)
- ಜಿಲ್ಲಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿಕೆ ।- ಹೊನ್ನಾಳಿಯ ಗೊಲ್ಲರಹಳ್ಳಿ ಶ್ರೀ ತರಳಬಾಳು ಸಮುದಾಯ ಭವನದಲ್ಲಿ ಚಾಲನೆ
ಜನರು ತಮ್ಮ ಸಮಸ್ಯೆಗಳಿಗಾಗಿ ಅರ್ಜಿಗಳನ್ನು ಹಿಡಿದು ಕಚೇರಿಗಳಿಗೆ ಅಲೆದಾಡಬಾರದು. ಬದಲಿಗೆ ಸರ್ಕಾರಿ ಆಡಳಿತವೇ ಜನರ ಮನೆ ಬಾಗಿಲಿಗೆ ಹೋಗಿ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎನ್ನುವ ಸದ್ದುದ್ದೇಶದಿಂದ ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಮನೆಬಾಗಿಲಿಗೆ ಬಂದಿದೆ ಸರ್ಕಾರ, ಇರಲಿ ಜನರ ಸಹಕಾರ ಎಂಬ ಘೋಷವಾಕ್ಯದೊಂದಿಗೆ ನೂತನವಾದ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.ಜಿಲ್ಲಾ ಮತ್ತು ತಾಲೂಕು ಆಡಳಿತಗಳಿಂದ ಶನಿವಾರ ತಾಲೂಕಿನ ಗೊಲ್ಲರಹಳ್ಳಿ ಶ್ರೀತರಳಬಾಳು ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸರ್ಕಾರದ ಮತ್ವಾಕಾಂಕ್ಷಿ ಯೋಜನೆ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಚುನಾವಣೆಯಲ್ಲಿ 136 ಸ್ಥಾನಗಳಲ್ಲಿ ಪಕ್ಷವನ್ನು ಮತದಾರರು ಗೆಲ್ಲಿಸಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತಂದಿದ್ದಾರೆ. ಶಕ್ತಿ ಯೋಜನೆ, ಅನ್ನಭಾಗ್ಯ ವೃದ್ಧಾಪ್ಯವೇತನ, ಅಂಗವಿಕಲ, ಗೃಹಲಕ್ಷ್ಮಿ ಯೋಜನೆಗಳು ಸರ್ಕಾರದ ಆಶಯದಂತೆ ಎಲ್ಲ ಅರ್ಹ ಫಲಾನುಭವಿಗಳಿಗೆ ಸೂಕ್ತ ರೀತಿಯಲ್ಲಿ ತಲುಪಿಸುವಲ್ಲಿ ಅಧಿಕಾರಿಗಳು ಸ್ಪಂದಿಸಿ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ನ್ಯಾಮತಿ ತಾಲೂಕಿನಲ್ಲಿ ಕೂಡ ಈ ಪ್ರಜಾ ಸೇವೆ ಕಾರ್ಯಕ್ರಮ ನಡೆಸುವಂತೆ ಸ್ಥಳೀಯ ಶಾಸಕ ಡಿ.ಜಿ. ಶಾಂತನಗೌಡ ಮನವಿ ಮಾಡಿದ್ದಾರೆ. ಅದರಂತೆ ನ್ಯಾಮತಿ ತಾಲೂಕಿನಲ್ಲಿ ಕೂಡ ಪ್ರಜಾ ಸೇವೆ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.ಸರ್ಕಾರ ಘೋಷಣೆ ಮಾಡಿರುವ ಬರಪೀಡಿತ ತಾಲೂಕುಗಳಲ್ಲಿ ಈಗಾಗಲೇ ಹೊನ್ನಾಳಿ ನ್ಯಾಮತಿ, ಚನ್ನಗಿರಿ ತಾಲೂಕುಗಳು ಸೇರಿವೆ. ಇನ್ನು ಜಗಳೂರು, ಹರಿಹರ ತಾಲೂಕುಗಳನ್ನು 2ನೇ ಪಟ್ಟಿಯಲ್ಲಿ ಸೇರಿಸುವ ನಿರೀಕ್ಷೆ ಇದೆ. ಅಂತಿಮವಾಗಿ ಬರಪೀಡಿತ ಪ್ರದೇಶಗಳ ಪಟ್ಟಿ ಘೋಷಣೆ ಮಾಡುವುದು ಕೇಂದ್ರ ಸರ್ಕಾರವಾಗಿದೆ ಎಂದು ಹೇಳಿದರು.