ಮಹಿಳೆಯರನ್ನು ಕಡೆಗಣಿಸಿದರೆ ರಾಷ್ಟ್ರದ ಏಳಿಗೆ ಸಾಧ್ಯವಿಲ್ಲ: ಶಾಸಕ ಎಚ್‌.ಡಿ. ತಮ್ಮಯ್ಯ

KannadaprabhaNewsNetwork | Published : Mar 16, 2025 1:49 AM

ಸಾರಾಂಶ

ಚಿಕ್ಕಮಗಳೂರು, ಸ್ವಾಮಿ ವಿವೇಕಾನಂದರ ಮಾತಿನಂತೆ ಸಮಾಜದಲ್ಲಿ ಮಹಿಳೆಯರನ್ನು ಹಿಂದಕ್ಕಿಟ್ಟು ರಾಷ್ಟ್ರವನ್ನು ಮೇಲೆತ್ತಲು ಸಾಧ್ಯವಿಲ್ಲ. ಆದ್ದರಿಂದ ಸಮಾಜದ ಹಿತಕ್ಕಾಗಿ, ಸರ್ವತೋಮುಖ ಅಭಿವೃದ್ಧಿಗಾಗಿ ಮಹಿಳೆಯರು ಸಮಾಜದಲ್ಲಿ ಮುಂದೆ ಬರಲು ಪುರುಷರು ಸ್ವಾತಂತ್ರ್ಯ ಹಾಗೂ ಪೂರಕ ವಾತಾವರಣ ಕಲ್ಪಿಸಿಕೊಡಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ಚಿಕ್ಕಮಗಳೂರಿನ ಕಲಾಮಂದಿರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸ್ವಾಮಿ ವಿವೇಕಾನಂದರ ಮಾತಿನಂತೆ ಸಮಾಜದಲ್ಲಿ ಮಹಿಳೆಯರನ್ನು ಹಿಂದಕ್ಕಿಟ್ಟು ರಾಷ್ಟ್ರವನ್ನು ಮೇಲೆತ್ತಲು ಸಾಧ್ಯವಿಲ್ಲ. ಆದ್ದರಿಂದ ಸಮಾಜದ ಹಿತಕ್ಕಾಗಿ, ಸರ್ವತೋಮುಖ ಅಭಿವೃದ್ಧಿಗಾಗಿ ಮಹಿಳೆಯರು ಸಮಾಜದಲ್ಲಿ ಮುಂದೆ ಬರಲು ಪುರುಷರು ಸ್ವಾತಂತ್ರ್ಯ ಹಾಗೂ ಪೂರಕ ವಾತಾವರಣ ಕಲ್ಪಿಸಿಕೊಡಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಆಯೋಗ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಸಂಯುಕ್ತಾ ಶ್ರಯದಲ್ಲಿ ಶನಿವಾರ ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ ಮಹಿಳೆಯರಿಗೆ ಸಿಗಬೇಕಾದ ಸೌಕರ್ಯ ಮತ್ತು ಸ್ವಾತಂತ್ರ್ಯ ಹಾಗೂ ಕುಟುಂಬದಲ್ಲಿ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ಹಾಗೂ ಸವಲತ್ತು ನೀಡಿದರೆ ರಾಷ್ಟ್ರ ಮುಂದಕ್ಕೆ ಹೋಗುವುದರಲ್ಲಿ ಅನುಮಾನವಿಲ್ಲ ಎಂದರು.

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಈ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಶೋಷಣೆ ತಪ್ಪಿದ್ದಲ್ಲ. ಆಧುನಿಕ ಹೆಣ್ಣು ಮಕ್ಕಳು ಸಹ ನಾನಾ ರೀತಿಯ ಮಾನಸಿಕ ಶೋಷಣೆಗೆ ಒಳಗಾಗುತ್ತಿದ್ದಾರೆ. ಪ್ರತಿ ಹೆಣ್ಣು ಮಕ್ಕಳು ವಿದ್ಯಾವಂತರಾಗಿ, ವೈಚಾರಿಕವಾಗಿ ಬೆಳೆಯಬೇಕು. ಆಗ ಹೆಣ್ಣು ಸ್ವತಂತ್ರ್ಯವಾಗಿ ಸಬಲೆಯಾಗಬಲ್ಲಳು. ಸಮಾನತೆ ಜೊತೆಗೆ ಒಗ್ಗಟ್ಟಿನಲ್ಲಿ ಸಹ ಮಹಿಳೆಯರು ಸದಾ ಮುಂದಿರುವುದು ದೇಶದ ಆರ್ಥಿಕ ಅಭಿವೃದ್ಧಿಗೆ ಸಾಕಷ್ಟು ಅನುಕೂಲ ಎಂದರು.

