‎ಗಂಧನಹಳ್ಳಿಯಲ್ಲಿ ಗಮಕದ ಘಮಲು; ವ್ಯಾಖ್ಯಾನಕ್ಕೆ ಉಪನ್ಯಾಸ

KannadaprabhaNewsNetwork |  
Published : Jul 03, 2025, 11:49 PM IST
21 | Kannada Prabha

ಸಾರಾಂಶ

ಗಮಕ ಕಲೆ ಅರ್ಥಮಾಡಿಕೊಳ್ಳಬೇಕಾದರೆ ಗಮನ ಅತ್ಯಾವಶ್ಯಕ. ನಮ್ಮ ಗ್ರಾಮೀಣ ಪ್ರದೇಶದ ಹಳ್ಳಿ ಹಳ್ಳಿಗಳಲ್ಲಿ ಹಿಂದಿನ ಕಾಲದ ಅನೇಕ ಅಶಿಕ್ಷಿತರು ಕೇವಲ ತಮ್ಮ ಆಲಿಸುವಿಕೆಯಿಂದಲೇ ಪುನರ್ ಮನನ ಮಾಡಿಕೊಂಡು ಅಥವಾ ಗಮಕಿಗಳೊಂದಿಗೆ ತಾವೂ ಜೊತೆಯಲ್ಲಿ ಹಾಡಿಕೊಂಡು ಹಲವು ಪದ್ಯಗಳನ್ನು ಕಂಠಸ್ಥ ಮಾಡಿಕೊಂಡದ್ದು ಅವರಿಗಿರುವ ಶ್ರದ್ಧೆಯ ಪ್ರತೀಕ.

ಕನ್ನಡಪ್ರಭ ವಾರ್ತೆ ಮೈಸೂರು

ಕೆ.ಆರ್‌.ನಗರ ತಾಲೂಕಿನ ಪ್ರಮುಖ ಗ್ರಾಮಗಳಲ್ಲಿ ಒಂದಾದ ಗಂಧನಹಳ್ಳಿಯ ಶ್ರೀ ಲಕ್ಷ್ಮೀದೇವಮ್ಮ ದೇವಸ್ಥಾನದ ಮುಂಭಾಗದ ಮಂದಿರದಲ್ಲಿ ನಿತ್ಯದ ಗಮಕ ವಾಚನ ಮತ್ತು ವ್ಯಾಖ್ಯಾನಕ್ಕೆ ಉಪನ್ಯಾಸಕ ಹಾಗೂ ಗಮಕ ಕಲಾವಿದ ಕೃ.ಪಾ. ಮಂಜುನಾಥ್ ಚಾಲನೆ ನೀಡಿದರು.

‎ಗಮಕ ಕಲೆಯು ಸಾಹಿತ್ಯ ಮತ್ತು ಸಂಗೀತವನ್ನು ಒಳಗೊಂಡ ಹದವರಿತ ಭಾವಪೂರ್ಣ ಕಲೆಯಾಗಿದ್ದು ಜನಮಾನಸಕ್ಕೆ ಸಂಸ್ಕಾರ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಲವು ಶತಮಾನಗಳಿಂದ ನಿರಂತರವಾಗಿ ಬೆಳೆದು ಬಂದ ಈ ಕಲೆ ಇಂದಿಗೂ ಹೊಸ ರೂಪಗಳಲ್ಲಿ ತನ್ನ ಮಹತ್ವವನ್ನು ಉಳಿಸಿಕೊಂಡು ಬಂದಿದ್ದರೂ ಪಾರಂಪರಿಕ ವಿಧಾನವಾದ ಪದ್ಯದ ವಾಚನ ಮತ್ತು ವ್ಯಾಖ್ಯಾನ ಪದ್ಧತಿ ಸಾಹಿತ್ಯಾಸಕ್ತರಿಗೆ ಕಾವ್ಯಗಳನ್ನು ಅನುಸಂಧಾನ ಮಾಡಲು ವರವಾಗಿದೆ ಎಂದರು.

ಗಮಕ ಕಲೆ ಅರ್ಥಮಾಡಿಕೊಳ್ಳಬೇಕಾದರೆ ಗಮನ ಅತ್ಯಾವಶ್ಯಕ. ನಮ್ಮ ಗ್ರಾಮೀಣ ಪ್ರದೇಶದ ಹಳ್ಳಿ ಹಳ್ಳಿಗಳಲ್ಲಿ ಹಿಂದಿನ ಕಾಲದ ಅನೇಕ ಅಶಿಕ್ಷಿತರು ಕೇವಲ ತಮ್ಮ ಆಲಿಸುವಿಕೆಯಿಂದಲೇ ಪುನರ್ ಮನನ ಮಾಡಿಕೊಂಡು ಅಥವಾ ಗಮಕಿಗಳೊಂದಿಗೆ ತಾವೂ ಜೊತೆಯಲ್ಲಿ ಹಾಡಿಕೊಂಡು ಹಲವು ಪದ್ಯಗಳನ್ನು ಕಂಠಸ್ಥ ಮಾಡಿಕೊಂಡದ್ದು ಅವರಿಗಿರುವ ಶ್ರದ್ಧೆಯ ಪ್ರತೀಕ ಎಂದರು.

