ಕನ್ನಡಪ್ರಭ ವಾರ್ತೆ ಬಾಗಲಕೋಟೆ/ಮಹಾಲಿಂಗಪುರ
ಈಕೆಯ ಮಾಹಿತಿ ಬೆನ್ನಲ್ಲೇ ಜಾಲದ ಸೂತ್ರಧಾರಿಗಳನ್ನು ಸಾಕ್ಷಿ ಸಹಿತ ಹಿಡಿಯಲು ಅಧಿಕಾರಿಗಳ ತಂಡ ವೇಷ ಧರಿಸಿಕೊಂಡು ಹೋಯಿತು. ಅದರಂತೆ ಜಾಡರ ಬಬಲಾದಿ ಗ್ರಾಮಕ್ಕೆ ಗ್ರಾಹಕರಂತೆ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಗರ್ಭಿಣಿಯಾಗಿ, ಡಿಡಿ ಶೋಭಾ ನಾದಿನಿಯಾಗಿ, ಡಿಎಚ್ಒ ಸುವರ್ಣ ತಾಯಿಯಾಗಿ ನಟಿಸಿ ಸೋಗು ಧರಿಸಿ ಮಧ್ಯವರ್ತಿಯೊಂದಿಗೆ ರಾತ್ರಿ 9.30ಕ್ಕೆ ತೆರಳಿದ್ದಾರೆ. ನಂತರ ಅಲ್ಲಿದ್ದ ನಿಖಿಲ್ ತೇಲಿ ಎಂಬಾತನನ್ನು ಸಂಪರ್ಕಿಸಿದ್ದಾರೆ. ನಂತರ ಆತ ಸ್ಕ್ಯಾನಿಂಗ್ ಇಲ್ಲಿ ಮಾಡುವುದಿಲ್ಲ. ತೋಟದ ಮನೆಯಲ್ಲಿ ಮಾಡುವುದು ಎಂದು ಆ ತಂಡವನ್ನು ತೋಟದ ಮನೆಗೆ ಕರೆದೊಯ್ದಿದ್ದಾನೆ. ಅದರಂತೆ ಆತನ ತಾಯಿ ಹಣದ ಬೇಡಿಕೆ ಇಟ್ಟು ಸ್ಕ್ಯಾನಿಂಗ್ ಮಾಡಲು ಒಪ್ಪಿಕೊಂಡಿದ್ದಾಳೆ. ಅದರಂತೆ ಸ್ಕ್ಯಾನಿಂಗ್ ಯಂತ್ರ ಕರ್ಜಗಿ ಗ್ರಾಮದ ಕವಿತಾ ಗೋಡೆಕರ್ ಎಂಬುವರ ಮನೆಯಲ್ಲಿರುವುದು ತಿಳಿದ ತಂಡ ರಾತ್ರಿ ಸುಮಾರು 11 ಗಂಟೆಗೆ ಕವಿತಾ ಗೋಡೆಕರ್ ಮತ್ತು ಬಸವರಾಜ್ ಗೋಡೆಕರ್ ದಂಪತಿ ಮನೆಗೆ ತೆರಳಿ ಪೋರ್ಟೆಬಲ್ ಸ್ಕ್ಯಾನಿಂಗ್ ಯಂತ್ರವನ್ನು ಹೊರ ತೆಗೆದು ಸ್ಕ್ಯಾನಿಂಗ್ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆಗ ದಿಢೀರನೆ ದಾಳಿ ನಡೆಸಿ ಪೋರ್ಟೆಬಲ್ ಸ್ಕ್ಯಾನಿಂಗ್ ಯಂತ್ರ ಹಾಗೂ ಪರಿಕರಗಳನ್ನು ಅಧಿಕಾರಿಗಳು ವಶಪಡಿಸಿಕೊಂಡರು. ನಂತರ ಪ್ರಮುಖ ಆರೋಪಿ ನಕಲಿ ವೈದ್ಯ ಸಂಜಯ್ ವಾಗ್ಮೋರೆ ಉರ್ಫ್ ಪಾಟೀಲ್ ಪರಾರಿಯಾಗಿದ್ದಾನೆ.
ಜಪ್ತಿ ಮಾಡಿದ ಪೋರ್ಟೆಬಲ್ ಸ್ಕ್ಯಾನಿಂಗ್ ಯಂತ್ರವನ್ನು ಮಹಾರಾಷ್ಟ್ರದ ಉಮ್ಮದಿ ಪೊಲೀಸ್ ಠಾಣೆಗೆ, ಸ್ಥಳೀಯ ವೈದ್ಯಕೀಯ ಪ್ರಾಧಿಕಾರಕ್ಕೆ ಹಸ್ತಾಂತರಿಸಿ, ಪ್ರಮುಖ ಸೂತ್ರದಾರಿ ಸಂಜಯ್ ವಾಗ್ಮೊರೆ ಸೇರಿದಂತೆ ಐವರು ಆರೋಪಿಗಳ ವಿರುದ್ಧ ಅಧಿಕೃತ ಎಫ್ಐಆರ್ ದಾಖಲಿಸಲಾಗಿದೆ.ಸುಮಾರು 17 ಗಂಟೆಗಳ ಕಾಲ ಸುದೀರ್ಘ ಹಾಗೂ ರೋಚಕವಾಗಿ ನಡೆದ ಈ ಸ್ಟಿಂಗ್ ಆಪರೇಷನ್‌ನಲ್ಲಿ ಅಧಿಕಾರಿಗಳು ಆರೋಪಿಗಳನ್ನು ಸಾಕ್ಷಿ ಸಮೇತ ರೆಡ್‌ಹ್ಯಾಂಡ್ ಆಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಜೀವದ ಅಪಾಯ ಲೆಕ್ಕಿಸದೆ, ಸ್ವತಃ ವೇಷ ಹಾಕಿ ದೊಡ್ಡ ಮಟ್ಟದ ಅಕ್ರಮ ದಂಧೆ ಬಯಲಿಗೆಳೆದ ಮಹಿಳಾ ಅಧಿಕಾರಿಗಳ ಸಾಹಸ ಹಾಗೂ ಜಾಣ್ಮೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಹೆಣ್ಣುಭ್ರೂಣಲಿಂಗ ಪತ್ತೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಯುಟ್ಯೂಬ್ ಚಾನೆಲ್ ನಲ್ಲಿ ಬಂದ ವರದಿ ಆಧರಿಸಿ ಮುಧೋಳ ತಾಲೂಕು ಆರೋಗ್ಯ ಅಧಿಕಾರಿ ವಿಜಯ ಮಲಘಾಣ ಅವರು, ಸ್ಥಳೀಯ ಠಾಣಾಧಿಕಾರಿ ಪ್ರಿತಮ್ ನಾಯ್ಕ ಹಾಗೂ ಸಿಬ್ಬಂದಿ ಜೊತೆಗೆ ಈ ಹಿಂದೆ ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಆರೋಪದಡಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಕವಿತಾ ಬಾಡನವರ ನಿವಾಸಕ್ಕೆ ಸೆ.28ರ ರಾತ್ರಿ ತೆರಳಿ ಪರಿಶೀಲನೆ ನಡೆಸಿದ್ದರು. ಆದರೆ ಆ ಸಮಯದಲ್ಲಿ ಅಂತಹ ಯಾವುದೇ ಪುರಾವೆಗಳು ಸಿಕ್ಕಿರಲಿಲ್ಲ. ಪ್ರಕರಣ ಕುರಿತು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದರಲ್ಲದೆ, ಈಕೆಯ ಚಲನವನ ಕುರಿತು ನಿಗಾ ವಹಿಸಿದ್ದರು.