ನನ್ನ ಕಂಡರೆ ವಿರೋಧ ಪಕ್ಷಕ್ಕೆ ಅಸೂಯೆ : ಡಿ.ಕೆ.ಶಿವಕುಮಾರ್‌ ಆರೋಪ

KannadaprabhaNewsNetwork |  
Published : Jun 11, 2026, 02:45 AM IST
 DK Shivakumar

ಸಾರಾಂಶ

ಕೆಲವರಿಗೆ ನಾನು ಮುಖ್ಯಮಂತ್ರಿ ಆಗಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅಸೂಯೆ ರಾಜಕೀಯ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಗಂಭೀರ ಆರೋಪ ಮಾಡಿದ್ದಾರೆ.

 ನವದೆಹಲಿ :  ಕೆಲವರಿಗೆ ನಾನು ಮುಖ್ಯಮಂತ್ರಿ ಆಗಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅಸೂಯೆ ರಾಜಕೀಯ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯದ ಹಲವು ಅಭಿವೃದ್ಧಿ ಯೋಜನೆಗಳ ಕುರಿತು ಕೇಂದ್ರ ನಾಯಕರು ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಲು, ಕಾಂಗ್ರೆಸ್‌ ವರಿಷ್ಠ ನಾಯಕರನ್ನು ಭೇಟಿಯಾಗಿ ಧನ್ಯವಾದ ಅರ್ಪಿಸಲು ಆಗಮಿಸಿರುವ ಡಿಕೆಶಿ, ದೆಹಲಿಯಲ್ಲಿ ಬುಧವಾರ ಸಂಜೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಮುಖ್ಯಮಂತ್ರಿ ಆಗಿರುವುದನ್ನು ಅವರಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ

ಬೆಂಗಳೂರಿನ ಕಸದ ಟೆಂಡರ್‌ ವಿಚಾರವಾಗಿ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪ ಹಾಗೂ ಇದೇ ವಿಷಯವಾಗಿ ರಾಜ್ಯದ ಬಿಜೆಪಿ ನಾಯಕರು ರಾಜ್ಯಪಾಲರನ್ನು ಭೇಟಿಯಾದ ವಿಚಾರವಾಗಿ ಪ್ರತಿಕ್ರಿಯಿಸಿ, ‘ನಾನು ಮುಖ್ಯಮಂತ್ರಿ ಆಗಿರುವುದನ್ನು ಅವರಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಆರೋಪಿಸಿದರು. ಅವರ ಪಕ್ಷ, ಬೇರೆ ಪಕ್ಷಗಳಲ್ಲಿ ಏನಾಗುತ್ತಿದೆ ಎಂದು ನನಗೆ ಗೊತ್ತಿದೆ. ಅವರಿಗೆ ಈ ರೀತಿ ಆರೋಪ ಮಾಡಲು ಏನು ಒತ್ತಡವಿದೆಯೋ ಗೊತ್ತಿಲ್ಲ, ಆರೋಪ ಮಾಡಲಿ, ನನಗೆ ಯಾವ ತೊಂದರೆಯೂ ಇಲ್ಲ ಎಂದರು.