ಇಂದಿಗೂ ಕಾವ್ಯದ ಓದುವಿಕೆಯನ್ನು ಸೂಕ್ತ ರಾಗಗಳಲ್ಲಿ ಅಥವಾ ನಿರ್ದಿಷ್ಟ ಮಟ್ಟುಗಳಲ್ಲಿ ವಾಚಿಸುವ ಮತ್ತು ಅರ್ಥೈಸುವ ಕಲೆಗಾರಿಕೆ ನಮ್ಮ ಗ್ರಾಮೀಣ ಪ್ರದೇಶದ ಪ್ರತಿಭಾವಂತರಿಗಿದ್ದು ಇದನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು.

‎ಈ ನಿಟ್ಟಿನಲ್ಲಿ ನಿವೃತ್ತ ಶಿಕ್ಷಕ ಜಿ.ಕೆ. ಮಂಜುನಾಥ್ ಅವರ ಆಸಕ್ತಿ ಮೆಚ್ಚತಕ್ಕದ್ದು ಎಂದರು. ಕುಮಾರವ್ಯಾಸ ಭಾರತದ ಆದಿ ಪರ್ವದ ಕೆಲವು ನಾಂದಿ ಪದ್ಯಗಳನ್ನು ಹಾಡುವುದರ ಮೂಲಕ ಜ್ಯೋತಿ ಬೆಳಗಿಸಿ ಎಲ್ಲರೂ ದನಿಗೂಡಿಸುವಂತೆ ಮಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಕೆ.ಆರ್‌.ನಗರ ಕಸಾಪ ಮಾಜಿ ಅಧ್ಯಕ್ಷ ಜಿ.ಕೆ. ರಾಜು ಅವರು ತಮ್ಮೂರಿನ ಕಾವ್ಯಾಸಕ್ತರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕುಮಾರವ್ಯಾಸ ಭಾರತದ ಪಾರಾಯಣ ನಿರಂತರವಾಗಿ ನಡೆಯಲಿ, ನಾನೂ ಜೊತೆಯಾಗಿ ಸಹಕರಿಸುತ್ತೇನೆ ಎಂದರಲ್ಲದೆ ಸುಶ್ರಾವ್ಯವಾಗಿ ನಾಂದಿಪದ್ಯಗಳನ್ನು ವಾಚಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಕೃ.ಪಾ. ಮಂಜುನಾಥ್ ಅವರು ನೀಡಿದ ಬೆಂಬಲಕ್ಕೆ ತಮ್ಮ ಕೃತಜ್ಞತೆ ಅರ್ಪಿಸಿದರು. ನಂತರ ಜಿ.ಕೆ. ಮಂಜುನಾಥ್ ಅವರು ಮೊದಲ ಹತ್ತು ಪದ್ಯಗಳನ್ನು ವಾಚನ ಮಾಡಿ ಅದರ ಅರ್ಥ ವಿವರಣೆಯನ್ನು ತಿಳಿ ಹೇಳಿದರಲ್ಲದೆ ಗ್ರಾಮಸ್ಥರೆಲ್ಲರ ನಿರಂತರ ಬೆಂಬಲವನ್ನು ಕೋರಿದರು.

ಗ್ರಾಮದ ಮುಖಂಡರಾದ ಮಾಜಿ ಉಪಾಧ್ಯಕ್ಷ ಜಿ.ಎಸ್. ಸಣ್ಣದೊಡ್ಡೇಗೌಡ, ಜಿ.ಎಲ್. ಚಿಕ್ಕೇಗೌಡ, ಜಿ.ಸಿ. ಚಿಕ್ಕೇಗೌಡ, ವಾದಪ್ರಿಯ ನಾಗರಾಜು, ಜಿ.ಆರ್. ಸ್ವಾಮಣ್ಣ, ಅಮಾಸೇಗೌಡ ಹಾಗೂ ಜಿ.ಎಸ್. ಶಿವಣ್ಣೇಗೌಡ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಸಿದ ಕರ್ನಾಟಕ ಕ್ರಿಕೆಟ್‌ ಗುಣಮಟ್ಟ - ಈ ಸಲ 7 ಟಿ20ಯಲ್ಲಿ ಗೆದ್ದಿದ್ದು ಕೇವಲ 2
ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌ : ಬಿಜೆಪಿ