ಬೆಸಗರಹಳ್ಳಿ ಗ್ರಾಪಂ ಅಧ್ಯಕ್ಷರ ವಿರುದ್ಧ ಮಂಡಿಸಿದ್ದ ಅವಿಶ್ವಾಸ ಮಂಡನೆಗೆ ಸೋಲು

KannadaprabhaNewsNetwork |  
Published : Feb 15, 2025, 12:32 AM IST
14ಕೆಎಂಎನ್ ಡಿ23,24 | Kannada Prabha

ಸಾರಾಂಶ

ಕಾಂಗ್ರೆಸ್ ಪಕ್ಷದ ನಾಯಕರಿಗೆ ಚಳ್ಳೆ ಹಣ್ಣು ತಿನ್ನಿಸುವ ಸಂಚು ರೂಪಿಸಿದ ಜೆಡಿಎಸ್ ನಾಯಕರು, ಓರ್ವ ಸದಸ್ಯನನ್ನು ಅಜ್ಞಾತ ಸ್ಥಳದಲ್ಲಿ ಇರಿಸುವುದರ ಜೊತೆಗೆ ಅವಿಶ್ವಾಸ ಮಂಡನಾ ಸಭೆಗೆ ಇಡೀ ಜೆಡಿಎಸ್ ಸದಸ್ಯರು ಗೈರು ಹಾಜರಾಗುವ ಮೂಲಕ ಅವಿಶ್ವಾಸ ಮಂಡನಾ ಸಭೆ ರದ್ದಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಬೆಸಗರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಸಿ.ರಾಧಿಕಾ ಪ್ರಸಾದ್ ವಿರುದ್ಧ ಮಂಡಿಸಿದ್ದ ಅವಿಶ್ವಾಸ ಮಂಡನೆಗೆ ಶುಕ್ರವಾರ ಸೋಲಾಗಿದೆ. ಗ್ರಾಪಂ ಅಧ್ಯಕ್ಷ ಸ್ಥಾನವನ್ನು ವಶಕ್ಕೆ ತೆಗೆದುಕೊಳ್ಳಲೇಬೇಕು ಎಂದು ತಂತ್ರಗಾರಿಕೆ ನಡೆಸಿದ್ದ ಕಾಂಗ್ರೆಸ್ ನಾಯಕರಿಗೆ ಇದರಿಂದ ಮುಖಭಂಗವಾಗಿದೆ.

ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಸೋಲಂಟಾಗುವ ಭೀತಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಗುಂಪು ಸಭೆಗೆ ಅಡ್ಡಿಪಡಿಸಲು ವಿಫಲ ಯತ್ನ ನಡೆಸಿತು. ಈ ವೇಳೆ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿಯೊಂದಿಗೆ ತಳ್ಳಾಟ, ನೂಕಾಟ ನಡೆದು ಸ್ಥಳದಲ್ಲಿ ಕೆಲಕಾಲ ಬಿಗುವಿನ ಪರಿಸ್ಥಿತಿ ಉಂಟಾಗಿತ್ತು.

ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದ ಜೆಡಿಎಸ್ ಸದಸ್ಯ ರಮೇಶ್ ಅವರನ್ನು ಅಪಹರಿಸಲಾಗಿದೆ. ಹೀಗಾಗಿ ಅವಿಶ್ವಾಸ ಮಂಡನೆ ಸಭೆಯನ್ನು ರದ್ದು ಪಡಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ರಂಪಾಟ ನಡೆಸಿದರು.

ನಂತರ ಸ್ಥಳಕ್ಕೆ ಧಾವಿಸಿದ ಉಪವಿಭಾಗಾಧಿಕಾರಿ ಶಿವಮೂರ್ತಿ ಅಧ್ಯಕ್ಷರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮದ ಪ್ರಕಾರ ಒಟ್ಟು ಸದಸ್ಯರ ಮೂರನೇ ಎರಡರಷ್ಟು ಸಂಖ್ಯೆ ಇದ್ದರೆ ಮಾತ್ರ ವಿಶ್ವಾಸ ಮಂಡನೆ ಸಭೆ ನಡೆಯಲಿದೆ ಎಂದು ಪ್ರತಿಭಟನಾ ನಿರತ ಕಾಂಗ್ರೆಸ್ ಕಾರ್ಯಕರ್ತರನ್ನು ಮನವೊಲಿಸುವ ಪ್ರಯತ್ನ ನಡೆಸಿದರು.

ಬಳಿಕ ಅವಿಶ್ವಾಸ ಮಂಡನೆ ಸಭೆಗೆ ಜೆಡಿಎಸ್ ಬೆಂಬಲಿತ ಸದಸ್ಯರು ಗೈರು ಹಾಜರಾದ ಹಿನ್ನೆಲೆಯಲ್ಲಿ ಕೋರಂ ಅಭಾವ ಉಂಟಾದ ಕಾರಣ ಅಧ್ಯಕ್ಷೆ ರಾಧಿಕಾ ವಿರುದ್ಧ ಕಾಂಗ್ರೆಸ್ ಬೆಂಬಲಿತ ಸದಸ್ಯರು ಮಂಡಿಸಿದ್ದ ಅವಿಶ್ವಾಸ ಮಂಡನೆಗೆ ಸೋಲುಂಟಾಯಿತು. ತಾಲೂಕಿನ ಬೆಸಗರಹಳ್ಳಿ ಪಂಚಾಯಿತಿ 27 ಸದಸ್ಯರ ಬಲ ಹೊಂದಿದ್ದು, ಜೆಡಿಎಸ್ 16 ಹಾಗೂ ಕಾಂಗ್ರೆಸ್ 11ಮಂದಿ ಸದಸ್ಯರು ಇದ್ದರು. ಈ ಪೈಕಿ ಜೆಡಿಎಸ್ ಬೆಂಬಲಿತ ನಾಗರಾಜು, ಅನಿತಾ ವೆಂಕಟೇಶ್, ರೇಖಾ, ಪೌಜಿಯ ಬಾನು ನಂತರ ದಿನಗಳಲ್ಲಿ ಕಾಂಗ್ರೆಸ್ ಗೆ ಬೆಂಬಲ ವ್ಯಕ್ತಪಡಿಸಿದ್ದರು. ಜೆಡಿಎಸ್ ಸದಸ್ಯರ ಬಲ 10ಕ್ಕೆ ಕುಸಿದಿತ್ತು.

ಬೆಸಗರಹಳ್ಳಿ ಗ್ರಾಪಂ ಅನ್ನು ಕಾಂಗ್ರೆಸ್ ವಶ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದ ನಾಯಕರು ಸಂಚು ರೂಪಿಸುವ ಮೂಲಕ ಜೆಡಿಎಸ್ ಬೆಂಬಲಿತ ಅಧ್ಯಕ್ಷೆ ರಾಧಿಕಾ ಪ್ರಸಾದ್ ವಿರುದ್ಧ ವಿಶ್ವಾಸ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಿಗೆ ಚಳ್ಳೆ ಹಣ್ಣು ತಿನ್ನಿಸುವ ಸಂಚು ರೂಪಿಸಿದ ಜೆಡಿಎಸ್ ನಾಯಕರು, ಓರ್ವ ಸದಸ್ಯನನ್ನು ಅಜ್ಞಾತ ಸ್ಥಳದಲ್ಲಿ ಇರಿಸುವುದರ ಜೊತೆಗೆ ಅವಿಶ್ವಾಸ ಮಂಡನಾ ಸಭೆಗೆ ಇಡೀ ಜೆಡಿಎಸ್ ಸದಸ್ಯರು ಗೈರು ಹಾಜರಾಗುವ ಮೂಲಕ ಅವಿಶ್ವಾಸ ಮಂಡನಾ ಸಭೆ ರದ್ದಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಗ್ರಾಪಂ ಅಧ್ಯಕ್ಷರ ವಿರುದ್ಧ ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸ ಮಂಡನೆಗೆ ಸೋಲುಂಟಾದ ಹಿನ್ನೆಲೆಯಲ್ಲಿ ಜೆಡಿಎಸ್ ಸದಸ್ಯರು ಮತ್ತು ಕಾರ್ಯಕರ್ತರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

PREV

Recommended Stories

ದಕ್ಷಿಣ ಭಾರತದ ಮೊದಲ ಆ್ಯಪಲ್ ಸ್ಟೋರ್ ಬೆಂಗಳೂರಲ್ಲಿ ಆರಂಭ
ಜೈಲಲ್ಲಿರುವ ಸಿಎಂ, ಸಚಿವರ ಆಗಬೇಕು. ಏಕೆ ಗೊತ್ತಾ?