ನೀತಿ ಆಯೋಗದ ಸಭೆ ವಿವಾದಕ್ಕೆ ಕಾರಣವಾಗಿತ್ತು

ಕಳೆದ ಬಾರಿ ನೀತಿ ಆಯೋಗದ ಸಭೆ ವಿವಾದಕ್ಕೆ ಕಾರಣವಾಗಿತ್ತು ಎಂಬ ವಿಷಯಕ್ಕೆ ಪ್ರತಿಕ್ರಿಯಿಸಿ, ಗುರುವಾರ ನೀತಿ ಆಯೋಗದ ಸಭೆ ಇದೆ. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಭೆಗೆ ಕರೆದಿದ್ದಾರೆ. ನಾನು ಮೊದಲ ಬಾರಿಗೆ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಬಂದಿರುವೆ. ನಮ್ಮ ರಾಜ್ಯದ ಹಿತಾಸಕ್ತಿಯ ವಿಚಾರಗಳನ್ನು ಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ. ಪ್ರಧಾನಿಯವರು ನಾನು ಅಧಿಕಾರ ಸ್ವೀಕರಿಸಿದ ದಿನವೇ ನನಗೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ನಾವು ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಪ್ರಧಾನಿಯನ್ನು ಪ್ರತ್ಯೇಕವಾಗಿ ಭೇಟಿ ಮಾಡುತ್ತೀರಾ ಎಂಬ ಪ್ರಶ್ನೆಗೆ, ಪ್ರಧಾನಿ ಸೇರಿದಂತೆ ಪ್ರಮುಖ ಕೇಂದ್ರ ಸಚಿವರುಗಳ ಭೇಟಿಗೆ ಸಮಯ ಕೇಳಿರುವೆ. ಪ್ರಧಾನಮಂತ್ರಿಯವರು ಗುರುವಾರ ಸಮಯ ನೀಡಿದ್ದಾರೆ. ಯಾರೆಲ್ಲಾ ಸಮಯ ನೀಡುತ್ತಾರೋ ಅವರನ್ನು ಭೇಟಿ ಮಾಡುವೆ ಎಂದರು.ಕಾಂಗ್ರೆಸ್‌ ನಾಯಕರ ಭೇಟಿ ಬಗ್ಗೆ ಮಾತನಾಡಿ, ಬುಧವಾರ ನಮ್ಮ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರನ್ನು ಭೇಟಿ ಮಾಡಿದ್ದೇನೆ. ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಹಾಗೂ ಎನ್ಎಸ್ ಯುಐ ಕಚೇರಿಗೆ ಭೇಟಿ ನೀಡಿದ್ದೇನೆ. ಅವರೆಲ್ಲ ನಮ್ಮ ಪಕ್ಷದ ಆಧಾರಸ್ತಂಭಗಳು. ನಾನು ರಾಜಕೀಯವಾಗಿ ಬೆಳೆದಿದ್ದು ಎನ್ಎಸ್ ಯುಐ ಹಾಗೂ ಯುವ ಕಾಂಗ್ರೆಸ್ ಮೂಲಕ ಎಂದರು.

ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಭೇಟಿ ವೇಳೆ ಮಾಡಲಾದ ಚರ್ಚೆ ಬಗ್ಗೆ ಕೇಳಿದಾಗ, ‘ನಾನು ಎಲ್ಲವನ್ನು ಹೇಳಲು ಆಗುವುದಿಲ್ಲ. ನಾನೊಬ್ಬ ಕಾಂಗ್ರೆಸ್ ಕಾರ್ಯಕರ್ತ, ರಾಜ್ಯದ ಮುಖ್ಯಮಂತ್ರಿ. ನಾನು ಏನು ಮಾತನಾಡಬೇಕೋ ಮಾತನಾಡಿದ್ದೇನೆ. ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದು ಹೇಳಿದರು. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಳಿದಾಗ, ಈಗ ಯಾವುದೇ ಚರ್ಚೆ ಇಲ್ಲ ಎಂದರು.ರಾಜ್ಯದ ಪ್ರಗತಿಗೆ ಕೈಜೋಡಿಸಿ ಡಿಕೆಶಿ ಕರೆ:

ನಿಮ್ಮ ಶಕ್ತಿ ಅದಮ್ಯ. ನೀವು ಮನಸ್ಸು ಮಾಡಿದರೆ ಅಭಿವೃದ್ಧಿ ರಥ ಮುನ್ನುಗ್ಗುತ್ತದೆ. ಹೀಗಾಗಿ ಕರ್ನಾಟಕದ ಸರ್ವತೋಮುಖ ಪ್ರಗತಿಗೆ ಕೈಜೋಡಿಸಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳಿಗೆ ಕರೆ ನೀಡಿದರು.ಕರ್ನಾಟಕ ಭವನದಲ್ಲಿ ಅಧಿಕಾರಿಗಳ ಜತೆ ಬುಧವಾರ ರಾತ್ರಿ ಏರ್ಪಡಿಸಿದ್ದ ಔತಣಕೂಟ ಸಂವಾದದಲ್ಲಿ ಅವರು ಈ ಮನವಿ ಮಾಡಿದರು. ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕಾರ ಬಳಿಕ ಇದೇ ಮೊದಲ ಬಾರಿಗೆ ದೆಹಲಿಗೆ ಆಗಮಿಸಿದ್ದ ಶಿವಕುಮಾರ್ ಅವರು ತಮ್ಮನ್ನು ಕರೆದು ಸಭೆ ಮಾಡಿದ್ದಕ್ಕೆ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದರು. ನಿಮ್ಮಲ್ಲಿ ಅಪಾರ ಜ್ಞಾನ ಸಂಪತ್ತಿದೆ. ಸಾಮರ್ಥ್ಯ ಇದೆ. ನಿಮ್ಮಲ್ಲಿರುವ ಆಗಾಧ ಪ್ರತಿಭೆಯನ್ನು ಕರ್ನಾಟಕದ ಪ್ರಗತಿಗೆ ವಿನಿಯೋಗಿಸಿ. ನಿಮಗೆ ಬೇಕಾದ ಸಹಕಾರವನ್ನು ಸರ್ಕಾರ ನೀಡಲಿದೆ ಎಂದು ಸಿಎಂ ತಿಳಿಸಿದರು. ಕೇಂದ್ರ ಸರ್ಕಾರದ ಅನೇಕ ಯೋಜನೆಗಳ ಲಾಭ ರಾಜ್ಯಕ್ಕೆ ದೊರೆಯುವಂತೆ ಮಾಡುವಲ್ಲಿ ನಿಮ್ಮ ಸಹಕಾರ ಬಹು ಮುಖ್ಯ. ಕರ್ನಾಟಕದಲ್ಲಿರುವ ನಿಮ್ಮದೇ ಸಹೋದ್ಯೋಗಿಗಳ ಜತೆ ನಿರಂತರ ಸಂಪರ್ಕ, ಸಮಾಲೋಚನೆ ನಡೆಸಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ. ಬಾಕಿ ಇರುವ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಿ ಎಂದು ಹೇಳಿದರು. ನೀವು 35 ವರ್ಷ ಸೇವೆಯಲ್ಲಿರುತ್ತಿರಿ. ನಾವು ರಾಜಕಾರಣಿಗಳು 5 ವರ್ಷಕ್ಕೊಮ್ಮೆ ಹಗ್ಗಜಗ್ಗಾಟ ನಡೆಸುತ್ತೇವೆ. ಆದರೆ ಒಂದು ಸರ್ಕಾರಕ್ಕೆ ಉತ್ತಮ ಹೆಸರು ತರುವ ಶಕ್ತಿ ನಿಮ್ಮ ಕೈಯಲ್ಲೇ ಇದೆ. ನಾನು ಅಧಿಕಾರಕ್ಕಾಗಿ ಅಧಿಕಾರ ಮಾಡುವವನಲ್ಲ. ಏನಾದರೂ ಸಾಧನೆ ಮಾಡಬೇಕೆಂಬ ಛಲಕ್ಕೆ ಅಧಿಕಾರ ಬಳಸುವವನು. ನಿಮ್ಮ ಸಹಕಾರ ಇದ್ದರೆ ಸಾಧನೆ ಅಸಾಧ್ಯವಲ್ಲ ಎಂದರು. ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ। ಜಿ.ಪರಮೇಶ್ವರ್‌, ಸಚಿವ ಕೃಷ್ಣಬೈರೇಗೌಡ, ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಮುಖ್ಯ ಕಾರ್ಯದರ್ಶಿ ಡಾ। ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಎಲ್‌.ಕೆ.ಅತೀಕ್, ಅಪರ ಮುಖ್ಯ ಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್, ಗೌರವ್ ಗುಪ್ತಾ, ಕಾರ್ಯದರ್ಶಿ ರಾಜೇಂದ್ರ ಚೋಳನ್ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬುಧವಾರ ರಾಜ್ಯ ಸಚಿವ ಸಂಪುಟ ವಿಸ್ತರಣೆ?
ಪಶುವೈದ್ಯ ನೇಮಕ ಅಕ್ರಮದಲ್ಲೂ ಶಿವಶಂಕರಪ್ಪ ಸಾಹುಕಾರ್‌ ಎ-1!