ಕನ್ನಡಪ್ರಭ ವಾರ್ತೆ ಮೈಸೂರು
ಪ್ರಸ್ತುತ ಯುದ್ಧದಿಂದ ಅಪಾರ ಸಾವು- ನೋವು ಸಂಭವಿಸುತ್ತಿದ್ದು, ಸಕಲ ಜೀವರಾಶಿಗಳ ಉಳಿವಿಗೆ ಗೌತಮ ಬುದ್ಧರ ಪ್ರೀತಿಯ ಮತ್ತು ಅಹಿಂಸಾತ್ಮಕ ಮಾರ್ಗ ಪ್ರಸ್ತುತ ಅವಶ್ಯಕ ಎಂದು ಕಲ್ಬುರ್ಗಿಯ ಅಂಬೇಡ್ಕರ್ ವಿಚಾರವಾದಿ ಜಿತೇಂದ್ರ ಕೆ. ತಳವಾರ ತಿಳಿಸಿದರು.ವಿಜಯನಗರ 1ನೇ ಹಂತದ ಡಿ. ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಬುದ್ಧವಿಹಾರದಲ್ಲಿ ಕರ್ನಾಟಕ ಬುದ್ಧ ಧಮ್ಮ ಸಮಿತಿಯು ಸೋಮವಾರ ಆಯೋಜಿಸಿದ್ದ 2569ನೇ ಬುದ್ಧ ಜಯಂತಿಯಲ್ಲಿ ಮಾತನಾಡಿದ ಅವರು, ಭಾರತದ ನೆಲ ಎಂದೂ ಹಿಂಸೆಯ ಬಿಡಲ್ಲ, ಇದು ಶಾಂತಿ, ಸಹನೆ, ತಾಳ್ಮೆ, ಸಹೋದರತ್ವವನ್ನು ಬೆಳೆಸುತ್ತಿರುವ ನಾಡು ಇದಾಗಿದೆ ಎಂದರು.
ಇಂದು ವಿಶ್ವದ ಅನೇಕ ರಾಷ್ಟ್ರಗಳು ಬುದ್ಧರ ಶಾಂತಿಯ ಸಂದೇಶವನ್ನು ಅನುಸರಿಸುತ್ತಿರುವುದರಿಂದ ಅಲ್ಲಿನ ನೆಮ್ಮದಿಯಿಂದ ಬದುಕುವಂತಾಗಿದೆ. ಇದು ಎಲ್ಲಾ ದೇಶಗಳಲ್ಲೂ ಅನುಸರಣೆಯಾದಾಗ ಮಾತ್ರ ಯುದ್ಧ ಕೊನೆಗಾಣಲು ಸಾಧ್ಯ. ಡಾ. ಅಂಬೇಡ್ಕರ್ ಅವರು ಕೂಡ ಬುದ್ಧರ ಮಾರ್ಗವನ್ನು ಅನುಸರಿಸಿ ಶಾಂತಿಯುತ ಹೋರಾಟದ ಮೂಲಕವೇ ಜನರಿಗೆ ಹಕ್ಕುಗಳನ್ನು ತಂದು ಕೊಡಲು ಶ್ರಮಿಸಿದರು ಎಂದರು.ಡಾ.ಬಿ.ಆರ್. ಅಂಬೇಡ್ಕರ್ ಅವರು ಬಾಲ್ಯದಲ್ಲಿ ತಂದೆ- ತಾಯಿಯನ್ನು ಕಳೆದುಕೊಂಡು ಶಿಷ್ಯ ವೇತನದ ಮೂಲಕ ಅಧ್ಯಯನ ಮಾಡಿದರು. ಬಡವರು, ಹಿಂದುಳಿದವರ ಮತ್ತು ವಿಶೇಷವಾಗಿ ಮಹಿಳೆಯರ ಹಕ್ಕುಗಳನ್ನು ಸ್ಥಾಪಿಸಿದರು. ಅವರ ಅಧ್ಯಯನ ಶೀಲತೆ ನಮಗೆ ಇಂದು ಮಾದರಿಯಾಗಬೇಕಾಗಿದೆ ಎಂದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಮಹದೇವಪ್ಪ ಮಾತನಾಡಿ, ಸಿದ್ಧಾರ್ಥ ಗೌತಮ ಯುದ್ಧ ವಿರೋಧಿಸಿ ಮನೆ ಬಿಟ್ಟ, ಆದರೆ ಇಂದು ಜಗತ್ತಿನಲ್ಲಿ ಯುದ್ಧದ ಸ್ಥಿತಿ ನಿರ್ಮಾಣವಾಗಿದೆ. ಜನರಲ್ಲಿ ನೈತಿಕತೆ ಕಡಿಮೆಯಾಗಿದೆ. ಕೌಟುಂಬಿಕ ವ್ಯವಸ್ಥೆ ಶಿಥಿಲಗೊಂಡು ಮಕ್ಕಳೇ ತಂದೆ- ತಾಯಿಯನ್ನು ಕೊಲೆ ಮಾಡುತ್ತಿರುವುದು ದುರಂತದ ಸಂಗತಿ. ಅಜ್ಞಾನದಿಂದ ಕೂಡಿರುವ ಕತ್ತಲಿನ ಜಗತ್ತಿಗೆ ಬುದ್ಧನ ಬೆಳಕು ಅತ್ಯಗತ್ಯ ಎಂದರು.ಕಾರ್ಯಕ್ರಮಕ್ಕೂ ಮುನ್ನ ಬಂತೇಜಿಯವರಿಂದ ಬುದ್ಧ ವಂದನೆ ಮತ್ತು ಬುದ್ಧರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಯಿತು. ನಂತರ ಶ್ರೀಲಂಕಾದಿಂದ ತಂದು ಬೆಳೆಸಿರುವ ಬೋಧಿವೃಕ್ಷಕ್ಕೆ ಪೂಜೆ ಸಲ್ಲಿಸಿ, ತ್ರಿಸರಣ ಪಠಣ ಮಾಡಲಾಯಿತು.
ಕೊಳ್ಳೇಗಾಲ ಜೇತವನ ಬುದ್ಧ ವಿಹಾರದ ಮನೋರಕ್ಖಿತಾ ಬಂತೇಜಿ ಸಮ್ಮುಖ ವಹಿಸಿದ್ದರು. ಸಮಿತಿಯ ಅಧ್ಯಕ್ಷ ಪ್ರೊ.ಡಿ. ನಂಜುಂಡಯ್ಯ ಅಧ್ಯಕ್ಷತೆ ವಹಿಸಿದ್ದರು. ಚಂದ್ರಮುನಿ ಬಂತೇಜಿ, ಸಮಿತಿಯ ಸಹ ಕಾರ್ಯದರ್ಶಿ ಎಚ್. ಶಿವರಾಜು, ಆರ್. ನಟರಾಜು, ವಕೀಲ ರಾಜು ಹಂಪಾಪುರ, ಎಂ. ಸಾವಕಯ್ಯ, ಡಾ. ಕೃಷ್ಣಮೂರ್ತಿ, ಉಪಾಸಕರಾದ ಪುಟ್ಟಸ್ವಾಮಿ, ರಾಜಮ್ಮ, ಬಿ.ಎಂ. ಲಿಂಗರಾಜು, ರಾಜಶೇಖರ್, ಅಹಿಂದ ಜವರಪ್ಪ, ರಾಮನಗರ ಸಿದ್ದರಾಜು, ನಿಸರ್ಗ ಸಿದ್ದರಾಜು, ಡಾ. ಮಂಜು ಸತ್ತಿಗೆಹುಂಡಿ, ಕಲಾವಿದರಾದ ಆನಂದ್, ಮಹಾಲಿಂಗು, ರೂಪೇಶ್, ವಸಂತಕುಮಾರ್, ವಿಜಯಕುಮಾರ್, ಸಚಿನ್ ಮೊದಲಾದವರು ಇದ್ದರು.