ಪಾಂಡವಪುರ : ಮರ ಕತ್ತರಿಸುವ ಯಂತ್ರದಿಂದ ವೃದ್ಧನ ರುಂಡವನ್ನು ಕಡಿದು ಬರ್ಬರವಾಗಿ ಹತ್ಯೆ

KannadaprabhaNewsNetwork | Updated : Dec 23 2024, 09:33 AM IST

ಸಾರಾಂಶ

ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಒಂಟಿ ಮನೆಗೆ ತೆರಳಿ, ದರೋಡೆ ಮಾಡಲು ಯತ್ನಿಸಿ, ಮನೆಯ ಮಾಲೀಕ ರಮೇಶ್‌ ನನ್ನು ಮರ ಕತ್ತರಿಸುವ ಯಂತ್ರದಿಂದ ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣದ ಆರೋಪಿ ಮೊಹಮದ್ ಇಬ್ರಾಹಿಂಗೆ ಆನ್‌ಲೈನ್ ಗೇಮ್ ಆಡುವ ಚಟವಿತ್ತು.

 ಪಾಂಡವಪುರ : ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಒಂಟಿ ಮನೆಗೆ ತೆರಳಿ, ದರೋಡೆ ಮಾಡಲು ಯತ್ನಿಸಿ, ಮನೆಯ ಮಾಲೀಕ ರಮೇಶ್‌ ನನ್ನು ಮರ ಕತ್ತರಿಸುವ ಯಂತ್ರದಿಂದ ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣದ ಆರೋಪಿ ಮೊಹಮದ್ ಇಬ್ರಾಹಿಂಗೆ ಆನ್‌ಲೈನ್ ಗೇಮ್ ಆಡುವ ಚಟವಿತ್ತು. ಇದರಿಂದ ಆತ ಲಕ್ಷಾಂತರ ರು.ಸಾಲ ಮಾಡಿದ್ದು, ಸಾಲದ ಸುಳಿಗೆ ಸಿಲುಕಿದ್ದ. ಹೀಗಾಗಿ, ಒಂಟಿ ಮನೆಗಳನ್ನು ಗುರಿಯಾಗಿಸಿಕೊಂಡು ದರೋಡೆಗೆ ಯತ್ನಿಸಿ ಕೊಲೆ ಮಾಡಿ ಸಿಕ್ಕಿ ಬಿದ್ದ ಎಂಬ ಸಂಗತಿ ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿದೆ.

ಆರೋಪಿ ಇಬ್ರಾಹಿಂ, ಶ್ರೀರಂಗಪಟ್ಟಣದ ನಿವಾಸಿ. ಶನಿವಾರ ಕೆನ್ನಾಳು ಗ್ರಾಮದ ಹಲವು ಒಂಟಿ ಮನೆಗಳಲ್ಲಿ ದರೋಡೆ ಮಾಡಲು ಸಂಚು ರೂಪಿಸಿದ್ದ ಈತ ಎರಡು ಮನೆಗಳಿಗೆ ತೆರಳಿ ನಿಮ್ಮ ಮನೆಯವರು ಮರ ಕತ್ತರಿಸುವ ಯಂತ್ರವನ್ನು ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿದ್ದಾರೆ ಎಂದು ತಿಳಿಸಿದ್ದ. ಆ ಮನೆಯಲ್ಲಿ ಅನುಮಾನಗೊಂಡ ಮಹಿಳೆಯರು ಬೇಡ ಎಂದು ಹೇಳಿ ಆತನನ್ನು ವಾಪಸ್ ಕಳುಹಿಸಿದ್ದರು. ಅಲ್ಲದೆ, ಆ ಮನೆಗಳಲ್ಲಿ ಹೆಚ್ಚು ಜನರಿರುವುದನ್ನು ಕಂಡು ವಾಪಸ್ ಬಂದಿದ್ದ. ಆತ ಹಲವು ಮನೆಗಳಿಗೆ ಹೋಗಿ ಬಂದಿರುವುದು ಸಿಸಿಟಿವಿಗಳಲ್ಲಿ ದಾಖಲಾಗಿದೆ.

