- ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ ಆಶೀರ್ವಚನ
ಕನ್ನಡಪ್ರಭ ವಾರ್ತೆ ದಾವಣಗೆರೆ ಲಿಂಗೈಕ್ಯ ಶ್ರೀ ಗುರು ಅನ್ನದಾನ ಮಹಾಶಿವಯೋಗಿಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲೇ ಪ್ರಸಾದ ನಿಲಯಗಳನ್ನು ಸ್ಥಾಪಿಸಿದ್ದರು. ಸ್ವಾತಂತ್ರ್ಯ ಬಳಿಕ ರಾಜ್ಯದಲ್ಲಿ ಶ್ರೀಮಠದ 12 ಪ್ರಸಾದ ನಿಲಯಗಳಿವೆ. 60 ದಶಕದಲ್ಲಿ ಸಾವಿರಾರು ಮಕ್ಕಳು ಉಚಿತ ಶಿಕ್ಷಣದ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಹಾಲಕೆರೆ ಶ್ರೀ ಅನ್ನದಾನೀಶ್ವರ ಸಂಸ್ಥಾನ ಮಠದ ಜಗದ್ಗುರು ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ ನುಡಿದರು.
ಇಲ್ಲಿನ ದೇವರಾಜ ಅರಸು ಬಡಾವಣೆಯ ಅನ್ನದಾನೀಶ್ವರ ಶಾಖಾಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ, ಲಿಂ. ಶ್ರೀಗುರು ಅನ್ನದಾನ ಮಹಾ ಶಿವಯೋಗಿಗಳ 49ನೇ ಹಾಗೂ ಲಿಂ. ಡಾ.ಅಭಿನವ ಅನ್ನದಾನ ಸ್ವಾಮಿಗಳ 4ನೇ ವರ್ಷದ ಪುಣ್ಯಾರಾಧನೆ, 283ನೇ ಶಿವಾನುಭವ ಸಂಪದ 501 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಸ್ವಾತಂತ್ರ್ಯ ಪೂರ್ವದಲ್ಲಿದ್ದ ಬಡತನ, ದಾರಿದ್ರ್ಯ ಅಜ್ಞಾನ ಓಡಿಸಲು ಬೆತ್ತದಜ್ಜ ಅವರು ಜ್ಞಾನದೀಪ ಹಚ್ಚಿದರು. ಸರ್ಕಾರದ ಅನುದಾನ ಇಲ್ಲದ ಕಾಲದಲ್ಲೇ ಶಾಲಾ- ಕಾಲೇಜುಗಳನ್ನು ನಿರ್ವಹಿಸಿದರು. ಯಾರಲ್ಲೂ ಭಿಕ್ಷೆ ಬೇಡಲಿಲ್ಲ. ಅವರು ಓಡಾಡಿದರೂ ಭಕ್ತರಿಂದ ಸಾವಿರಾರು ಚೀಲ ಅಕ್ಕಿ, ಜೋಳ ಬರುತ್ತಿದ್ದವು ಎಂದರು.
ಅನ್ನದಾನೀಶ್ವರ ಸಾರ್ವಜನಿಕ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ಅಥಣಿ ಎಸ್. ವೀರಣ್ಣ ಮಾತನಾಡಿ, ಹಿರಿಯ ಶ್ರೀಗಳು ನಾಟಕ ಕಂಪನಿ ಕಾರ್ಯಕ್ರಮ ಉದ್ಘಾಟನೆಗೆ ಬಂದಾಗ ದಾವಣಗೆರೆಗೆ ಶಾಖಾಮಠದ ಯೋಗ ಒಲಿಯಿತು. ಇಲ್ಲಿ ಉದ್ದೇಶಿತ ಕಲ್ಯಾಣ ಮಂಟಪಕ್ಕೆ ಇನ್ನೂ ₹2 ಕೋಟಿ ಅಗತ್ಯವಿದೆ. ಎಸ್.ಎಸ್., ಎಸ್ಸೆಸ್ಸೆಂ ಅವರ ಬಳಿ ಅನುದಾನ, ದೇಣಿಗೆ ಪಡೆಯುವ ಪ್ರಯತ್ನ ನಡೆಸಲಾಗುವುದು ಎಂದರು.
- - -
- ಜಗದ್ಗುರು ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ, ಶ್ರೀ ಅನ್ನದಾನೀಶ್ವರ ಮಠ
ದಾವಣಗೆರೆಯಲ್ಲಿ ಲಿಂ. ಶ್ರೀ ಗುರು ಅನ್ನದಾನ ಮಹಾ ಶಿವಯೋಗಿಗಳ, ಲಿಂ. ಡಾ. ಅಭಿನವ ಅನ್ನದಾನ ಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮವನ್ನು ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಉದ್ಘಾಟಿಸಿದರು. ವಿವಿಧ ಗಣ್ಯರು ಇದ್ದರು.