ಮುಂದಿನ ಶತಮಾನ ಸನಾತನ ಧರ್ಮದ್ದಾಗಲಿದೆ: ಬಾಬಾ ರಾಮ್‌ದೇವ್‌

KannadaprabhaNewsNetwork |  
Published : Oct 25, 2024, 01:05 AM IST
ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ | Kannada Prabha

ಸಾರಾಂಶ

ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ಬೆಂಗಳೂರಿನ ಭಾರತೀಯ ವಿದ್ವತ್ ಪರಿಷತ್, ನವದೆಹಲಿಯ ಕೇಂದ್ರಿಯ ಸಂಸ್ಕೃತ ವಿಶ್ವವಿದ್ಯಾನಿಲಯ ಮತ್ತು ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ 3 ದಿನಗಳ 51ನೇ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಮುಂದಿನ ಶತಮಾನ ಭಾರತದ್ದು, ಭಾರತದ ಸನಾತನ ಧರ್ಮದ್ದು ಮತ್ತು ಸಂಸ್ಕೃತದ್ದಾಗಿರಲಿದೆ ಎಂದು ಖ್ಯಾತ ಯೋಗಗುರು ಬಾಬಾ ರಾಮ್‌ದೇವ್ ವಿಶ್ವಾಸ ವ್ಯಕ್ತಪಡಿಸಿದರು.

ಅವರು ಗುರುವಾರ, ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ಬೆಂಗಳೂರಿನ ಭಾರತೀಯ ವಿದ್ವತ್ ಪರಿಷತ್, ನವದೆಹಲಿಯ ಕೇಂದ್ರಿಯ ಸಂಸ್ಕೃತ ವಿಶ್ವವಿದ್ಯಾನಿಲಯ ಮತ್ತು ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ನಡೆಯುತ್ತಿರುವ 3 ದಿನಗಳ 51ನೇ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.ಸಂಸ್ಕೃತದಲ್ಲಿ ಅಧ್ಯಯನ ಮಾಡಿದವರಿಗೆ ಎಲ್ಲ ಆಧುನಿಕ ಜ್ಞಾನ ಲಭ್ಯವಾಗುತ್ತವೆ. ಸಂಸ್ಕೃತದಲ್ಲಿ ಅಧ್ಯಯನ ಮಾಡಿದವರು ವಿಶ್ವಮಾನ್ಯರಾಗುವುದಕ್ಕೆ ಸಾಧ್ಯವಿದೆ ಎಂದ ಅವರು, ತಮ್ಮ ಹರಿದ್ವಾರದ ಪತಂಜಲಿ ವಿ.ವಿ.ಯಲ್ಲಿ ಸಂಸ್ಕೃತ ಅಧ್ಯಯನ ಮಾಡಬಯಸುವ ಉಡುಪಿಯ ವಿದ್ಯಾರ್ಥಿಗಳ ಖರ್ಚುವೆಚ್ಚವನ್ನು ತಾವು ನೋಡಿಕೊಳ್ಳುವುದಾಗಿ ರಾಮ್‌ದೇವ್‌ ಘೋಷಿಸಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಅತಿಥೇಯ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಪ್ರಾಚೀನ ವಿದ್ಯೆ ಮತ್ತು ವಿದ್ಯಾ ದೃಷ್ಟಿಕೋನಗಳು ಕಾಲ ಪರೀಕ್ಷೆಗೊಳಗಾಗಿ ಅತ್ಯಂತ ಶ್ರೇಷ್ಠ ಎಂದು ಸಾಬೀತಾಗಿವೆ. ಮತ್ತೆ ಈ ವಿದ್ಯೆ ಅನುಷ್ಠಾನಕ್ಕೆ ಬರಬೇಕಾದುದು ಅತ್ಯಗತ್ಯವಾಗಿದೆ ಎಂದಭಿಪ್ರಾಯಪಟ್ಟರು.

ಪ್ರಾಚ್ಯ ವಿದ್ಯೆ ಎಂಬುದು ಕೇವಲ ಭಾರತದಲ್ಲಿ ಮಾತ್ರ ಇವೆ, ಬೇರೆ ಯಾವ ದೇಶಗಳಲ್ಲಿ ಪ್ರಾಚ್ಯ ವಿದ್ಯೆ ಎಂಬುದಿಲ್ಲ. ಇಂತಹ ಪ್ರಾಚ್ಯ ವಿದ್ಯೆಗಳ ರಕ್ಷಣೆಯಾಗಬೇಕಾಗಿದೆ. ಪ್ರಾಚ್ಯವಿದ್ಯೆ, ಸಂಸ್ಕೃತಿ ಮತ್ತು ಸಂಸ್ಕಾರಗಳ ರಕ್ಷಣೆಯಾಬೇಕಾದರೆ ಮೊದಲು ಸಂಸ್ಕೃತವನ್ನು ರಕ್ಷಣೆ ಮಾಡಬೇಕು ಎಂದವರು ಕರೆ ನೀಡಿದರು.ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು, ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥರು, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥರು ಮತ್ತು ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥರು ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂನಾ ವಿಶ್ವ ವಿದ್ಯಾಲಯದ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕಿ ಪ್ರೊ. ಸರೋಜಾ ಭಾಟೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಭಾರತ ಭಾಷಾ ಸಮಿತಿಯ ಅಧ್ಯಕ್ಷ ಪದ್ಮಶ್ರೀ ಚಮು ಕೃಷ್ಣ ಶಾಸ್ತ್ರೀ, ದೆಹಲಿಯ ಕೇಂದ್ರೀಯ ಸಂಸ್ಕೃತ ವಿ.ವಿ.ಯ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಆಗಮಿಸಿದ್ದರು.

ಗೌರವ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಮಣಿಪಾಲ ಮಾಹೆಯ ಕುಲಸಚಿವ ಡಾ. ನಾರಾಯಣ ಸಭಾಹಿತ್, ಮಂಗಳೂರಿನ ಶ್ರೀನಿವಾಸ ವಿವಿಯ ಕುಲಪತಿ ಡಾ.ರಾಘವೇಂದ್ರ ರಾವ್ ಭಾಗವಹಿಸಿದ್ದರು.

ಎಐಒಸಿಯ ಪ್ರಧಾನ ಕಾರ್ಯದರ್ಶಿ ಕವಿತಾ ಹೊಳೆ, ಭಾರತೀಯ ವಿದ್ಯಾಪೀಠದ ಮುಖ್ಯಸ್ಥ ಮಹಾಮಹೋಪಾಧ್ಯಾಯ ಪ್ರೊ. ಕೊರಾಡ ಸುಬ್ರಹ್ಮಮಣ್ಯಂ, ಸ್ಥಳೀಯ ಕಾರ್ಯದರ್ಶಿ ಪ್ರೊ. ಶಿವಾನಿ ವಿ. ವೇದಿಕೆಯಲ್ಲಿದ್ದರು.

ಭಾರತೀಯ ವಿದ್ಯಾಪೀಠ ಟ್ರಸ್ಟ್ ಮುಖ್ಯಸ್ಥ ಆಚಾರ್ಯ ವೀರನಾರಾಯಣ ಪಾಂಡುರಂಗಿ ಸ್ವಾಗತಿಸಿದರು, ವಿದ್ವಾನ್ ಗೋಪಾಲಾಚಾರ್ಯರು ಮತ್ತು ಶೃತಿ ರಾವ್ ಕಾರ್ಯಕ್ರಮ ಸಂಯೋಜಿಸಿದರು.

----

ಆರ್ಯರು ಕೂಡ ಭಾರತದ ಮೂಲನಿವಾಸಿಗಳು: ಆಚಾರ್ಯ ಬಾಲಕೃಷ್ಣ ಕನ್ನಡಪ್ರಭ ವಾರ್ತೆ ಉಡುಪಿ

ಭಾರತದ ಆರ್ಯರು ಮತ್ತು ದ್ರಾವಿಡರು ಎಂಬ ವಿಭಜನೆ ಆಂಗ್ಲರು ಮಾಡಿದ ಷಡ್ಯಂತ್ರ. ಆರ್ಯರು ಭಾರತಕ್ಕೆ ವಲಸೆ ಬಂದವರು ಎಂಬುವುದು ಸುಳ್ಳು ಕತೆ, ಆರ್ಯರು ಮತ್ತು ದ್ರಾವಿಡರಿಬ್ಬರೂ ಭಾರತದ ಮೂಲನಿವಾಸಿಗಳು ಎಂಬುದೀಗ ಸಾಬೀತಾಗಿದೆ ಎಂದು ಹರಿದ್ವಾರದ ಪತಂಜಲಿ ವಿ.ವಿ.ಯ ಉಪಕುಲಪತಿ ಆಚಾರ್ಯ ಬಾಲಕೃಷ್ಣ ಹೇಳಿದರು.

ಅವರು ಗುರುವಾರ ರಾಜಾಂಗಣದಲ್ಲಿ ನಡೆದ ಅಖಿಲ ಬಾರತೀಯ ಪ್ರಾಚ್ಯವಿದ್ಯಾ ಸಮ್ಮೇಳದ ಉದ್ಘಾಟನಾ ಸಮಾರಂಭದಲ್ಲಿ ಶಿಖರೋಪನ್ಯಾಸ ನೀಡಿದರು.

ಹೊರಗಿನಿಂದ ಭಾರತಕ್ಕೆ ವಲಸೆ ಬಂದವರಿಗಿಂತಲೂ ಹೆಚ್ಚು ಭಾರತೀಯರೇ ಹೊರಗೆ ಹೋಗಿರುವುದಕ್ಕೂ ಪುರಾವೆಗಳಿವೆ. ರಾಜ ಯಾಯತಿಯ ಮಗ ಪುರು ಈಜಿಪ್ಟ್‌ ದೇಶಕ್ಕೂ ಹೋಗಿದ್ದ, ಆತನ ಸ್ಮರಣಾರ್ಥವೇ ಅಲ್ಲಿನ ರಾಜವಂಶ ಫೇರೋ ಎಂದು ಕರೆಯಲ್ಪಟ್ಟಿತು ಎಂಬುದುಕ್ಕೂ ನಿದರ್ಶನಗಳು ಸಿಕ್ಕಿವೆ. ಬೇರೆ ದೇಶದಗಳ ನಾಗರಿಕತೆಯಲ್ಲಿ ಇನ್ನೂ ಚಿತ್ರ ಲಿಪಿಯನ್ನು ಕಂಡು ಹಿಡಿಯುವಾಗ, ಭಾರತದಲ್ಲಿ ಅದಾಗಲೇ ವರ್ಣಲಿಪಿ ಬಳಕೆಯಲ್ಲಿತ್ತು ಎಂದವರು ಹೇಳಿದರು.

ಆಂಗ್ಲರು ಸಂಸ್ಕೃತ ಭಾಷೆಯ ವಿರುದ್ಧವೂ ಷಡ್ಯಂತ್ರ ಹೂಡಿದ್ದರು. ನಮ್ಮ ದೇಶದ ಸಂಸ್ಕೃತಿಯ ಬೇರು ಇರುವುದೇ ಸಂಸ್ಕೃತ ಭಾಷೆಯಲ್ಲಿ. ಸಂಸ್ಕೃತಿ ಉಳಿಯಬೇಕಾದರೆ ಸಂಸ್ಕೃತವನ್ನು ಉಳಿಸಬೇಕು. ಅದಕ್ಕಾಗಿ ಮೊದಲು ನಮ್ಮ ದೇಶದ ಇತಿಹಾಸದ ಸಮಗ್ರ ಅಧ್ಯಯನ ನಡೆಯಬೇಕಾಗಿದೆ ಎಂದವರು ಒತ್ತಿ ಹೇಳಿದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