ನಂತರ ಸಂಜೆ ಕ್ಯಾತನಹಳ್ಳಿ ಸಮೀಪ ಇದ್ದ ರಮೇಶ್ ಎಂಬುವರ ಮನೆಗೆ ಮರ ಕತ್ತರಿಸುವ ಯಂತ್ರದೊಂದಿಗೆ ತೆರಳಿದ್ದ. ಮನೆ ಮಾಲೀಕ ರಮೇಶ್ ಪಾರ್ಶ್ವವಾಯುಗೆ ಸಿಲುಕಿ ಅನಾರೋಗ್ಯದಿಂದ ಮನೆ ಒಳಗಡೆ ಮಲಗಿದ್ದ ವೇಳೆ ಮನೆ ಹೊರಗಡೆ ನಿಂತಿದ್ದ ಯಶೋಧಮ್ಮ ಅವರಿಗೆ ನಿಮ್ಮ ಗಂಡ ಮರ ಕತ್ತರಿಸುವ ಯಂತ್ರವನ್ನು ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಿದ್ದಾರೆ. ಅದು ಈಗ ಬಂದಿದೆ ತೆಗೆದುಕೊಳ್ಳಿ ಎಂದು ಹೇಳಿ ಏಕಾಏಕಿ ಮಷಿನ್ ಆನ್‌ ಮಾಡಿ ಯಶೋಧಮ್ಮ ಅವರ ಕುತ್ತಿಗೆ ಕತ್ತರಿಸಲು ಮುಂದಾದ.

ಈ ವೇಳೆ ಯಶೋಧಮ್ಮ ಯಂತ್ರವನ್ನು ಕೈಯಿಂದ ತಳ್ಳಿದ ಪರಿಣಾಮ ಮಿಷನ್ ಆಕೆಯ ಮುಖಭಾಗವನ್ನು ಕತ್ತರಿಸಿದೆ. ಆ ವೇಳೆ ಪ್ರಜ್ಞೆತಪ್ಪಿ ಯಶೋಧಮ್ಮ ಕೆಳಗೆ ಬೀಳುತ್ತಿದ್ದಂತೆಯೇ ಮನೆ ಒಳಗಡೆ ನುಗ್ಗಿದ ಆರೋಪಿ, ರಮೇಶ್‌ನನ್ನು ಮರ ಕತ್ತರಿಸುವ ಯಂತ್ರದಿಂದ ಭೀಕರವಾಗಿ ಕೊಲೆ ಮಾಡಿದ್ದಾನೆ.

ಈ ವೇಳೆ ಎಚ್ಚರಗೊಂಡ ಯಶೋಧಮ್ಮ ತಕ್ಷಣವೇ ಮನೆ ಬಾಗಿಲು ಹಾಕಿಕೊಂಡು ಅಕ್ಕಪಕ್ಕದ ಮನೆಯವರು, ಕೆಲಸ ಮಾಡುತ್ತಿದ್ದವರನ್ನು ಕೂಗಿ ಕರೆದಿದ್ದಾಳೆ. ಈ ವೇಳೆ, ಆತ ಬಾಗಿಲನ್ನು ಯಂತ್ರದಿಂದ ಕತ್ತರಿಸಿ ಮನೆಯಿಂದ ಹೊರಗಡೆ ಬರಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಸ್ಥಳೀಯರು ಓಡಿ ಬಂದ ಹಿನ್ನೆಲೆಯಲ್ಲಿ ಆರೋಪಿ ಸಾರ್ವಜನಿಕರಿಗೆ ಸಿಕ್ಕಿಬಿದ್ದಿದ್ದಾನೆ. ಸ್ಥಳೀಯರು ಆತನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಯಶೋಧಮ್ಮನನ್ನು ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿಗೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಪೊಲೀಸರು ಆತನನ್ನು ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರು ಪಡಿಸಿದ್ದಾರೆ. ನ್ಯಾಯಾಧೀಶರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Share this article