ನನ್ನ ಸ್ಪರ್ಧೆ ಬಗ್ಗೆ ವರಿಷ್ಠರು ತೀರ್ಮಾನಿಸುತ್ತಾರೆ: ನಿಖಿಲ್ ಕುಮಾರಸ್ವಾಮಿ

KannadaprabhaNewsNetwork |  
Published : Nov 19, 2026, 01:45 AM IST
18ಕೆಎಂಎನ್ ಡಿ25 | Kannada Prabha

ಸಾರಾಂಶ

2028ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಿಂದಲೇ ನಾನು ಸ್ಪರ್ಧೆ ಮಾಡಬೇಕು ಎನ್ನುವುದು ಕ್ಷೇತ್ರದ ಜನರ ಅಪೇಕ್ಷೆಯಾಗಿದೆ. ನನ್ನ ಸ್ಪರ್ಧೆ ಬಗ್ಗೆ ಚುನಾವಣೆ ವೇಳೆಗೆ ಪಕ್ಷದ ನಾಯಕರು ಹಾಗೂ ಕ್ಷೇತ್ರದ ಮುಖಂಡರು ಕೈಗೊಳ್ಳುವ ಅಂತಿಮ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ.

ಕನ್ನಡಪ್ರಭ ವಾರ್ತೆ ಮದ್ದೂರು

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎನ್ನುವುದನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬುಧವಾರ ಹೇಳಿದರು.

ತಾಲೂಕಿನ ಗೊರವನಹಳ್ಳಿಯ ಶ್ರೀಮಾರಮ್ಮ ದೇವಿಯ ಪ್ರತಿಷ್ಠಾಪನ ಮಹೋತ್ಸವಕ್ಕೆ ತೆರಳುವ ಮಾರ್ಗ ಮಧ್ಯೆ ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

2028ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಿಂದಲೇ ನಾನು ಸ್ಪರ್ಧೆ ಮಾಡಬೇಕು ಎನ್ನುವುದು ಕ್ಷೇತ್ರದ ಜನರ ಅಪೇಕ್ಷೆಯಾಗಿದೆ. ನನ್ನ ಸ್ಪರ್ಧೆ ಬಗ್ಗೆ ತಾತ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ತಂದೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಚುನಾವಣೆ ವೇಳೆಗೆ ಪಕ್ಷದ ನಾಯಕರು ಹಾಗೂ ಕ್ಷೇತ್ರದ ಮುಖಂಡರು ಕೈಗೊಳ್ಳುವ ಅಂತಿಮ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದರು.

ದೊಡ್ಡ ಕುರುಬರಹಳ್ಳಿಯ ಬಿಸಿಲು ಮಾರಮ್ಮ ನನಗೆ ಪ್ರವೇಶ ಸಹಕರಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ನಿಖಿಲ್ ಕುಮಾರಸ್ವಾಮಿ ಗ್ರಾಮಸ್ಥರು ದುರುದ್ದೇಶ ಪೂರಕವಾಗಿ ನನಗೆ ಪ್ರವೇಶ ನಿರಾಕರಿಸಿಲ್ಲ. ಇದರಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ ಎಂದು ನನಗೆ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಗ್ರಾಮಸ್ಥರು ಕ್ಷಮೆ ಯಾಚಿಸಿದ್ದಾರೆ. ಇದನ್ನು ದೊಡ್ಡದು ಮಾಡುವುದು ಬೇಡ ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ , ಮನ್ಮುಲ್ ನಿರ್ದೇಶಕರಾದ ರಾಮಚಂದ್ರ, ಎಸ್.ಪಿ.ಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಭೀಮೇಶ್ ಮತ್ತಿತರರಿದ್ದರು.

ದೇವಸ್ಥಾನಕ್ಕೆ ನೀಡಿದ್ದ ದೇಣಿಗೆ ಹಣ ಕದ್ದ ಕದೀಮರು

ಮದ್ದೂರು:ತಾಲೂಕಿನ ಗೊರವನಹಳ್ಳಿಯಲ್ಲಿ ಮಂಗಳವಾರ ರಾತ್ರಿ ನಡೆದ ಶ್ರೀಮಾರಮ್ಮ ದೇವಿ ದೇವಾಲಯ ಪ್ರತಿಷ್ಠಾಪನೆ ವೇಳೆ ಟ್ರಸ್ಟ್ ಪದಾಧಿಕಾರಿಯೊಬ್ಬರ ಜೇಬಿನಲ್ಲಿ 1 ಲಕ್ಷ ರು. ದೇಣಿಗೆ ಹಣ ಹಾಗೂ ಭಕ್ತರ ಜೇಬಿನಲ್ಲಿ 56 ಸಾವಿರ ರು. ನಗದನ್ನು ಕದೀಮರು ಅಪಹರಿಸಿರುವ ಘಟನೆ ಜರುಗಿದೆ.

ದೇವಾಲಯದ ಪ್ರತಿಷ್ಠಾಪನೆಗಾಗಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ 1 ಲಕ್ಷ ರು. ಹಣವನ್ನು ಟ್ರಸ್ಟ್‌ನ ಪದಾಧಿಕಾರಿ, ವಕೀಲ ಜಿ.ಎಸ್.ಸಿದ್ದರಾಜುಗೆ ನೀಡಿದ್ದರು. ಅದನ್ನು ತಮ್ಮ ಜೇಬಿಗೆ ಹಾಕಿಕೊಂಡಿದ್ದರು.ಇದನ್ನು ಗಮನಿಸಿದ್ದ ಜೇಬುಗಳ್ಳರು ಈ ಹಣವನ್ನು ಅಪಹರಿಸಿ ಪರಾರಿಯಾಗಿದ್ದಾರೆ. ಜೊತೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಆಗಮಿಸಿದ ವೇಳೆ ಅವರನ್ನು ಸ್ವಾಗತಿಸುವ ವೇಳೆ ಉಂಟಾದ ನೂಕು-ನುಗ್ಗಲಿನಲ್ಲಿ ಗೊರವನಹಳ್ಳಿಯ ಸಿರಿ ಎಂಬುವವರ ಜೇಬಿನಲ್ಲಿ 40 ಸಾವಿರ ರು. ನಗದು, ಮತ್ತೊಬ್ಬರ ಜೇಬಿನಲ್ಲಿ 16 ಸಾವಿರ ರು. ಹಣವನ್ನು ಕಳ್ಳರು ಲೂಟಿ ಮಾಡಿದ್ದಾರೆ.

ಬೆಳಗ್ಗೆ ಈ ವಿಷಯ ತಿಳಿದ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಪದಾಧಿಕಾರಿಗಳನ್ನು ತಮ್ಮ ನಿವಾಸಕ್ಕೆ ಕರೆಸಿ ಮತ್ತೊಮ್ಮೆ 1 ಲಕ್ಷ ರು. ನೀಡಿ ಸಂತೈಸಿ ಕಳುಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ: ಕಿಶೋರ ಯಕ್ಷಗಾನ ಸಂಭ್ರಮಕ್ಕೆ ಚಾಲನೆ
ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಿ