ಹಾವೇರಿ ಜಿಲ್ಲೆಯಲ್ಲಿ 1.08 ಲಕ್ಷ ಮತದಾರರ ಸಂಖ್ಯೆ ಇಳಿಕೆ ಸಾಧ್ಯತೆ

KannadaprabhaNewsNetwork |  
Published : Aug 01, 2026, 02:15 AM IST
ಮತದಾನ | Kannada Prabha

ಸಾರಾಂಶ

ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಮಹತ್ವದ ಹಂತ ತಲುಪಿದ್ದು, ಜಿಲ್ಲೆಯಲ್ಲಿ 1,08,641 ಮತದಾರರ ಹೆಸರುಗಳು ವಿವಿಧ ಕಾರಣಗಳಿಂದ ಮತದಾರರ ಪಟ್ಟಿಯಿಂದ ಕೈಬಿಡುವ ಸಾಧ್ಯತೆಯಿದೆ. ಮನೆ ಮನೆಗೆ ಭೇಟಿ ನೀಡಿ ಬಿಎಎಲ್‌ಒಗಳು ಸಂಗ್ರಹಿಸಿರುವ ಮಾಹಿತಿಯ ಆಧಾರದ ಮೇಲೆ ಈ ಅಂಕಿಅಂಶಗಳು ಹೊರಬಿದ್ದಿದ್ದು, ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಗಮನಾರ್ಹ ಬದಲಾವಣೆಯಾಗಲಿದೆ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ, ಹಾವೇರಿ

ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಮಹತ್ವದ ಹಂತ ತಲುಪಿದ್ದು, ಜಿಲ್ಲೆಯಲ್ಲಿ 1,08,641 ಮತದಾರರ ಹೆಸರುಗಳು ವಿವಿಧ ಕಾರಣಗಳಿಂದ ಮತದಾರರ ಪಟ್ಟಿಯಿಂದ ಕೈಬಿಡುವ ಸಾಧ್ಯತೆಯಿದೆ. ಮನೆ ಮನೆಗೆ ಭೇಟಿ ನೀಡಿ ಬಿಎಎಲ್‌ಒಗಳು ಸಂಗ್ರಹಿಸಿರುವ ಮಾಹಿತಿಯ ಆಧಾರದ ಮೇಲೆ ಈ ಅಂಕಿಅಂಶಗಳು ಹೊರಬಿದ್ದಿದ್ದು, ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಗಮನಾರ್ಹ ಬದಲಾವಣೆಯಾಗಲಿದೆ.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯಾದ್ಯಂತ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ನಡೆಯುತ್ತಿದೆ. ಅದರ ಭಾಗವಾಗಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬಿಎಲ್‌ಒಗಳು ಮನೆ ಮನೆಗೆ ತೆರಳಿ ಮತದಾರರ ವಿವರಗಳನ್ನು ಪರಿಶೀಲಿಸಿ ಎನುಮರೇಷನ್ ನಮೂನೆಗಳನ್ನು ವಿತರಿಸಿದ್ದು, ಸಂಗ್ರಹಿಸಿದ ಮಾಹಿತಿಯನ್ನು ಗಣಕೀಕರಣ ಮಾಡುವ ಕಾರ್ಯವೂ ವೇಗವಾಗಿ ಸಾಗುತ್ತಿದೆ.

ಒಟ್ಟು ಮತದಾರರಿದ್ದರು?: ಜೂ.16, 2026ರ ವೇಳೆಗೆ ಜಿಲ್ಲೆಯ ಒಟ್ಟು ಮತದಾರರ ಸಂಖ್ಯೆ 13,35,342 ಆಗಿತ್ತು. ಈ ಪಟ್ಟಿಯನ್ನು ಪರಿಶೀಲಿಸಿದಾಗ ಹಲವರು ಈಗಾಗಲೇ ಮೃತಪಟ್ಟಿರುವುದು, ಬೇರೆ ಜಿಲ್ಲೆ ಅಥವಾ ರಾಜ್ಯಗಳಿಗೆ ಶಾಶ್ವತವಾಗಿ ವಲಸೆ ಹೋಗಿರುವುದು, ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಹೆಸರು ಹೊಂದಿರುವುದು ಹಾಗೂ ಕೆಲವರ ವಿವರಗಳು ಲಭ್ಯವಾಗದಿರುವುದು ಬೆಳಕಿಗೆ ಬಂದಿದೆ.

