಿಂಗ್ ಸಭೆ ನಡೆಸಬೇಕು ಇದ್ಯಾವುದು ಆಗುತ್ತಿಲ್ಲ.
ಪುರಸಭೆ ಅಧ್ಯಕ್ಷ ಕಿರಣ್ ಗೌಡ, ಉಪಾಧ್ಯಕ್ಷೆ ಹೀನಾ ಕೌಸರ್ ರಾಜೀನಾಮೆಯಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗೆಳೆರಡು ಖಾಲಿ ಇವೆ. ಚುನಾವಣೆ ನಡೆಯೋದು ಯಾವಾಗ ಎಂಬ ಕನಸಿನಲ್ಲಿ ಅಧ್ಯಕ್ಷ ಆಕಾಂಕ್ಷಿಗಳಿದ್ದಾರೆ.
ಬಜೆಟ್ ಇದೆ:ಇಲ್ಲಿನ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳೆರಡು ಖಾಲಿ ಇರುವ ಸಮಯದಲ್ಲಿ ಪುರಸಭೆ ಬಜೆಟ್ ಮಂಡಿಸಬೇಕಿದೆ. ಮುಂದಿನ ತಿಂಗಳು ಪುರಸಭೆ ಬಜೆಟ್ ಮಂಡಿಸಲು ಪುರಸಭೆ ಮುಖ್ಯಾಧಿಕಾರಿ ಪೂರ್ವ ತಯಾರಿ ನಡೆಸುತ್ತಿದ್ದಾರೆ. ಪುರಸಭೆ ಅಧ್ಯಕ್ಷ ಅಥವಾ ಪುರಸಭೆ ಆಡಳಿತಾಧಿಕಾರಿ ಇಲ್ಲದ ಕಾರಣ ಬಜೆಟ್ ಮಂಡಿಸೋರು ಯಾರು ಎಂಬ ಪ್ರಶ್ನೆಯೂ ಇದೆ.