ಶಿಗ್ಗಾಂವಿ: ರಾಷ್ಟ್ರಧ್ವಜ ಕೇವಲ ಮೂರು ಬಣ್ಣಗಳ ಸಂಕೇತವಲ್ಲ. ಅದು ದೇಶದ ಸ್ವಾತಂತ್ರ್ಯ, ತ್ಯಾಗ, ಶೌರ್ಯ ಹಾಗೂ ಏಕತೆಯ ಪ್ರತೀಕವಾಗಿದೆ. ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗವನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಪ್ರಾಂಶಪಾಲೆ ಸೌಮ್ಯ ಹೇಳಿದರು.
ಶಿಕ್ಷಕ ಗದಿಗೇಶ ಮಾತನಾಡಿ, ಸ್ವಾತಂತ್ರ್ಯವೆಂದರೆ ಕೇವಲ ರಾಜಕೀಯ ಸ್ವಾತಂತ್ರ‍್ಯವಲ್ಲ. ಪ್ರತಿಯೊಬ್ಬ ಸಾರ್ವಜನಿಕರು ಹಿಂಸೆ, ಶೋಷಣೆ, ಭಯ ಹಾಗೂ ಅವಲಂಬನೆಯಿಂದ ಮುಕ್ತರಾಗಿ ಸ್ವಾಭಿಮಾನ ಮತ್ತು ಸ್ವಾವಲಂಬನೆಯೊಂದಿಗೆ ಬದುಕುವಂತಾಗಬೇಕು. ಸರ್ವರ ಸಬಲೀಕರಣದಿಂದಲೇ ಸದೃಢ ಹಾಗೂ ಸಶಕ್ತ ಭಾರತ ನಿರ್ಮಾಣ ಸಾಧ್ಯ ಎಂದು ಹೇಳಿದರು.
ವಿದ್ಯಾರ್ಥಿಗಳು ತ್ರಿವರ್ಣ ಧ್ವಜಗಳನ್ನು ಹಿಡಿದು ವಂದೇ ಮಾತರಂ ಹಾಗೂ ಭಾರತ್ ಮಾತಾ ಕೀ ಜೈ, ಕರ್ನಾಟಕ ಮಾತಾಕೀ ಜೈ ಎಂದು ಘೋಷಣೆಗಳನ್ನು ಕೂಗುವ ಮೂಲಕ ರಾಷ್ಟ್ರ ಪ್ರೇಮ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಫಿನಿಕ್ಸ್ ಇಂಟರನ್ಯಾಶನಲ್ ಸಮೂಹ ಸಂಸ್ಥೆಯ ಶಿಕ್ಷಕರಾದ ಅಸ್ಮಾ, ಮಂಜುಳಾ, ಕಿರಣ, ಅಪ್ಪಣ್ಣಾ ಉಪಸ್ಥಿತರಿದ್ದರು.