ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಕಾರು ಹರಿದು ಅಂಗವಿಕಲ ವೃದ್ಧ ಭಿಕ್ಷುಕ ಸ್ಥಳದಲ್ಲೆ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಶನಿವಾರಸಂತೆ ಪಟ್ಟಣದಲ್ಲಿ ನಡೆದಿದೆ. ಸಾಲಿಗ್ರಾಮ ಮೂಲದ ಕೃಷ್ಣೇಗೌಡ (58) ಮೃತರು. ಸಾಲಿಗ್ರಾಮದ ಗಂಗೂರು ಗ್ರಾಮದವರಾದ ಕೃಷ್ಣೇಗೌಡ ಅಂಗವಿಕಲರಾಗಿದ್ದು ಕೆಲವು ದಿನಗಳಿಂದ ಪಟ್ಟಣದಲ್ಲಿ ಭಿಕ್ಷೆ ಯಾಚಿಸುತ್ತಿದ್ದರು. ಶುಕ್ರವಾರ ಸಂಜೆ ಕೃಷ್ಣೇಗೌಡ ಪಟ್ಟಣದ ಕೆಆರ್‌ಸಿ ವೃತ್ತದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಪಘಾತ ಸಂಭವಿಸಿತು. ಶ್ರೀರಂಗಪಟ್ಟಣ ಮೂಲದ ಕಾರು ಸುಬ್ರಹ್ಮಣ್ಯ ಕಡೆಗೆ ಹೋಗುತ್ತಿದ್ದ ವೇಳೆ ರಸ್ತೆ ದಾಟುತ್ತಿದ್ದ ಕೃಷ್ಣೇಗೌಡ ಅವರ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲೆ ಮೃತಪಟ್ಟರು. ಕಾರು ಶ್ರೀರಂಗಪಟ್ಟಣದ ಪುರುಷೋತ್ತಮ ಅವರಿಗೆ ಸೇರಿದ ಕಾರಾಗಿದ್ದು ಪೊಲೀಸರು ಪುರುಷೋತ್ತಮನನ್ನು ಬಂಧಿಸಿ, ಕಾರನ್ನು ವಶ ಪಡಿಸಿಕೊಂಡಿದ್ದಾರೆ. ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಳ್ಳಬಟ್ಟಿ ಮಾರಾಟ ಆರೋಪಿ ಬಂಧನ:
ಮಾಲ್ದಾರೆ ವ್ಯಾಪ್ತಿಯಲ್ಲಿ ಕಳ್ಳಬಟ್ಟಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಮುತ್ತೂರು ಗ್ರಾಮದಲ್ಲಿ ವಾಸವಿರುವ ಗೂಡ್ಲೂರು ನಿವಾಸಿ ಪಿ.ಜಿ. ಸತೀಶ್ ಬಂಧಿತ ಆರೋಪಿ. ಈತ ಮಾರಾಟಕ್ಕೆ ಬಳಸಿದ ಕಾರು ಮತ್ತು ಇತರ ಪಾತ್ರೆಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯ ಕಲ್ಲಳ ಗೇಟ್ ಹಾಡಿಯಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮಾಲ್ದಾರೆ ಗೇಟ್ ಸಮೀಪ ಪಿ.ಜಿ. ಸತೀಶ್‌ನನ್ನು ಬಂಧಿಸಿತು. ಮಾರಾಟಕ್ಕೆ ಬಳಸಿದ್ದ ವಾಹನ ಸಹಿತ ಸಾಮಾಗ್ರಿಗಳನ್ನು ಪೊಲೀಸರು ವಶಪಡಿಸಿದ್ದಾರೆ.ಗ್ರಾಮಸ್ಥರ ಆರೋಪ:ಇತ್ತೀಚೆಗೆ ಮಾಲ್ದಾರೆ ಪೊಲೀಸ್ ಬೀಟ್ ಸಭೆ ಹಾಗೂ ಗ್ರಾಮ ಸಭೆಗಳಲ್ಲಿ ಹಾಡಿ ಪ್ರದೇಶದಲ್ಲಿ ಕಳ್ಳಬಟ್ಟಿ ಮಾರಾಟ ದಂದೆ ನಡೆಯುತ್ತಿರುವುದಾಗಿ ಗ್ರಾಮಸ್ಥರು ಸಭೆಯಲ್ಲಿ ಆರೋಪಿಸಿದ್ದು, ಬೀಟ್ ವ್ಯವಸ್ಥೆ ಸುಧಾರಿಸಬೇಕೆಂದು ಮನವಿ ಮಾಡಿದ್ದರು. ಇದೀಗ ಗ್ರಾಮಸ್ಥರ ಆರೋಪದಂತೆ ಕಳ್ಳಬಟ್ಟಿ ಮಾರಾಟ ಪತ್ತೆಹಚ್ಚುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ನೇತೃತ್ವದಲ್ಲಿ ಸಹಾಯಕ ಠಾಣಾಧಿಕಾರಿ ಶ್ರೀನಿವಾಸ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದರು.