ಕನ್ನಡಪ್ರಭ ವಾರ್ತೆ ಬಳ್ಳಾರಿ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ಲೇಖಕ ಹಾಗೂ ಚಿಂತಕ ಜಿ.ಪಿ. ಬಸವರಾಜ್ ಸಂಗಂ ಸಾಹಿತ್ಯ ಪುರಸ್ಕಾರಕ್ಕೆ ಆಯ್ಕೆಗೊಂಡ ಕಾದಂಬರಿ ಹೆಸರನ್ನು ಘೋಷಿಸಿದರು.
ಇದೇ ವೇಳೆ ಮಾತನಾಡಿದ ಜಿ.ಪಿ. ಬಸವರಾಜ್, ಪುರಸ್ಕಾರಕ್ಕೆ 73 ಕಾದಂಬರಿಗಳು ಬಂದಿದ್ದವು. ಈ ಪೈಕಿ ತುಂಬಾರಿ ರಾಮಯ್ಯ ಅವರ ಜಾಲ್ಗಿರಿ ಇಂದ್ರಕುಮಾರ್ ಎಚ್.ಬಿ. ಅವರ ಎತ್ತರ, ಬೆಳಗಾವಿಯ ಲತಾಗುತ್ತಿ ಅವರ ಚದುರಂಗ ಹಾಗೂ ಗುರುಪ್ರಸಾದ್ ಕಾಗಿನೆಲೆ ಅವರ ಸತ್ಕುಲ ಪ್ರಸೂತರು ಕಾದಂಬರಿಗಳು ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದವು. ತೀಪುಗಾರರಾದ ಸಿರಾಜ್ ಅಹ್ಮದ್, ತಾರಿಣಿ ಶುಭದಾಯಿನಿ, ವೆಂಕಟಗಿರಿ ದಳವಾಯಿ ತಂಡವು ಮಂಪರು ಕಾದಂಬರಿ ಅಂತಿಮಗೊಳಿಸಿದೆ ಎಂದು ತಿಳಿಸಿದರು.ಬಳಿಕ ಚೀಮನಹಳ್ಳಿ ರಮೇಶ್‌ಬಾಬು ಅವರಿಗೆ ಸಂಗಂ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರಿಗೆ ₹25 ಸಾವಿರ ನಗದು ಹಾಗೂ ನೆನಪಿನ ಸ್ಮರಣಿಕೆ ನೀಡಲಾಯಿತು. ಪ್ರಶಸ್ತಿ ಪುರಸ್ಕೃತ ಚೀಮನಹಳ್ಳಿ ರಮೇಶ್‌ಬಾಬು ಕಾದಂಬರಿ ಕುರಿತು ಮಾತನಾಡಿದರಲ್ಲದೆ, ಬಳ್ಳಾರಿಯಲ್ಲಿ ಪ್ರತಿವರ್ಷ ಹಮ್ಮಿಕೊಳ್ಳುವ ಸಂಗಂ ಪುರಸ್ಕಾರ ಸಮಾರಂಭದಿಂದ ಅನೇಕ ಮೌಲ್ವಿಕ ಕೃತಿಗಳು ನಾಡಿಗೆ ಪರಿಚಯಿಸಿದಂತಾಗುತ್ತಿದೆ. ಮಂಪರು ಕಾದಂಬರಿ ಪ್ರಶಸ್ತಿಗೆ ಆಯ್ಕೆಗೊಂಡಿರುವುದು ಹೆಚ್ಚು ಸಂತಸವಾಗಿದೆ ಎಂದು ತಿಳಿಸಿದರು.
ಟ್ರಸ್ಟ್‌ನ ಅಧ್ಯಕ್ಷ ಡಾ. ವೈ.ಸಿ. ಯೋಗಾನಂದರೆಡ್ಡಿ, ಮರ್ಚೇಡ್ ಟ್ರಸ್ಟ್ ಅಧ್ಯಕ್ಷ ಹಾಗೂ ಉದ್ಯಮಿ ಎಂ.ಜಿ. ಗೌಡ, ಹಿರಿಯ ಲೆಕ್ಕಪರಿಶೋಧಕ ಸಿರಿಗೇರಿ ಪನ್ನರಾಜ್, ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ಕವಿ ವೀರೇಂದ್ರ ರಾವಿಹಾಳ್, ಆರೀಫ್ ರಾಜಾ, ದಸ್ತಗೀರ್ ಸಾಬ್ ದಿನ್ನಿ ಮತ್ತಿತರರಿದ್ದರು.
ಎರಡು ದಿನಗಳ ಸಂಗಂ ಸಾಹಿತ್ಯ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಸಮಕಾಲೀನ ಕನ್ನಡ ಸಾಹಿತ್ಯ ಸ್ವರೂಪ ಹಾಗೂ ಸಂವೇದನೆ ಕುರಿತು ಮಾತುಕತೆ, ಸಮಕಾಲೀನ ಕನ್ನಡ ಕತೆ-ಕವಿತೆ, ಸಮಕಾಲೀನ ಕನ್ನಡ ಸಾಹಿತ್ಯ, ಸಮಕಾಲೀನ ಕನ್ನಡ ರಂಗಭೂಮಿ ಕುರಿತು ಸಂವಾದಗಳು, ನಾಡಿನ ವಿವಿಧ ಕವಿಗಳಿಂದ ಕವಿಗೋಷ್ಠಿ, ಸಂಗಂ ಸಾಹಿತ್ಯ ಪುರಸ್ಕಾರ ಅಂತಿಮ 5 ಕಾದಂಬರಿಕಾರರೊಂದಿಗೆ ಮಾತುಕತೆ ಜರುಗಿದವು. ರಾಜ್ಯದ ವಿವಿಧೆಡೆಗಳಿಂದ ಯುವ ಲೇಖಕರು ಹಾಗೂ ಕಾದಂಬರಿಕಾರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.