ಜಿಲ್ಲೆಯಲ್ಲಿ ಕೆಲ ಶಾಸಕರು ಪ್ರಥಮ ಬಾರಿಗೆ ಗೆದ್ದಿದ್ದರೂ ಅನುಭವ ಇರುವ ಹಿರಿಯ ಶಾಸಕರನ್ನು ಲೆಕ್ಕಿಸದೇ ಮಾತನಾಡುತ್ತಿದ್ದಾರೆ. ಮೊದಲು ಅವರು ಹಾಗೆ ಮಾತನಾಡುವುದನ್ನು ಬಿಟ್ಟು ಜನರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿ ಎಂದು ಹೇಳಿದರು.ಜಿಲ್ಲೆಯ ಒಟ್ಟು 4 ತಾಲೂಕುಗಳಲ್ಲಿ ಉಂಟಾಗಿರುವ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಒಟ್ಟು ₹469 ಕೋಟಿ ಪರಿಹಾರ ನೀಡುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಜಿಲ್ಲಾಡಳಿತದಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲೆಯ 31,000 ರೈತರಿಗೆ ₹42 ಕೋಟಿ ಬೆಳೆ ವಿಮೆ ಪರಿಹಾರವನ್ನು ಶೀಘ್ರವೇ ತಲುಪಿಸಲು ಅಗತ್ಯ ಕ್ರಮ ಹಾಗೂ ಪ್ರಸ್ತಾವನೆಗಳನ್ನು ಸಿದ್ಧಪಡಿಸಲಾಗಿದೆ. ಮಳೆ ಕೊರತೆ ಮತ್ತು ಬೆಳೆ ಹಾನಿಯ ನಿಖರ ಸಮೀಕ್ಷೆಗಾಗಿ ವಿಶೇಷ ತಂತ್ರಜ್ಞಾನವನ್ನು ಬಳಸಿಕೊಂಡು, ಪ್ರತಿಯೊಬ್ಬ ಸಂತ್ರಸ್ತ ರೈತನಿಗೂ ನ್ಯಾಯಯುತ ಪರಿಹಾರ ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ಮೇಲೆ ಜನಪರವಾದ ಪ್ರಜಾ ಸೇವೆ ಆಂದೋಲನದಂತಹ ವಿನೂತನ ಕಾರ್ಯಕ್ರಮ ರೂಪಿಸಿ, ಇದಕ್ಕಾಗಿ ಪ್ರತ್ಯೇಕ ಇಲಾಖೆ ಆರಂಭಿಸಿ ತನ್ಮೂಲಕ ಜಾರಿಗೆ ತಂದಿದ್ದಾರೆ. ಇದರಿಂದ ಗ್ರಾಮೀಣ ಜನತೆ ಹಚ್ಚು ಅನುಕೂಲವಾಗಲಿದೆ. ಸರ್ಕಾರಿ ಸೇವೆಗಳು ಮತ್ತು ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ಸಾರ್ವಜನಿಕರಿಗೆ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಇಲಾಖೆಗಳ ಸೌಲಭ್ಯಗಳನ್ನು ಒಂದೇ ವೇದಿಕೆಯಲ್ಲಿ ತಲುಪಿಸುವ ಉದ್ದೇಶದಿಂದ ಪ್ರಜಾ ಸೇವಾ ಆಂದೋಲನ ಆಯೋಜಿಸಲಾಗಿದೆ. ಇದು ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕನಸಿನ ಕೂಸಾಗಿದೆ ಎಂದು ಹೇಳಿದರು.
- - -(ಬಾಕ್ಸ್)
ಪ್ರಜಾ ಸೇವಾ ಆಂದೋಲನದ ಅರ್ಜಿ ಸ್ವೀಕಾರ ಸಂದರ್ಭದಲ್ಲಿ ಕುಡಿಯುವ ನೀರು, ಬೀದಿದೀಪ, ರಸ್ತೆ ಹಾಗೂ ಗ್ರಾಮದ ಸಮಸ್ಯೆಗಳ ಅರ್ಜಿಗಳಿಗಿಂತ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಸೌಲಭ್ಯಗಳು ಸೇರಿದಂತೆ ವೈಯಕ್ತಿಕ ವಸತಿ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ ಇಂತಹ ಅರ್ಜಿಗಳೇ ಹೆಚ್ಚು ಸ್ವೀಕೃತವಾದವು.