ಸಂಗ್ರಹಿಸಿದ ಮಾಹಿತಿಯ ಪ್ರಕಾರ ಒಟ್ಟು 1,08,641 ಮತದಾರರ ಹೆಸರುಗಳನ್ನು ಕೈಬಿಡುವ ಪ್ರಸ್ತಾವನೆ ಇದೆ. 55,694 ಮತದಾರರು ಶಾಶ್ವತ ವಲಸೆ, 31,805 ಮತದಾರರು ಮರಣ, 16,636 ದ್ವಿಪ್ರತಿ (ಒಂದೇ ವ್ಯಕ್ತಿಯ ಹೆಸರು ಎರಡು ಕಡೆ), ಮನೆಗೆ ಭೇಟಿ ನೀಡಿದಾಗ ಮಾಹಿತಿ ಸಂಗ್ರಹವಾಗದವರು ಅಥವಾ ಗೈರು 4,107, ಇತರೆ ಕಾರಣಗಳು 399 ಸೇರಿದಂತೆ 1.08 ಲಕ್ಷ ಮತದಾರರು ಜಿಲ್ಲೆಯಲ್ಲಿ ಇಲ್ಲದಿರುವುದು ಬೆಳಕಿಗೆ ಬಂದಿದೆ.

ಈ ಅಂಕಿಅಂಶಗಳಲ್ಲಿ ಶಾಶ್ವತ ವಲಸೆ ಪ್ರಕರಣಗಳೇ ಅತಿ ಹೆಚ್ಚು ಎಂಬುದು ಗಮನಾರ್ಹ. ಉದ್ಯೋಗ, ಶಿಕ್ಷಣ, ವ್ಯಾಪಾರ ಹಾಗೂ ಇತರ ಕಾರಣಗಳಿಂದ ಬೇರೆ ಜಿಲ್ಲೆ ಅಥವಾ ರಾಜ್ಯಗಳಿಗೆ ತೆರಳಿರುವವರ ಸಂಖ್ಯೆ ಹೆಚ್ಚಿರುವುದು ಇದರಿಂದ ಸ್ಪಷ್ಟವಾಗುತ್ತದೆ.

ಮೃತಪಟ್ಟವರ ಹೆಸರು: ಪರಿಷ್ಕರಣೆ ವೇಳೆ 31,805 ಮಂದಿ ಮೃತಪಟ್ಟಿದ್ದರೂ ಅವರ ಹೆಸರುಗಳು ಇನ್ನೂ ಮತದಾರರ ಪಟ್ಟಿಯಲ್ಲಿದ್ದವು ಎಂಬುದು ದಾಖಲೆ ಪರಿಶೀಲನೆಯಿಂದ ತಿಳಿದುಬಂದಿದೆ. ಮರಣ ನೋಂದಣಿ ಹಾಗೂ ಮತದಾರರ ಪಟ್ಟಿಯ ಸಮನ್ವಯದ ಮೂಲಕ ಇಂತಹ ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆ ನಡೆಯುತ್ತಿದೆ.

ಇನ್ನು ಒಟ್ಟು 16,636 ದ್ವಿಪ್ರತಿ ದಾಖಲೆಗಳು ಪತ್ತೆಯಾಗಿವೆ. ಕೆಲ ಮತದಾರರು ಸ್ಥಳಾಂತರಗೊಂಡ ಬಳಿಕ ಹೊಸ ಸ್ಥಳದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಂಡಿದ್ದರೂ, ಹಳೆಯ ಸ್ಥಳದ ಪಟ್ಟಿಯಿಂದ ಹೆಸರು ತೆಗೆಸದೇ ಉಳಿದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಚುನಾವಣಾ ಆಯೋಗ ಇಂತಹ ದಾಖಲೆಗಳನ್ನು ಅಳಿಸಿ ಒಂದೇ ವ್ಯಕ್ತಿಗೆ ಒಂದೇ ಮತದಾರರ ಗುರುತನ್ನು ಖಚಿತಪಡಿಸುತ್ತಿದೆ.