ಪ್ರತಿ ವರ್ಷ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳೆಯರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಮಹಿಳೆಯರ ಸಾಧನೆಗೆ ಮನಃಪೂರ್ವಕ ಗೌರವ ಸೂಚಿಸುವ ದಿನ ಇದಾಗಿದೆ. ಇಂದು ಮಹಿಳೆಯರ ಸಾಧನೆ ಎಲ್ಲಾ ಕ್ಷೇತ್ರಗಳಲ್ಲಿಯೂ ಇದೆ. ಪ್ರಮುಖವಾಗಿ ತಾಂತ್ರಿಕ, ಸಂಶೋಧನಾ ಹಾಗೂ ಉತ್ಪಾದನಾ ಕ್ಷೇತ್ರಗಳಲ್ಲಿ ಮಹಿಳೆಯರು ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ತಮ್ಮ ಬುದ್ಧಿಶಕ್ತಿಯಿಂದ ಅದೆಷ್ಟು ಸಮಸ್ಯೆಗಳಿಗೆ ಪರಿಹಾರ ತಂದು ಕೊಟ್ಟಿದ್ದಾರೆ ಎಂದು ಹೇಳಿದರು.ಮಾಜಿ ಸಚಿವೆ ಮೊಟ್ಟಮ್ಮ ಮಾತನಾಡಿ, ಒಬ್ಬ ವ್ಯಕ್ತಿ ಜೀವನದಲ್ಲಿ ಮಹಿಳೆಯ ಪಾತ್ರ ತುಂಬಾ ದೊಡ್ಡದಿರುತ್ತದೆ. ಆಕೆ ತಾಯಿ ಯಾಗಿ, ಸಹೋದರಿಯಾಗಿ, ಪತ್ನಿಯಾಗಿ ಬಾಳಿಗೆ ಬೆಳಕಾಗುತ್ತಾಳೆ. ವೈಯಕ್ತಿಕವಾಗಿ ಮನೆ ಅರ್ಧ ಜವಾಬ್ದಾರಿ ಹೊರುವ ಜೊತೆಗೆ ಒಬ್ಬ ಶಿಕ್ಷಕಿಯಾಗಿ, ಇಂಜಿನಿಯರ್ ಆಗಿ, ಪೈಲೆಟ್ ಆಗಿ ಕೂಡ ತನ್ನ ಕೆಲಸ ಕಾರ್ಯ ಅಚ್ಚುಕಟ್ಟಾಗಿ ನಿಭಾಯಿಸು ತ್ತಾಳೆ. ಸಮಾಜದ ಕಟ್ಟುಪಾಡುಗಳ ಹೊರತಾಗಿಯೂ ಈಗಿನ ಆಧುನಿಕ ದಿನಗಳಲ್ಲಿ ಆಕೆ ಸಾಧನೆ ಶಿಖರ ಮುಟ್ಟಿದ್ದಾಳೆ. ಹಾಗಾಗಿ ವಿಶ್ವದಾದ್ಯಂತ ಮಹಿಳೆಯರಿಗೆ ಗೌರವಾನ್ವಿತವಾಗಿ ಈ ಒಂದು ದಿನವನ್ನು "ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ " ಯನ್ನಾಗಿ ಆಚರಿಸುವ ಮೂಲಕ ಮೀಸಲಿಡಲಾಗಿದೆ. ಮಹಿಳೆಯರಿಗೆ ಎಲ್ಲಾ ಕ್ಷೇತ್ರದಲ್ಲಿಯೂ ಅವಕಾಶ ಕೊಡು ವುದು ಮುಂದಿನ ಮಹತ್ತರ ಬೆಳವಣಿಗೆಗೆ ದಾರಿದೀಪವಾಗಲಿದೆ ಎಂದು ಹೇಳಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್.ಎಸ್. ಕೀರ್ತನಾ ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಮಹಿಳೆಯರ ಸಾಧನೆಗಳನ್ನು ಗುರುತಿಸಲು, ಲಿಂಗ ಸಮಾನತೆ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮಹಿಳಾ ಸಬಲೀಕ ರಣ ಉತ್ತೇಜಿಸಲು ಆಚರಿಸಲಾಗುತ್ತದೆ. ಈ ಜಾಗತಿಕ ಕಾರ್ಯಕ್ರಮ ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಚರ್ಚಿಸಲು ಮತ್ತು ಅವರ ಹಕ್ಕುಗಳನ್ನು ಬೆಂಬಲಿಸುವ ಅಭಿಯಾನ ಒದಗಿಸಲು ಒಂದು ವೇದಿಕೆ ಒದಗಿಸುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಹಾಂತೇಶ್ ಭಜಂತ್ರಿ, ಜಿಪಂ ಉಪ ಕಾರ್ಯದರ್ಶಿ ಶಂಕರ್ ಕೊರವರ, ಡಯಟ್ ಉಪ ನಿರ್ದೇಶಕಿ ಕೆ.ಎಂ ಸುನೀತಾ, ಜಂಟಿ ಕೃಷಿ ನಿರ್ದೇಶಕಿ ಸುಜಾತಾ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಪೂರ್ಣಿಮಾ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ನಾಗರತ್ನ, ಹೋಮ್ ಗಾರ್ಡ್ ಅಧಿಕಾರಿ ನಜ್ಹೀಮ್ ತಾಜ್ ಉಪಸ್ಥಿತರಿದ್ದರು. 15 ಕೆಸಿಕೆಎಂ 5ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಯನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಉದ್ಘಾಟಿಸಿದರು. ಮಾಜಿ ಸಚಿವೆ ಮೋಟಮ್ಮ, ಜಿಲ್ಲಾಧಿಕಾರಿ ಮೀನಾ ನಾಗರಾಜ್‌, ಜಿಪಂ ಸಿಇಒ ಕೀರ್ತನಾ ಇದ್ದರು.

Share this article