ಜುಲೈ ಅಂತ್ಯದವರೆಗೆ 12.17 ಲಕ್ಷಕ್ಕೂ ಹೆಚ್ಚು ದಾಖಲೆಗಳು ಗಣಕೀಕರಣಗೊಂಡಿದ್ದರೂ, ಇನ್ನೂ ಕೆಲವು ನಮೂನೆಗಳ ಪರಿಶೀಲನೆ ಮತ್ತು ದಾಖಲಾತಿ ಬಾಕಿಯಿದೆ. ಈ ಪ್ರಕ್ರಿಯೆ ಆ.8ರವರೆಗೆ ನಡೆಯಲಿದ್ದು, ನಂತರ ಅಂತಿಮ ಪರಿಶೀಲನೆ ನಡೆಸಿ ಕರಡು ಹಾಗೂ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಮತದಾರರ ಪಟ್ಟಿಯಲ್ಲಿ ಮೃತಪಟ್ಟವರು, ಶಾಶ್ವತವಾಗಿ ವಲಸೆ ಹೋದವರು ಹಾಗೂ ದ್ವಿಪ್ರತಿ ದಾಖಲೆಗಳನ್ನು ತೆಗೆದುಹಾಕುವ ಮೂಲಕ ದೋಷರಹಿತ, ನಿಖರ ಮತ್ತು ಪಾರದರ್ಶಕ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಚುನಾವಣಾ ಆಯೋಗದ ಪ್ರಮುಖ ಉದ್ದೇಶವಾಗಿದೆ. ಇದರಿಂದ ಚುನಾವಣೆ ವೇಳೆ ನಕಲಿ ಮತದಾನಕ್ಕೆ ಅವಕಾಶ ಕಡಿಮೆಯಾಗುವುದರ ಜೊತೆಗೆ ಅರ್ಹ ಮತದಾರರಿಗೆ ಮತದಾನದ ಹಕ್ಕು ಸುಗಮವಾಗಿ ದೊರೆಯಲಿದೆ.

ಈವರೆಗೆ 12,17,110 ಮತದಾರರ ವಿವರಗಳನ್ನು ಗಣಕೀಕರಣ ಮಾಡಲಾಗಿದೆ. ಜಿಲ್ಲೆಯ ಎಲ್ಲ ಅರ್ಹ ಮತದಾರರಿಗೆ ಶೇ.100ರಷ್ಟು ಎನುಮರೇಷನ್ ನಮೂನೆಗಳನ್ನು ವಿತರಿಸಲಾಗಿದೆ. ಉಳಿದ ಮಾಹಿತಿಯ ಪರಿಶೀಲನೆ ಹಾಗೂ ಗಣಕೀಕರಣ ಕಾರ್ಯ ಆ.8ರ ವರೆಗೆ ಮುಂದುವರಿಯಲಿದೆ. ಯಾವುದೇ ದೋಷ ಕಂಡುಬಂದಲ್ಲಿ ಅಥವಾ ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ವರ್ಗಾವಣೆಯ ಅಗತ್ಯವಿದ್ದಲ್ಲಿ ಸಂಬಂಧಿಸಿದ ಬೂತ್ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳನ್ನು ಸಲ್ಲಿಸಬಹುದಾಗಿದೆ. ಆ.8ರ ವರೆಗೆ ಎಸ್‌ಐಆರ್‌ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಪ್ಪಳ ಜಿಲ್ಲೆಯಲ್ಲಿ ಯಾರಿಗೆ ಸಿಗಲಿದೆ ಸಚಿವ ಸ್ಥಾನದ ಪಟ್ಟ
ಜಿಐಎಸ್‌ ಸರ್ವೇ ಪೂರ್ಣ, ಪೌರಕಾರ್ಮಿಕರಿಗೆ ಸಕಾಲಕ್ಕೆ ವೇತನ: ಮೇಯರ್‌ ಬಿಜವಾಡ ಭರವಸೆ